ಕನ್ನಡದ ಪ್ರಸಿದ್ಧ ಲೇಖಕಿ ಬಾನು ಮುಷ್ತಾಕ್ ಅವರಿಗೆ ಪ್ರತಿಷ್ಟಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ

ಬೆಂಗಳೂರು: ಕನ್ನಡದ ಪ್ರಸಿದ್ಧ ಲೇಖಕಿ ಬಾನು ಮುಷ್ತಾಕ್ ಅವರಿಗೆ ಪ್ರತಿಷ್ಟಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿದೆ. ಅವರು ಬರೆದಿದ್ದ ಹಸೀನಾ ಮತ್ತು ಇತರ ಕತೆಗಳು ಕೃತಿಯನ್ನ ದೀಪಾ ಭಸ್ತಿ ಇಂಗ್ಲಿಷ್ ಗೆ ಅನುವಾದ ಮಾಡಿದ್ದರು. ಈ ಕೃತಿ ಈಗ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಪಾತ್ರವಾಗಿದೆ.
ಬೂಕರ್ ಪ್ರಶಸ್ತಿಗೆ ಬಾನು ಮುಷ್ತಾಕ್ ಅವರ ಇಂಗ್ಲಿಷ್ ಅನುವಾದಿತ ಕೃತಿ “ಹಾರ್ಟ್ ಲ್ಯಾಂಪ್” ಶಾರ್ಟ್ ಲಿಸ್ಟ್ ಗೆ ಆಯ್ಕೆಯಾಗಿತ್ತು. ಬೂಕರ್ ಪ್ರಶಸ್ತಿಗಾಗಿ ಲಿಸ್ಟ್ ಆಗಿದ್ದ ಒಟ್ಟು 6 ಕೃತಿಗಳಲ್ಲಿ ಅಂತಿಮವಾಗಿ ಕನ್ನಡದ ಹೆಮ್ಮೆಯ ಲೇಖಕಿ ಬಾನು ಮುಷ್ತಾಕ್ ಅವರ ಕೃತಿ ಪ್ರಶಸ್ತಿಗೆ ಭಾಜನವಾಯಿತು.
ಲಂಡನ್ನಲ್ಲಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ಲೇಖಕಿ ಭಾನು ಮುಷ್ತಾಕ್ ಮತ್ತು ಅನುವಾದಕಿ ದೀಪಾ ಭಸ್ತಿ ಅವರು ಇಬ್ಬರು ಪರಸ್ಪರ ಅಪ್ಪಿಕೊಂಡು ಹರ್ಷ ವ್ಯಕ್ತಪಡಿಸಿದರು. ಕನ್ನಡ ಸಾಹಿತ್ಯಕ್ಕೆ ದೊರೆತ ಮೊದಲ ಬೂಕರ್ ಪ್ರಶಸ್ತಿ ಇದಾಗಿದೆ. ಈ ಪ್ರಶಸ್ತಿಯಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಸಾಹಿತ್ಯಕ್ಕೆ ಮನ್ನಣೆ ಸಿಕ್ಕಂತಾಗಿದೆ.
ಅಂತಾರಾಷ್ಟ್ರೀಯ ಬೂಕರ್ ಸಾಹಿತ್ಯ ಪ್ರಶಸ್ತಿಯು 50 ಸಾವಿರ ಪೌಂಡ್ ನಗದು ಬಹುಮಾನ ಒಳಗೊಂಡಿದೆ. ಈ ಹಣವನ್ನು ಬಾನು ಮುಷ್ತಾಕ್ ಮತ್ತು ಕೃತಿಯನ್ನು ಇಂಗ್ಲಿಷ್ ಗೆ ಅನುವಾದಿಸಿದ ದೀಪಾ ಭಸ್ತಿ ಅವರಿಗೆ ಹಂಚಲಾಗಿದೆ. ಬೂಕರ್ ಪ್ರಶಸ್ತಿಗೆ ಪಾತ್ರವಾಗಿರುವ ಬಾನು ಮುಷ್ತಾಕ್ ಅವರ ಹಸೀನಾ ಮತ್ತು ಇತರ ಕತೆಗಳು ಕಥಾಸಂಕಲನವು ಮುಸ್ಲಿಂ ಸಮುದಾಯದ ಬಾಲಕಿಯರ ಮತ್ತು ಇತರ ಹೆಣ್ಣುಮಕ್ಕಳ ದೈನಂದಿನ ಜೀವನ ಕುರಿತದ್ದಾಗಿದೆ.
ಸಣ್ಣ ಕಥಾ ಸಂಕಲನ ‘ಹಾರ್ಟ್ ಲ್ಯಾಂಪ್’ ಬರಹಕ್ಕಾಗಿ ಲಂಡನ್ ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಂಗಳವಾರ ರಾತ್ರಿ ಲೇಖಕಿ ಮತ್ತು ವಕೀಲೆ ಬಾನು ಮುಷ್ತಾಕ್, ಅನುವಾದಕಿ ದೀಪಾ ಭಸ್ತಿ ಅವರೊಂದಿಗೆ ಪ್ರಶಸ್ತಿಯನ್ನು ಸ್ವೀಕರಿಸಿದರು. ಬಳಿಕ ಮಾತನಾಡಿದ ಮುಷ್ತಾಕ್, ತಮ್ಮ ಗೆಲುವನ್ನು ವೈವಿಧ್ಯತೆಯ ಗೆಲುವು ಎಂದು ಬಣ್ಣಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: