ಟಿಕೆಟ್ ಕೊಡಿಸುವುದಾಗಿ ವಂಚನೆ ಆರೋಪ: ಸಚಿವ ಪ್ರಹ್ಲಾದ್ ಜೋಶಿ ಸಹೋದರನ ವಿರುದ್ಧ ದೂರು - Mahanayaka

ಟಿಕೆಟ್ ಕೊಡಿಸುವುದಾಗಿ ವಂಚನೆ ಆರೋಪ: ಸಚಿವ ಪ್ರಹ್ಲಾದ್ ಜೋಶಿ ಸಹೋದರನ ವಿರುದ್ಧ ದೂರು

prahlad joshi
18/10/2024

ಬೆಂಗಳೂರು: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರ ಸಹೋದರ ಗೋಪಾಲ್‌ ಜೋಶಿ ಅವರ ವಿರುದ್ಧ ಬಸವೇಶ್ವರನಗರ ಪೊಲೀಸ್‌ ಠಾಣೆಯಲ್ಲಿ ವಂಚನೆ ಪ್ರಕರಣ  ದಾಖಲಾಗಿದೆ ಎಂದು ವರದಿಯಾಗಿದೆ.

ವಿಜಯಪುರ ಲೋಕಸಭಾ ಕ್ಷೇತ್ರದ ಟಿಕೆಟ್‌ ಕೊಡಿಸುವುದಾಗಿ ನಂಬಿಸಿ 2 ಕೋಟಿ ರೂ. ಪಡೆದು ಗೋಪಾಲ್‌ ಜೋಶಿ ವಂಚಿಸಿದ್ದಾರೆ ಎಂದು ಆರೋಪಿಸಿ ಸುನಿತಾ ಚೌಹಾಣ್‌ ಎಂಬವರು ದೂರು ನೀಡಿದ್ದಾರೆ.

ನನ್ನ ಪತಿ ದೇವಾನಂದ್‌ ಫುಲ್‌ಸಿಂಗ್‌ ಅವರು 2018 ರ ವಿಧಾನಸಭಾ ಚುನಾವಣೆಯಲ್ಲಿ ವಿಜಯಪುರ ಜಿಲ್ಲೆಯ ನಾಗಠಾಣಾ ಕ್ಷೇತ್ರದಿಂದ ಗೆದ್ದು ಶಾಸಕರಾಗಿದ್ದರು. ನಂತರ 2023 ರ ಚುನಾವಣೆಯಲ್ಲಿ ಸೋತಿದ್ದರು. 2024ರ ಲೋಕಸಭಾ ಚುನಾವಣೆಯಲ್ಲಿ ಪತಿಗೆ ವಿಜಯಪುರ ಕ್ಷೇತ್ರದಲ್ಲಿ ಬಿಜೆಪಿಯ ಟಿಕೆಟ್‌ ಕೊಡಿಸುವುದಾಗಿ ಹೇಳಿ ಗೋಪಾಲ್‌ ಜೋಶಿ ಅವರು 25 ಲಕ್ಷ ರೂ. ಹಾಗೂ 5 ಕೋಟಿ ರೂ.ಗಳ ಚೆಕ್‌ ಅನ್ನು ಮುಂಗಡವಾಗಿ ಪಡೆದಿದ್ದರು ಎಂದು ಸುನಿತಾ ಚೌಹಾಣ್‌ ದೂರಿನಲ್ಲಿ ಹೇಳಿದ್ದಾರೆ.

ಅಥಣಿಯಲ್ಲಿಎಂಜಿನಿಯರ್‌ ಆಗಿದ್ದ ಶೇಖರ್‌ ನಾಯಕ್‌ ಎಂಬುವರ ಮೂಲಕ ಗೋಪಾಲ್‌ ಜೋಶಿ ಅವರ ಪರಿಚಯವಾಗಿತ್ತು. ಗೋಪಾಲ್‌ ಜೋಶಿ ಅವರು ಸೂಚಿಸಿದಂತೆ ಬೆಂಗಳೂರಿನ ಬಸವೇಶ್ವರ ನಗರದಲ್ಲಿನ ಅವರ ಸಹೋದರಿ ವಿಜಯಲಕ್ಷ್ಮಿ ಅವರ ಮನೆಗೆ ಹಣ ಹಾಗೂ ಚೆಕ್‌ ತೆಗೆದುಕೊಂಡು ಹೋಗಿ ಕೊಟ್ಟಿದ್ದೆವು. ಆಗ ಸಹೋದರಿಯ ಮನೆಯಲ್ಲೇ ಇದ್ದ ಗೋಪಾಲ್‌ ಜೋಶಿ, ಕೇಂದ್ರ ಸಚಿವ ಅಮಿತ್‌ ಷಾ ಅವರ ಆಪ್ತ ಸಹಾಯಕರಿಗೆ ಕರೆ ಮಾಡಿ ಮಾತನಾಡಿದಂತೆ ನಟಿಸಿದ್ದರು. ಅಲ್ಲದೆ, ತಮ್ಮ ಪತಿಗೆ ಬಿಜೆಪಿ ಟಿಕೆಟ್‌ ಖಚಿತವಾಗಿರುವುದಾಗಿ ಹೇಳಿ ಹಂತ ಹಂತವಾಗಿ 2 ಕೋಟಿ ರೂ. ಪಡೆದು ಮೋಸ ಮಾಡಿದ್ದಾರೆ ಎಂದು ಸುನಿತಾ ಅವರು ಆರೋಪಿಸಿದ್ದಾರೆ.

ಈ ಸಂಬಂಧ  ಗೋಪಾಲ್‌ ಜೋಶಿ, ಅವರ ಪುತ್ರ ಅಜಯ್‌ ಜೋಶಿ ಹಾಗೂ ವಿಜಯಲಕ್ಷ್ಮಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ