ಎಸ್‍ ಸಿ, ಎಸ್‍ ಟಿ , ಅಲ್ಪಸಂಖ್ಯಾತರ ವಿದ್ಯಾರ್ಥಿವೇತನಕ್ಕೆ ಕತ್ತರಿ: ಬಿಜೆಪಿ ಸರ್ಕಾರವನ್ನು ತರಾಟೆಗೆತ್ತಿಕೊಂಡ ಸಿದ್ದರಾಮಯ್ಯ - Mahanayaka

ಎಸ್‍ ಸಿ, ಎಸ್‍ ಟಿ , ಅಲ್ಪಸಂಖ್ಯಾತರ ವಿದ್ಯಾರ್ಥಿವೇತನಕ್ಕೆ ಕತ್ತರಿ: ಬಿಜೆಪಿ ಸರ್ಕಾರವನ್ನು ತರಾಟೆಗೆತ್ತಿಕೊಂಡ ಸಿದ್ದರಾಮಯ್ಯ

siddaramaiha
01/12/2022

ಎಸ್‍ ಸಿ/ಎಸ್‍ಟಿ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಮೆಟ್ರಿಕ್‍ಪೂರ್ವ ವಿದ್ಯಾರ್ಥಿಗಳ ವಿದ್ಯಾರ್ಥಿವೇತನವನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮ ಖಂಡನೀಯ. ಸರ್ಕಾರ ತನ್ನ ಈ ನಿರ್ಧಾರವನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗಗಳು, ಮಹಿಳೆಯರು ಮತ್ತು ಅಲ್ಪಸಂಖ್ಯಾತರನ್ನು ತುಳಿದು ಆಳಬೇಕು ಎಂಬ ಬಿಜೆಪಿಯ ಅಜೆಂಡ ನಿಧಾನಕ್ಕೆ ಕಾರ್ಯಗತವಾಗುತ್ತಿದೆ. ನಾನು ಕಳೆದ ಕೆಲವು ವರ್ಷಗಳಿಂದ ಗಮನಿಸಿದಂತೆ ಮೋದಿಯವರ ಬಾಯಲ್ಲಿ ಹೇಳಿಸಿದ ಘೋಷಣೆಗಳಿಗೆ ವಿರುದ್ಧ ದಿಕ್ಕಿನಲ್ಲಿ ಸತ್ಯ ಹುದುಗಿರುತ್ತದೆ.

ಬಿಜೆಪಿಯವರು ಸಬ್ ಕಾ ವಿಕಾಸ್ ಎಂದರೆ ಅದು ದಲಿತ, ಹಿಂದುಳಿದವರು, ಮಹಿಳೆಯರು, ಅಲ್ಪಸಂಖ್ಯಾತರ ದಮನ ಎಂದು ಅರ್ಥ. ಬಹುಸಂಖ್ಯಾತರ ವಿನಾಶದ ಯೋಜನೆಗಳನ್ನು ರೂಪಿಸುವಾಗ ಸರ್ವರ ವಿಕಾಸ ಎಂದು ಸುಳ್ಳು ಹೇಳುತ್ತಾರೆ ಎಂದು ಅವರು ತರಾಟೆಗೆತ್ತಿಕೊಂಡಿದ್ದಾರೆ.

ನಮ್ಮಲ್ಲಿ ಹೈಸ್ಕೂಲಿಗೆ ದಾಖಲಾಗುವವರ ಪ್ರಮಾಣ ಶೇ.75 ರಷ್ಟಿದೆ. ಅಂದರೆ ಶೇ.25 ರಷ್ಟು ಮಕ್ಕಳು ಶಾಲಾಶಿಕ್ಷಣದಿಂದ ಹೊರಗಿದ್ದಾರೆ ಎಂದರ್ಥ. ಮಕ್ಕಳಿಗೆ ಬಿಸಿಯೂಟ, ಸಮವಸ್ತ್ರ, ಶೂ, ಕೆನೆ ಭರಿತ ಹಾಲು, ಸೈಕಲ್ ಹೀಗೆ ವಿವಿಧ ಸೌಲಭ್ಯ ನೀಡಿ ಶಾಲೆಗೆ ಕರೆತಂದು ವಿದ್ಯಾಭ್ಯಾಸ ನೀಡಿ ದಮನಿತರ ಮಕ್ಕಳು ಉದ್ಧಾರವಾಗಲಿ ಎಂಬ ಉದ್ದೇಶದಿಂದ ಈ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲಾಗಿತ್ತು.  ಜೊತೆಯಲ್ಲಿ ಮಕ್ಕಳಿಗೆ ವಿದ್ಯಾರ್ಥಿ ವೇತನದ ವ್ಯವಸ್ಥೆಯೂ ಇತ್ತು.  ಈ ವಿದ್ಯಾರ್ಥಿ ವೇತನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ವಿದ್ಯಾರ್ಥಿವೇತನಕ್ಕೆ ತಗುಲುವ ವೆಚ್ಚವನ್ನು ಶೇ. 75-25 ಪ್ರಮಾಣದಲ್ಲಿ ಹಂಚಿಕೊಳ್ಳುವುದು ಇಲ್ಲಿಯವರೆಗೂ ನಡೆದುಕೊಂಡು ಬಂದಿತ್ತು. ಆದರೆ ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಈಗ ಏಕಾಏಕಿ ಒಂದರಿಂದ ಎಂಟನೇ ತರಗತಿವರೆಗಿನ ಬಡ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ರದ್ದುಗೊಳಿಸಿ ಆದೇಶ ಹೊರಡಿಸಿರುವುದು ದಲಿತ- ಆದಿವಾಸಿ- ಹಿಂದುಳಿದ- ಅಲ್ಪಸಂಖ್ಯಾತ ವಿರೋಧಿ ಸಂವಿಧಾನ ದ್ರೋಹಿ ಕೃತ್ಯವಾಗಿದೆ ಎಂದು ಅವರು ತರಾಟೆಗೆತ್ತಿಕೊಂಡಿದ್ದಾರೆ.

ವಾರ್ಷಿಕ 2.5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ದಮನಿತ ವರ್ಗಗಳ ಮಕ್ಕಳಿಗೆ ತಿಂಗಳಿಗೆ ತಲಾ 225ರೂ, ಹಾಸ್ಟೆಲ್‍ನಲ್ಲಿರುವ ವಿದ್ಯಾರ್ಥಿಗಳಿಗೆ ತಲಾ 525ರೂ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿತ್ತು. ಪುಸ್ತಕ, ಪೆನ್ನು ಇತ್ಯಾದಿ ಶಿಕ್ಷಣ ಸಂಬಂಧಿತ ಉಪಕರಣಗಳನ್ನು ಖರೀದಿಸಲು ನೀಡುವ ನೆರವು ಇದು. ವಿದ್ಯಾರ್ಥಿಗಳಿಗೆ ತಲಾ 750 ರಿಂದ 1000ರೂ ಮಾತ್ರ ವಿದ್ಯಾರ್ಥಿವೇತನದ ರೂಪದಲ್ಲಿ ನೀಡಲಾಗುತ್ತಿತ್ತು. ಕಾರ್ಪೋರೇಟ್ ವಂಚಕರ ಸಹಸ್ರಾರು ಕೋಟಿ ಸಾಲದ ಹಣವನ್ನು ಕ್ಷಣ ಮಾತ್ರದಲ್ಲಿ ಮಾಫಿ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಅತ್ಯಂತ ಸಣ್ಣ ಪ್ರಮಾಣದ ವಿದ್ಯಾರ್ಥಿವೇತನ ಸ್ಥಗಿತಗೊಳಿಸಿರುವುದರ ಹಿಂದೆ ಮನುಸ್ಮೃತಿ ಪ್ರೇರಿತ ತಾರತಮ್ಯ ಸಿದ್ಧಾಂತವನ್ನು ಜಾರಿ ಮಾಡುವ ಮನಸ್ಥಿತಿ ಕೆಲಸ ಮಾಡುತ್ತಿದೆ ಎಂದು ಅವರು ಟೀಕಿಸಿದ್ದಾರೆ.

ಕೇಂದ್ರ ಸರ್ಕಾರದ ಈ ಹೊಣೆಗೇಡಿತನದ ನಿರ್ಧಾರದಿಂದಾಗಿ ಸ್ಕಾಲರ್‍ಶಿಪ್‍ಗೆ ಅರ್ಜಿ ಸಲ್ಲಿಸಿರುವ ಲಕ್ಷಾಂತರ ಮಕ್ಕಳು ಅನ್ಯಾಯಕ್ಕೆ ಒಳಗಾಗಲಿದ್ದಾರೆ. ದೇಶದಲ್ಲಿ ಸದ್ಯ 14.89 ಲಕ್ಷ ಶಾಲೆಗಳಿದ್ದು ಇದರಲ್ಲಿ 10.22 ಲಕ್ಷ ಸರ್ಕಾರಿ ಶಾಲೆಗಳು. ಈ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಸಂಖ್ಯೆ 22.56 ಕೋಟಿ. ಆರ್ಥಿಕ ಮಾನದಂಡದ ಪ್ರಕಾರ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಶೇ.90ಕ್ಕೂ ಹೆಚ್ಚು ಪ್ರಮಾಣದ ಮಕ್ಕಳು ಆರ್ಥಿಕವಾಗಿ ಹಿಂದುಳಿದವರು. ಹೀಗಾಗಿ ಇವರೆಲ್ಲರೂ ವಿದ್ಯಾರ್ಥಿವೇತನಕ್ಕೆ ಅರ್ಹರಾಗಿದ್ದರು. ಮೋದಿ ಸರ್ಕಾರ ಈ ಮಕ್ಕಳ ಶಿಕ್ಷಣದ ಮೇಲೆ ಪ್ರಹಾರ ನಡೆಸಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏಕಾ ಏಕಿ ವಿದ್ಯಾರ್ಥಿವೇತನ ನಿಲ್ಲಿಸುವುದರಿಂದ ಶಾಲೆಗಳ ದಾಖಲಾತಿ ಪ್ರಮಾಣ ಕಡಿಮೆಯಾಗುತ್ತದೆ. ಪೋಷಕರ ಮೇಲೆ ಅವಲಂಬಿತರಾಗದೆ ವಿದ್ಯಾರ್ಥಿವೇತನದಿಂದ ಅಗತ್ಯ ಶೈಕ್ಷಣಿಕ ಸಾಮಗ್ರಿಗಳನ್ನು ಖರೀದಿಸುತ್ತಿದ್ದ ಮಕ್ಕಳು ಈಗ ಪೋಷಕರ ಮೇಲೆ ಅವಲಂಬಿತರಾಗುವ ಅನಿವಾರ್ಯತೆಯನ್ನು ಸೃಷ್ಟಿಸುತ್ತಿದೆ. ಈಗಾಗಲೇ ಮೋದಿ ಅವರ ಸರ್ಕಾರ ಪೆನ್ನು, ಪೆನ್ಸಿಲ್, ಬರವಣಿಗೆ ಪುಸ್ತಕ, ಡ್ರಾಯಿಂಗ್ ಶೀಟ್ ಸೇರಿ ಎಲ್ಲದರ ಮೇಲೂ ಜಿಎಸ್‍ಟಿ ವಿಧಿಸಿದೆ.  ಒಂದು ಕಡೆ ಕೇಂದ್ರ ಸರ್ಕಾರ ಕೇವಲ ಶೇ.3 ರಷ್ಟು ಜನಸಂಖ್ಯೆ ಹೊಂದಿರುವ ಜಾತಿ ಸಮುದಾಯದ ಮಂದಿಯ ವಾರ್ಷಿಕ ಆದಾಯ 8 ಲಕ್ಷ ರೂ ಇದ್ದರೂ ಅವರನ್ನು ಆರ್ಥಿಕವಾಗಿ ಹಿಂದುಳಿದವರು ಎಂದು ತೀರ್ಮಾನಿಸಿ ಶೇ.10 ರಷ್ಟು ಮೀಸಲಾತಿ ಕೊಡಲು ಸಂಭ್ರಮಿಸುತ್ತಿದೆ. ಮತ್ತೊಂದು ಕಡೆ ವಾರ್ಷಿಕ 2 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಶೇ.95 ರಷ್ಟು ಜನಸಂಖ್ಯೆ ಇರುವ ಜನ ಸಮುದಾಯದ ಬಡ ಮಕ್ಕಳ ವಿದ್ಯಾರ್ಥಿವೇತನವನ್ನು ನಿಲ್ಲಿಸಿಬಿಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆದರೆ, ಈ ದೇಶದ ಶೇ.50ರಷ್ಟಿರುವ ರೈತ ಕುಟುಂಬಗಳ ಸರಾಸರಿ ಆದಾಯ ವಾರ್ಷಿಕವಾಗಿ 1 ಲಕ್ಷ ರೂಗಳಿಗಿಂತ ಕಡಿಮೆ ಎಂದು ಮೋದಿ ಸರ್ಕಾರದ ದಾಖಲೆಗಳೆ ಹೇಳುತ್ತವೆ. ಇನ್ನು ಕೂಲಿ ಕಾರ್ಮಿಕ ಸಮುದಾಯದ ಆದಾಯ ಕೇಳುವುದೇ ಬೇಡ. ಹೀಗಿದ್ದರೂ ವಾರ್ಷಿಕ 8 ಲಕ್ಷ ಆದಾಯ ಇರುವ ಶೇ.3 ಜನಸಂಖ್ಯೆಯ ಮಂದಿ ಮಾತ್ರ ಮೋದಿ ಮತ್ತು ಬಿಜೆಪಿಗರ ಕಣ್ಣಿಗೆ ಬಡವರಾಗಿ ಕಾಣುತ್ತಿದ್ದಾರೆ. ಸಾಲದ್ದಕ್ಕೆ ಇ.ಡಬ್ಲ್ಯು.ಎಸ್ ಕೋಟಾದ ಮಕ್ಕಳಿಗೆ ಮಾತ್ರ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕಂಪನಿಗಳೂ ಸೇರಿದಂತೆ ಹಲವು ಖಾಸಗಿ ಕಂಪನಿಗಳು ಸಿಎಸ್‍ಆರ್ ನಿಧಿಯಡಿ ಹತ್ತಾರು ಕೋಟಿ ದೇಣಿಗೆ ನೀಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಹೀಗಾಗಿ ಬಿಜೆಪಿಗೆ ಕೇವಲ ಶೇ.3 ರಷ್ಟು ಜನಸಂಖ್ಯೆ ಇರುವ ಜನರ ಬಗ್ಗೆ ಮಾತ್ರ ಕಾಳಜಿ.

ಎರಡು ವರ್ಷಗಳಿಂದ ವಿದ್ಯಾರ್ಥಿವೇತನ ನೀಡದೆ ಸತಾಯಿಸುತ್ತಿದ್ದ ಸರ್ಕಾರ ಈಗ ರದ್ದು ಮಾಡಿದೆ. ರಾಜ್ಯದಲ್ಲಿ 15 ಜಿಲ್ಲೆಗಳ ಮಕ್ಕಳಿಗೆ ಸಮವಸ್ತ್ರ ಕೊಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಕಳಪೆ ಶೂ ಸಾಕ್ಸ್ ವಿತರಿಸಿದೆ. ಮಕ್ಕಳಿಂದಲೇ ತಿಂಗಳಿಗೆ 100ರೂ ವಸೂಲಿ ಮಾಡುವ ಹುನ್ನಾರಕ್ಕೂ ಕೈ ಹಾಕಿದ್ದ ರಾಜ್ಯ ಸರ್ಕಾರ ಸಾರ್ವಜನಿಕರ ಛೀಮಾರಿ ಬಳಿಕ ತಾತ್ಕಾಲಿಕವಾಗಿ ನಿಲ್ಲಿಸಿದೆ ಎಂದರು.

ಸೈಕಲ್‍ ಗಳನ್ನು ವಿತರಿಸದ ಕಾರಣದಿಂದ 10 ಕಿಮೀ ದೂರದವರೆಗೂ ನಡೆದು ಬರುವ ಕೊಡಗು-ಮಲೆನಾಡು ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಅದರಲ್ಲೂ ಹೆಚ್ಚಿನ ಪ್ರಮಾಣದ ಹೆಣ್ಣು ಮಕ್ಕಳು ಶಿಕ್ಷಣ ಮೊಟಕುಗೊಳಿಸಿರುವ ಬಗ್ಗೆ ಸಮೀಕ್ಷೆಗಳು ಬರುತ್ತಿವೆ.

ಆದ್ದರಿಂದ ಮೋದಿಯವರ ಸರ್ಕಾರ ವಿದ್ಯಾರ್ಥಿ ವೇತನವನ್ನು ಸ್ಥಗಿತಗೊಳಿಸದೆ ಅದನ್ನು ಇನ್ನಷ್ಟು ಹೆಚ್ಚಿಸಬೇಕು. ಮೋದಿ ಸರ್ಕಾರದ ಈ ಶೂದ್ರ ವಿರೋಧಿ ನಿಲುವನ್ನು ರಾಜ್ಯ ಸರ್ಕಾರ ಹಾಗೂ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಸಚಿವರುಗಳು, ಮುಖ್ಯವಾಗಿ ಕೇಂದ್ರದ ಸಮಾಜ ಕಲ್ಯಾಣ ಸಚಿವ ಶ್ರೀ ನಾರಾಯಣಸ್ವಾಮಿಯವರು ದಿಟ್ಟವಾದ ಧ್ವನಿ ಎತ್ತಿ ವಿದ್ಯಾರ್ಥಿ ವಿರೋಧಿ ನಿಲುವು ತೆಗೆದುಕೊಳ್ಳವುದಿಲ್ಲ ಎಂದು ಘೋಷಿಸಬೇಕು. ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ಈ ನಿರ್ಧಾರ ಹಿಂಪಡೆಯುವಂತೆ ಆಗ್ರಹಿಸಬೇಕೆಂದು ಒತ್ತಾಯಿಸುತ್ತೇನೆ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

Disclaimer:

www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.

ಇತ್ತೀಚಿನ ಸುದ್ದಿ