ಪಿತೃ ಪಕ್ಷದ ಊಟಕ್ಕೆ ಹೋಗಲು ಪೊಲೀಸ್ ಜೀಪ್ ಕರೆಸಿಕೊಂಡ ಭೂಪ: ವ್ಯಕ್ತಿಯ ಕಿತಾಪತಿಗೆ ಪೊಲೀಸರು ಸುಸ್ತು! - Mahanayaka

ಪಿತೃ ಪಕ್ಷದ ಊಟಕ್ಕೆ ಹೋಗಲು ಪೊಲೀಸ್ ಜೀಪ್ ಕರೆಸಿಕೊಂಡ ಭೂಪ: ವ್ಯಕ್ತಿಯ ಕಿತಾಪತಿಗೆ ಪೊಲೀಸರು ಸುಸ್ತು!

112 police
27/09/2024

ಕೊಟ್ಟಿಗೆಹಾರ: ಅವನು ಪಿತೃ ಪಕ್ಷದ ಹಿನ್ನೆಲೆ ಮಾವನ ಮನೆಗೆ ಹೊರಟಿದ್ದ, ರಸ್ತೆ ಬದಿ ಎಷ್ಟು ಕಾದರೂ ಯಾವುದೇ ಬಸ್ ಗಳು ಸಿಗಲಿಲ್ಲ. ಇನ್ನೇನು ಮಾಡುವುದು ಅಂತ ಯೋಚಿಸಿದಾಗ ಆತನಿಗೆ ನೆನಪಾಗಿದ್ದು ಪೊಲೀಸರು… ಮುಂದೇನು ಆಯ್ತ…  ಓದಿ…!

112 ತುರ್ತು ಸಹಾಯವಾಣಿ ಸಂಖ್ಯೆಗೆ ಕರೆಯೊಂದು ಬರುತ್ತದೆ.  “ಸರ್ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದಲ್ಲಿ ಗಲಾಟೆಯಾಗುತ್ತಿದೆ, ಅರ್ಜೆಂಟ್ ಆಗಿ ಬನ್ನಿ ಅಂತ. ಕರೆಯ ಹಿನ್ನೆಲೆ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದಾರೆ. ಆದ್ರೆ, ಸ್ಥಳದಲ್ಲಿ ಯಾರು ಕೂಡ ಗಲಾಟೆ ಮಾಡುವುದು ಕಾಣಲಿಲ್ಲ. ನೋಡಿದ್ರೆ, ವ್ಯಕ್ತಿಯೊಬ್ಬ ಅಲ್ಲಿ ಕಾಯ್ತಾ ಇದ್ದ. ಪೊಲೀಸರು ವಿಚಾರಿಸಿದ ವೇಳೆ ಕರೆ ಮಾಡಿದ ವ್ಯಕ್ತಿ ಆತನೇ ಆಗಿದ್ದ.

ಪೊಲೀಸರಿಗೆ ಶಾಕ್:

ಗಲಾಟೆ ನಡೆಯುತ್ತಿದೆ ಬೇಗ ಬನ್ನಿ ಸರ್ ಎಂದು ಪೊಲೀಸರನ್ನು ಕರೆಸಿಕೊಂಡಿದ್ದ ವ್ಯಕ್ತಿ, ಪೊಲೀಸರು ಬಂದಾಗ ಹೇಳಿದ್ದೇ ಬೇರೆ, “ಸರ್ ಯಾವುದೇ ಗಾಡಿ ಬರ್ತಾ ಇಲ್ಲ, ಮಳೆ ಕೂಡ ಬರ್ತಿದೆ. ಫಲ್ಗುಣಿ ಗ್ರಾಮಕ್ಕೆ ದಯವಿಟ್ಟು ಡ್ರಾಪ್ ಕೊಡಿ” ಎಂದು ಪೊಲೀಸರ ಬಳಿ ಆ ವ್ಯಕ್ತಿ ಹೇಳಿಕೊಂಡಿದ್ದಾರೆ.

ವ್ಯಕ್ತಿ ತನ್ನ ಹೆಸರು ತರುವೆ ಗ್ರಾಮದ ಅಶೋಕ್ ಎಂದು ಹೇಳಿಕೊಂಡಿದ್ದಾರೆ.  ಅಶೋಕ್ ನ ಮಾತು ಕೇಳಿ ಪೊಲೀಸರಿಗೆ ಈತನಿಗೆ ಬೈಯ್ಯ ಬೇಕೋ, ನಗಬೇಕೋ ಎನ್ನುವುದು ತಿಳಿಯದಂತಾಗಿತ್ತು. ಕೊನೆಗೆ ಪೊಲೀಸರು ಅಶೋಕ್ ಗೆ ಬುದ್ಧಿವಾದ ಹೇಳಿದ್ದಾರೆ.

ಮಾವನ ಮನೆಗೆ ಕೊನೆಗೂ ತೆರಳಿದ ಅಶೋಕ್:

ಅಶೋಕ್ ಗೆ ಬುದ್ಧಿವಾದ ಹೇಳಿದ ಪೊಲೀಸರು ಕೊನೆಗೆ ಲಾರಿಯೊಂದನ್ನು ಅಡ್ಡ ಹಾಕಿ, ಆತನಿಗೆ ಡ್ರಾಪ್ ಕೊಡುವಂತೆ ಲಾರಿ ಚಾಲಕನಿಗೆ ಮನವಿ ಮಾಡಿ, ಕಳುಹಿಸಿಕೊಟ್ಟರು.  ಅಂತೂ ಇಂತೂ ಪಿತೃ ಪಕ್ಷದ ಊಟಕ್ಕೆ ಅಶೋಕ್ ಮಾವನ ಮನೆಗೆ ತಲುಪಿದರು.

112 ದುರ್ಬಳಕೆ ಸರಿಯಲ್ಲ!

112  ತುರ್ತು ಸಹಾಯವಾಣಿ ಇರುವುದು, ತುರ್ತು ಸಂದರ್ಭಗಳಲ್ಲಿ ಸಹಾಯ ಕೇಳಲು. ಆದ್ರೆ, ಡ್ರಾಪ್ ಕೊಡಿ ಎಂದೆಲ್ಲ ಸುಖಾಸುಮ್ಮನೆ ತುರ್ತು ಸಹಾಯವಾಣಿಯನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಅದೇ ಸಂದರ್ಭದಲ್ಲಿ ಬೇರೆ ಎಲ್ಲಾದರೂ ತುರ್ತು ಸಂದರ್ಭಗಳಿದ್ದರೆ, ಪೊಲೀಸರಿಗೆ ಇದರಿಂದ ತೊಂದರೆಯಾಗುತ್ತದೆ.

ಪೊಲೀಸ್ ವ್ಯವಸ್ಥೆ ಜನಸ್ನೇಹಿ ಹೌದು. ಆದರೆ ನಮ್ಮ ವೈಯಕ್ತಿಕ ಕೆಲಸಗಳಿಗೆ ಅವುಗಳನ್ನು ಬಳಸಿಕೊಳ್ಳುವಂತಿಲ್ಲ.  112 ಅಪಾಯಕಾರಿ ಸನ್ನಿವೇಶದಲ್ಲಿರುವವರಿಗೆ ಬಳಕೆಯಾಗಬೇಕು. ಗಲಾಟೆ ನಡೆಯುತ್ತಿದೆ ಎಂದು ಕರೆದು ಡ್ರಾಪ್ ಕೇಳುವುದು ಎಷ್ಟೊಂದು ಸರಿ ಎನ್ನುವುದನ್ನು ನಾಗರಿಕರು ಅರ್ಥಮಾಡಿಕೊಳ್ಳಬೇಕಿದೆ


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ