ತಾಳ್ಮೆ ಕಳೆದುಕೊಂಡ ಅನ್ನದಾತ | ಬಿಜೆಪಿ ಕಚೇರಿ ಮೇಲೆ ರೈತರಿಂದ ದಾಳಿ
ಚಂಡೀಗಢ: ಕೇಂದ್ರ ಸರ್ಕಾರ ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ನಾನಾ ಪ್ರಯತ್ನಗಳನ್ನು ನಡೆಸುತ್ತಿರುವ ನಡುವೆಯೇ ಕೆರಳಿದ ರೈತರು ಪಂಜಾಬ್ ನ ಬಟಿಂಡಾದಲ್ಲಿ ಬಿಜೆಪಿ ಕಚೇರಿಯ ಮೇಲೆ ದಾಳಿ ನಡೆಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಪ್ರತಿಭಟನಾ ನಿರತ ರೈತರು ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ನುಗ್ಗಿ ದಾಂಧಲೆ ನಡೆಸಿ ಕುರ್ಚಿಗಳನ್ನು ಮುರಿದು ಹಾಕಿ ಎಲ್ ಇಡಿ ಟಿವಿಯನ್ನು ಒಡೆದು ಹಾಕಿ ಕಲ್ಲು ತೂರಾಟ ನಡೆಸಿದ್ದಾರೆ.
ಘಟನೆಯಿಂದ ಬಟಿಂಡ ಬಿಜೆಪಿ ಮುಖ್ಯಸ್ಥ ವಿನೋದ್ ಗುಪ್ತ ಮತ್ತು ರಾಜ್ಯ ಬಿಜೆಪಿ ಕಾನೂನು ಘಟಕದ ಸಹ ಸಂಚಾಲಕ ರವೀಂದರ್ ಗುಪ್ತ ಸೇರಿದಂತೆ 5 ಜನ ಪಕ್ಷದ ಕಾರ್ಯಕರ್ತರಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಘಟನೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ರೈತರು ದಾಳಿ ನಡೆಸಿದಾಗ ಬಿಜೆಪಿ ಕಾರ್ಯಕರ್ತರು ದಿಕ್ಕಾಪಾಲಾಗಿ ಓಡಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಪೊಲೀಸರು ಗುಂಪು ಚದುರಿಸಿದ್ದಾರೆ.
ಕೇಂದ್ರ ಸರ್ಕಾರವು ರೈತರ ತಾಳ್ಮೆ ಪರೀಕ್ಷೆ ನಡೆಸುತ್ತಿದೆ. ಇದರಿಂದಾಗಿ ರೈತರು ತಾಳ್ಮೆ ಕಳೆದುಕೊಂಡಿದ್ದಾರೆ. ರೈತರ ಸಮಸ್ಯೆಯ ಬಗ್ಗೆ ತಲೆಕೆಡಿಸಿಕೊಳ್ಳದೇ ರೈತರಿಗೇ ಬುದ್ಧಿ ಹೇಳಲು ಕೇಂದ್ರ ಸರ್ಕಾರ ಮುಂದಾಗಿದೆ. ಇನ್ನೊಂದೆಡೆಯಲ್ಲಿ ರೈತರು ಕೊರೆಯುವ ಚಳಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಜೆಪಿ ರೈತರು ಖಲಿಸ್ತಾನಿಗಳು ಎಂಬಂತ ಹೇಳಿಕೆಗಳನ್ನು ನೀಡಿ ರೈತರ ಹೋರಾಟದ ಬಗ್ಗೆ ಅಪಪ್ರಚಾರ ನಡೆಸುತ್ತಿದೆ. ಇದರಿಂದಾಗಿ ರೈತರು ತೀವ್ರವಾಗಿ ಆಕ್ರೋಶಿತರಾಗಿದ್ದಾರೆ. ಇದರ ಪರಿಣಾಮವಾಗಿಯೇ ಪಂಜಾಬ್ ನಲ್ಲಿ ಬಿಜೆಪಿ ಕಚೇರಿಯ ಮೇಲೆಯೇ ರೈತರು ದಾಳಿ ನಡೆಸಿ ತಮ್ಮ ಆಕ್ರೋಶ ತೋರಿಸಿದ್ದಾರೆ ಎಂದು ಹೇಳಲಾಗಿದೆ.