ಬಿಜೆಪಿಯವರು ಊಟ ಹಾಕಿ ಹಂಗಿಸುವ ಜನ: ಶಾಸಕ ಶಿವಲಿಂಗೇಗೌಡ ಆಕ್ರೋಶ - Mahanayaka

ಬಿಜೆಪಿಯವರು ಊಟ ಹಾಕಿ ಹಂಗಿಸುವ ಜನ: ಶಾಸಕ ಶಿವಲಿಂಗೇಗೌಡ ಆಕ್ರೋಶ

shivalingegowda
31/03/2026

ದಾವಣಗೆರೆ: “ಬಿಜೆಪಿಯವರು ಯಾರಿಗಾದರೂ ಊಟ ಹಾಕಿ ಮತ್ತೆ ಅದನ್ನೇ ಎತ್ತಿ ತೋರಿಸಿ ಹಂಗಿಸುವ ಗುಣದವರು. ಇವರಿಗೆ ಮಾನ ಮರ್ಯಾದೆ ಏನಾದರೂ ಇದೆಯೇ?” ಎಂದು ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.

ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇರಳದಲ್ಲಿ ನಡೆದ ಪ್ರಕೃತಿಕ ವಿಕೋಪದ ಸಂದರ್ಭದಲ್ಲಿ ರಾಜ್ಯದಿಂದ ನೀಡಿದ ನೆರವಿನ ಕುರಿತು ಬಿಜೆಪಿ ಮಾಡುತ್ತಿರುವ ಟೀಕೆಗಳಿಗೆ ಕಡಕ್ ಉತ್ತರ ನೀಡಿದರು. “ಕೇರಳದಲ್ಲಿ ಪ್ರವಾಹ ಬಂದು ಜನರು ಅತಂತ್ರ ಸ್ಥಿತಿಯಲ್ಲಿದ್ದಾಗ, ಪಕ್ಕದ ರಾಜ್ಯವಾಗಿ ನಾವು ಮಾನವೀಯತೆಯ ದೃಷ್ಟಿಯಿಂದ ನೆರವಿಗೆ ಹೋಗಿದ್ದೆವು. ಸಂಕಷ್ಟದಲ್ಲಿದ್ದಾಗ ಸಹಾಯ ಮಾಡುವುದು ನಮ್ಮ ಕರ್ತವ್ಯ. ಆದರೆ ಮಾಡಿದ್ದ ಸಹಾಯವನ್ನು ಪದೇ ಪದೇ ಹೇಳಿಕೊಂಡು ಹಂಗಿಸುವುದು ಬಿಜೆಪಿಯವರ ಚಾಳಿಯಾಗಿದೆ. ಬಿಜೆಪಿಯವರು ಊಟಕ್ಕಿಕ್ಕಿ ಹಂಗಿಸುವ ಜನ, ಇವರಿಗೆ ಸ್ವಲ್ಪವೂ ನಾಚಿಕೆ ಇರಬೇಕು, ಗೌರವದಿಂದ ಮಾತನಾಡಬೇಕು” ಎಂದು ಕಿಡಿಕಾರಿದರು.

ಬಿಜೆಪಿಯ ರಾಜಕಾರಣದ ಬಗ್ಗೆ ಮಾತನಾಡಿದ ಅವರು, “ಇದು ಜಾತ್ಯತೀತ ರಾಷ್ಟ್ರ, ಇಲ್ಲಿ ಎಲ್ಲರೂ ಒಂದಾಗಿ ಬಾಳಬೇಕು. ಆದರೆ ಬಿಜೆಪಿಯವರು ಸದಾ ಪಾಕಿಸ್ತಾನದ ಬಗ್ಗೆ ಮಾತನಾಡುತ್ತಾ, ಒಂದು ವರ್ಗವನ್ನು ಗುರಿಯಾಗಿಸಿಕೊಂಡು ರಾಜಕೀಯ ಮಾಡುತ್ತಾರೆ. ಇಂತಹ ಒಡೆದು ಆಳುವ ನೀತಿ ಸರಿಯಲ್ಲ. ಮತದಾರರು ಬಹಳ ಬುದ್ಧಿವಂತರಾಗಿದ್ದು, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನೂರಕ್ಕೆ ನೂರರಷ್ಟು ಗೆಲ್ಲುವುದು ನಿಶ್ಚಿತ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಂಬರುವ ಎರಡು ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಭಾರಿ ಬಹುಮತದೊಂದಿಗೆ ಜಯಗಳಿಸಲಿದೆ. ಇದಕ್ಕಾಗಿ ಈಗಾಗಲೇ ಸುದೀರ್ಘವಾಗಿ ಚರ್ಚಿಸಿ ಕಾರ್ಯತಂತ್ರಗಳನ್ನು ರೂಪಿಸಲಾಗಿದೆ. ಬಿಜೆಪಿಯನ್ನು ಸೋಲಿಸಲು ನಾವು ಹೆಣೆದಿರುವ ತಂತ್ರಗಾರಿಕೆ ಏನೆಂಬುದು ಮೇ 3ರಂದು ಫಲಿತಾಂಶ ಬಂದಾಗ ಎಲ್ಲರಿಗೂ ತಿಳಿಯಲಿದೆ ಎಂದು ಅವರು ಸವಾಲು ಹಾಕಿದರು.

ಕಾಂಗ್ರೆಸ್‌ ನಲ್ಲಿ ಕುಟುಂಬ ರಾಜಕಾರಣ ನಡೆಯುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಶಿವಲಿಂಗೇಗೌಡರು, “ಪಕ್ಷದಲ್ಲಿ ಯಾವುದೇ ಕುಟುಂಬ ರಾಜಕಾರಣವಿಲ್ಲ. ಸಾಂಪ್ರದಾಯಿಕವಾಗಿ ಯಾರಾದರೂ ನಿಧನರಾದಾಗ ಅವರ ಕುಟುಂಬದ ಸೂಕ್ತ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಪರಿಪಾಠ ಹಿಂದಿನಿಂದಲೂ ನಡೆದು ಬಂದಿದೆ. ಅದರಂತೆ ಈ ಬಾರಿಯೂ ಅರ್ಹರಿಗೆ ಟಿಕೆಟ್ ನೀಡಲಾಗಿದೆ” ಎಂದು ಸ್ಪಷ್ಟಪಡಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ