ಸಿಬಿಐ ಪಂಜರದ ಗಿಳಿಯಾಗಿರಬಾರದು: ಸುಪ್ರೀಂ ಕೋರ್ಟ್
ಸಿಬಿಐ ಪಂಜರದ ಗಿಳಿಯಾಗಿರಬಾರದು. ‘ಪಂಜರದ ಗಿಳಿ’ ಎಂದು ಜನಸಾಮಾನ್ಯರಲ್ಲಿ ಸೃಷ್ಟಿಯಾಗಿರುವ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ ವರ್ತಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಸಿಬಿಐ ರಾಜಕೀಯ ಒತ್ತಡದಲ್ಲಿ ಕೆಲಸ ಮಾಡುತ್ತಿದೆ ಎನ್ನುವ ಆರೋಪನ್ನು ಉಲ್ಲೇಖಿಸಿ ನ್ಯಾಯಮೂರ್ತಿ ಉಜ್ಜಲ್ ಭುಯನ್ ಹೀಗೆ ನುಡಿದಿದ್ದಾರೆ.
‘ಸಿಬಿಐ ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕು. ತಪ್ಪಾದ ನೋಟದಿಂದಲೂ ದೂರವಿರಬೇಕು’ಎಂದು ಹೇಳಿದ್ದಾರೆ.
ಅಬಕಾರಿ ನೀತಿ ಹಗರಣದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ತನ್ನನ್ನು ಬಂಧಿಸಿದ ಕ್ರಮವನ್ನು ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯ ತೀರ್ಪು ಪ್ರಕಟಿಸುವ ವೇಳೆ ನ್ಯಾಯಮೂರ್ತಿ ಭುಯನ್ ಈ ಅಭಿಪ್ರಾಯಗಳನ್ನು ದಾಖಲಿಸಿದರು.
‘ಬಂಧನ ಪ‍್ರಕ್ರಿಯೆಯು ತೊಂದರೆ ಕೊಡುವಂತಿರಬಾರದು. ಈ ಪ್ರಕರಣದಲ್ಲಿ ಸಿಬಿಐನ ನಡವಳಿಕೆ ಸರಿಯಾದ ಕ್ರಮವಲ್ಲ’ ಎಂದೂ ಅವರು ಅಭಿಪ್ರಾಯಪಟ್ಟರು.
‘ಬಂಧನ ಪ್ರಕ್ರಿಯೆಯು ಗೌರವಯುತವಾಗಿರಬೇಕು. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಜನರ ಅಭಿಪ್ರಾಯ ಮುಖ್ಯವಾಗಿರುತ್ತದೆ. ತನ್ನ ಸ್ವಾತಂತ್ರ್ಯ ಹಾಗೂ ನಿಷ್ಠೆಯು ತನಿಖಾ ಸಂಸ್ಥೆಯ ಕೆಲಸದಲ್ಲಿ ಪ್ರತಿಫಲಿಸಬೇಕು’ ಎಂದು ಹೇಳಿದ್ದಾರೆ.
ಈ ಹಿಂದೆ ಸಿಬಿಐ ಅನ್ನು ಪಂಜರದ ಗಿಳಿಗೆ ಹೋಲಿಸಿ ಈ ನ್ಯಾಯಾಲಯವು ದೂಷಿಸಿದೆ. ತಾನು ಪಂಜರದ ಗಿಳಿ ಎಂಬ ಕಲ್ಪನೆಯನ್ನು ಹೋಗಲಾಡಿಸುವುದು ಸಿಬಿಐಗೆ ಅನಿವಾರ್ಯವಾಗಿದೆ. ಸಿಬಿಐ ಪಂಜರವಿಲ್ಲದ ಗಿಳಿಯಾಗಿರಬೇಕು’ ಎಂದು ಕಿವಿ ಹಿಂಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth