ಪ್ರತಿಯೊಂದರ ಸ್ವಭಾವ ಅರಿತು ಜೀವಿಸಬೇಕು | ಗೌತಮ ಬುದ್ಧ - Mahanayaka

ಪ್ರತಿಯೊಂದರ ಸ್ವಭಾವ ಅರಿತು ಜೀವಿಸಬೇಕು | ಗೌತಮ ಬುದ್ಧ

10/11/2020

ಗೌತಮ ಬುದ್ಧರು ಸಾರಿಪುತ್ತನೊಡನೆ ಕಿರಿದಾಗಿರುವ ಓಣಿಯೊಂದರಲ್ಲಿ ನಡೆಯುತ್ತಿರುತ್ತಾರೆ. ಆ ಸಂದರ್ಭದಲ್ಲಿ ನಾಯಿಯೊಂದು ಅವರ ಎದುರಿನಿಂದ ಬರುತ್ತದೆ. ಬುದ್ಧರು, ದಾರಿಯಿಂದ ಪಕ್ಕಕ್ಕೆ ಸರಿದು, ನಾಯಿಗೆ ಹೋಗಲು ದಾರಿ ಬಿಡುತ್ತಾರೆ.

ಬುದ್ಧರು ನಾಯಿಗೆ ದಾರಿ ಬಿಡುವ ಮೂಲಕ ಇಷ್ಟೊಂದು ವಿನಯವನ್ನು ತೋರಿಸಿದ್ದಕ್ಕೆ ಸಾರಿಪುತ್ತನು, ನಿಮ್ಮ ಸರಳತೆ ನನಗೆ ಬಹಳ ಇಷ್ಟವಾಯಿತು ಎಂದು ಕೊಂಡಾಡಿದನು.  ಆಗ ಬುದ್ಧರು, ನಕ್ಕರು, ಮತ್ತು ಸಾರಿಪುತ್ತನಿಗೆ ತಾನೇಕೆ ನಾಯಿಗೆ ದಾರಿ ಬಿಟ್ಟೆ ಎನ್ನುವುದನ್ನು ಈ ರೀತಿಯಾಗಿ ಒಗಟಲ್ಲಿ ಹೇಳುತ್ತಾರೆ, “ ಇರಲಿ,  ನಾನು ನಾಯಿಯನ್ನು ಗೌರವಿಸುವುದಕ್ಕಿಂತಲೂ ಅದರ ಸ್ವಭಾವವನ್ನು ಬಲ್ಲವನಾಗಿದ್ದೇನೆ. ಹಾಗಾಗಿ ನಾನು ಅದನ್ನು ಮುಂದೆ ಹೋಗಲು ಬಿಟ್ಟೆ. ಹಾಗೆಯೇ ನಾವು ಪ್ರತಿಯೊಂದರಲ್ಲೂ ಸ್ವಭಾವವನ್ನು ಅರಿತುಕೊಂಡು ಜೀವಿಸಬೇಕು ಎಂದು ಹೇಳಿದರು.

ನಾಯಿ ಎಂದಾದರೂ ನಿಮಗೆ ಎದುರಾದರೆ, ನೀವು ಅದರ ತಂಟೆಗೆ ಹೋದರೆ ಮಾತ್ರವೇ ಅದು ತಿರುಗಿ ಬೀಳುತ್ತದೆ. ನಿಮ್ಮ ಪಾಡಿಗೆ ನೀವು ಹೋದರೆ, ಅದರ ಪಾಡಿಗೆ ಅದು ಹೋಗುತ್ತದೆ. ಕೆಲವು ನಾಯಿಯಂತೂ ಒಂದು ಬಾರಿ ಒಬ್ಬ ಮನುಷ್ಯ ನೋಯಿಸಿದನೆಂದರೆ, ಮರು ದಿನವೂ ಆತ ಬರುವಾಗ ಆತನ ಮೇಲೆ ಪ್ರತಿಕಾರ ತೀರಿಸಲು ಕಾಯುತ್ತಿರುತ್ತದೆ. ನಾಯಿಯ ಸ್ವಭಾವವೇ ಹಾಗೆ ಅದು ತನ್ನಷ್ಟಕ್ಕೆ ತಾನಿರುತ್ತದೆ. ಅದನ್ನು ಕೆಣಕಲು ಹೋದರೆ ಮಾತ್ರವೇ ಅದು ತಿರುಗಿ ಬೀಳುತ್ತದೆ. ಬುದ್ಧರು ನಾಯಿಯ ಸ್ವಭಾವವನ್ನು ಅರಿತಿದ್ದಾರೆ ಎಂದು ಹೇಳುತ್ತಾರೆ. ಹಾಗೆಯೇ, ಪ್ರಪಂಚದಲ್ಲಿರುವ ಎಲ್ಲ ಜೀವಿ, ವಸ್ತುಗಳ ಸ್ವಭಾವವನ್ನು ಅರಿತು ನಾವು ಬದುಕಬೇಕು.

ಉದಾಹರಣೆಗೆ, ಬೆಂಕಿ ಸುಡುತ್ತದೆ, ಅದು ಅದರ ಸ್ವಭಾವ. ಕ್ರೂರ ಪ್ರಾಣಿಗಳು ಮನುಷ್ಯನ ಮೇಲೆ ದಾಳಿ ಮಾಡುತ್ತದೆ. ಅದು ಅದರ ಸ್ವಭಾವ, ಹಾಗೆಯೇ ಮನುಷ್ಯ ಕೂಡ ಹಲವು ಸ್ವಭಾವಗಳನ್ನು ಹೊಂದಿದ್ದಾನೆ. ನಿಮ್ಮ ಸ್ನೇಹಿತನ ಸ್ವಭಾವ ಅರಿತು ಆತನ ಜೊತೆಗೆ ನೀವು ವ್ಯವಹರಿಸಿದರೆ, ನಿಮ್ಮ ಸ್ನೇಹ ಉಳಿಯುತ್ತದೆ. ನಿಮ್ಮ ಜೊತೆಗಾರರ ಸ್ವಭಾವ ಅರಿತು, ಅವರ ಜೊತೆಗೆ ನೀವು ಬೆರೆತರೆ, ನಿಮ್ಮ ಸಂಬಂಧಗಳು ಉಳಿಯುತ್ತವೆ. ಅನಗತ್ಯವಾಗಿ ಘರ್ಷಣೆ ಮಾಡಿಕೊಳ್ಳುವುದು ತಪ್ಪುತ್ತದೆ.

ಇತ್ತೀಚಿನ ಸುದ್ದಿ