ಅಡ್ಡ ಮತದಾನದ ಆರೋಪ: ಧರ್ಮಸ್ಥಳದಲ್ಲಿ ಬೇಲೂರು ಶಾಸಕ ಹೆಚ್.ಕೆ. ಸುರೇಶ್ ಆಣೆ-ಪ್ರಮಾಣ - Mahanayaka

ಅಡ್ಡ ಮತದಾನದ ಆರೋಪ: ಧರ್ಮಸ್ಥಳದಲ್ಲಿ ಬೇಲೂರು ಶಾಸಕ ಹೆಚ್.ಕೆ. ಸುರೇಶ್ ಆಣೆ–ಪ್ರಮಾಣ

dharmastala.jpg
30/06/2026

ಧರ್ಮಸ್ಥಳ/ಹಾಸನ: ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ (ಕ್ರಾಸ್ ವೋಟಿಂಗ್) ಮಾಡಿದ್ದಾರೆ ಎಂಬ ಆರೋಪವನ್ನು ಬೇಲೂರು ಕ್ಷೇತ್ರದ ಬಿಜೆಪಿ ಶಾಸಕ ಹೆಚ್.ಕೆ. ಸುರೇಶ್ ತೀವ್ರವಾಗಿ ನಿರಾಕರಿಸಿದ್ದಾರೆ. ಈ ಕುರಿತಾದ ಸುಳ್ಳು ಸುದ್ದಿಗಳಿಗೆ ಮತ್ತು ಅಪಪ್ರಚಾರಕ್ಕೆ ಪೂರ್ಣವಿರಾಮ ಇಡಲು ಅವರು ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಸ್ವಾಮಿ ಸನ್ನಿಧಿಯಲ್ಲಿ ದೇವರ ಸಾಕ್ಷಿಯಾಗಿ ಆಣೆ-ಪ್ರಮಾಣ ಮಾಡಿದ್ದಾರೆ.

ಶಾಸಕ ಹೆಚ್.ಕೆ. ಸುರೇಶ್ ಅವರು ತಮ್ಮ ಬೆಂಬಲಿಗರು ಹಾಗೂ ಪಕ್ಷದ ಪ್ರಮುಖ ಕಾರ್ಯಕರ್ತರೊಂದಿಗೆ ಮೊದಲು ಬೇಲೂರಿನ ಐತಿಹಾಸಿಕ ಶ್ರೀ ಚೆನ್ನಕೇಶವಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಅಲ್ಲಿನ ಬಲಿಪೀಠವನ್ನು ಮುಟ್ಟಿ, “ನಾನು ಪಕ್ಷಕ್ಕೆ ಯಾವುದೇ ದ್ರೋಹ ಮಾಡಿಲ್ಲ, ಅಡ್ಡ ಮತದಾನ ಮಾಡಿಲ್ಲ” ಎಂದು ಮೂರು ಬಾರಿ ಪ್ರಮಾಣ ಮಾಡಿದರು. ತದನಂತರ ಅಲ್ಲಿಂದ ನೇರವಾಗಿ ಧರ್ಮಸ್ಥಳಕ್ಕೆ ತೆರಳಿ, ಶ್ರೀ ಅಣ್ಣಪ್ಪ ಸ್ವಾಮಿ ಹಾಗೂ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಆಣೆ ಮಾಡಿದರು.

ಧರ್ಮಸ್ಥಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು, “ಕೆಲವು ದೃಶ್ಯ ಮಾಧ್ಯಮಗಳಲ್ಲಿ ನಾನು ಅಡ್ಡ ಮತದಾನ ಮಾಡಿದ್ದೇನೆ ಎಂಬ ತಪ್ಪು ಸುದ್ದಿ ಬಿತ್ತರಿಸಲಾಗಿತ್ತು. ಇದರಿಂದ ನನಗೆ ಮತ್ತು ನನ್ನ ಕ್ಷೇತ್ರದ ಜನರಿಗೆ ತೀವ್ರ ಬೇಸರವಾಗಿದೆ. ನಾನು ಆರಂಭದಿಂದಲೂ ಸಂಘ ಪರಿವಾರದ ಹಿನ್ನೆಲೆಯಿಂದ ಬಂದವನು ಮತ್ತು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನನ್ನ ಪಕ್ಷದ ಅಧ್ಯಕ್ಷರು ಹಾಗೂ ವಿರೋಧ ಪಕ್ಷದ ನಾಯಕರು ಸೂಚಿಸಿದ ಅಧಿಕೃತ ಅಭ್ಯರ್ಥಿಗೇ ನಾನು ಮತ ಚಲಾಯಿಸಿದ್ದೇನೆ. ಇದಕ್ಕೆ ಆ ಮಂಜುನಾಥ ಸ್ವಾಮಿಯೇ ಸಾಕ್ಷಿ,” ಎಂದು ಸ್ಪಷ್ಟಪಡಿಸಿದರು.

ತಮ್ಮ ರಾಜಕೀಯ ಬೆಳವಣಿಗೆಯನ್ನು ಸಹಿಸದ ವಿರೋಧಿಗಳು ಈ ದೊಡ್ಡ ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದ ಸುರೇಶ್, “ಪ್ರಧಾನಿ ನರೇಂದ್ರ ಮೋದಿ ಅವರೇ ಖುದ್ದಾಗಿ ನನಗಾಗಿ ಬೇಲೂರು ಕ್ಷೇತ್ರದಲ್ಲಿ ಬಂದು ಪ್ರಚಾರ ಮಾಡಿದ್ದರು. ಅಂತಹ ನಾಯಕನಿಗೆ ಮತ್ತು ಪಕ್ಷಕ್ಕೆ ನಾನು ದ್ರೋಹ ಬಗೆದರೆ ದೇವರು ನನ್ನನ್ನು ಎಂದಿಗೂ ಕ್ಷಮಿಸುವುದಿಲ್ಲ,” ಎಂದರು.

ತಾವು ಜೂನ್ 19 ರಂದೇ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಹಿರಿಯ ನಾಯಕರಿಗೆ ಪತ್ರ ಬರೆದು ತಮ್ಮ ನಿಷ್ಠೆಯನ್ನು ತಿಳಿಸಿರುವುದಾಗಿ ಶಾಸಕರು ಹೇಳಿದ್ದಾರೆ. ಅಡ್ಡ ಮತದಾನದ ವಿವಾದಕ್ಕೆ ಪೂರ್ಣವಿರಾಮ ಇಡಲು ಮತ್ತು ಸತ್ಯವನ್ನು ಹೊರತರಲು ಬಿಜೆಪಿಯ ಎಲ್ಲಾ 64 ಶಾಸಕರಿಗೂ ಮಂಪರು ಪರೀಕ್ಷೆ (Narco-analysis test) ಮಾಡಿಸಲಿ ಎಂದು ಅವರು ಇದೇ ವೇಳೆ ಪಕ್ಷದ ಮುಖಂಡರಿಗೆ ಸವಾಲು ಹಾಕಿದರು.


Provided by
Provided by

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

 

ಇತ್ತೀಚಿನ ಸುದ್ದಿ