ರೈಲಿನಲ್ಲಿ ನಾಲ್ವರು ಕ್ರೈಸ್ತ ಸನ್ಯಾಸಿನಿಯರ ಮೇಲೆ ಬಜರಂಗದಳ ದಾಳಿ - Mahanayaka
8:56 PM Thursday 14 - November 2024

ರೈಲಿನಲ್ಲಿ ನಾಲ್ವರು ಕ್ರೈಸ್ತ ಸನ್ಯಾಸಿನಿಯರ ಮೇಲೆ ಬಜರಂಗದಳ ದಾಳಿ

the vigilant catholic
22/03/2021

ಉತ್ತರಪ್ರದೇಶ:  ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕ್ರೈಸ್ತ ಸನ್ಯಾಸಿನಿಗಳ ಮೇಲೆ ಬಜರಂಗದಳದ ಕಾರ್ಯಕರ್ತರು ದಾಳಿ ನಡೆಸಿದ ಘಟನೆ ನಡೆದಿದ್ದು, ದೆಹಲಿ ಪ್ರಾಂತ್ಯದ ಸೇಕ್ರೆಡ್ ಹಾರ್ಟ್ ಸೊಸೈಟಿಯ ನಾಲ್ಕು ಸನ್ಯಾಸಿಗಳು ದೆಹಲಿಯಿಂದ ಒಡಿಶಾಗೆ ತೆರಳುತ್ತಿದ್ದಾಗ ಉತ್ತರ ಪ್ರದೇಶದ ಝಾನ್ಸಿಯಲ್ಲಿ ಈ ಘಟನೆ ನಡೆದಿದೆ.

ರಜಾದಿನಗಳ ಹಿನ್ನೆಲೆಯಲ್ಲಿ 19 ವರ್ಷ ವಯಸ್ಸಿನ ಕ್ರೈಸ್ತ ಸನ್ಯಾಸಿನಿಯರು  ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಸಂಜೆ 6:30ರ ವೇಳೆಗೆ ಝಾನ್ಸಿಗೆ ರೈಲು ತಲುಪಿದ್ದು, ಈ ವೇಳೆ ಬಜರಂಗದಳದ ಕಾರ್ಯಕರ್ತರು ರೈಲು ಹತ್ತಿದ್ದಾರೆ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸನ್ಯಾಸಿನಿಯರ ಪೈಕಿ ಇಬ್ಬರು ಸನ್ಯಾಸಿನಿಯರ ಉಡುಪಿನಲ್ಲಿದ್ದು, ಇನ್ನಿಬ್ಬರು ಸರಳ ಉಡುಪು ಧರಿಸಿದ್ದರು.  ಕ್ರೈಸ್ತ ಸನ್ಯಾಸಿನಿಯರನ್ನು ನೋಡುತ್ತಿದ್ದಂತೆಯೇ ಗಲಾಟೆ ಆರಂಭಿಸಿದ ಬಜರಂಗದಳದ ಕಾರ್ಯಕರ್ತರು, “ನೀವು ಇಬ್ಬರು ಯುವತಿಯರನ್ನು ಮತಾಂತರ ಮಾಡಲು ಕರೆದುಕೊಂಡು ಹೋಗುತ್ತಿದ್ದೀರಿ” ಎಂದು ಸನ್ಯಾಸಿನಿಯರ ಜೊತೆಗೆ ಗಲಾಟೆ ಮಾಡಲು ಆರಂಭಿಸಿದ್ದಾರೆ.

ಬಜರಂಗದಳ ಕಾರ್ಯಕರ್ತರು ಗಲಾಟೆ ನಡೆಸಿ, ಕ್ರೈಸ್ತ ಸನ್ಯಾಸಿನಿಯರ ನಂಬಿಕೆಗಳನ್ನು ಪ್ರಶ್ನಿಸಿದ್ದಾರೆ. ಬಳಿಕ ಜೈಶ್ರೀರಾಮ್ ಮತ್ತು ಜೈ ಹನುಮಾನ ನಿಜವಾದ ದೇವರು ಎಂದು ಘೋಷಣೆ ಕೂಗಿದ್ದಾರೆ. ಸರಳ ಉಡುಪಿನಲ್ಲಿದ್ದ ಕ್ರೈಸ್ತ ಸನ್ಯಾಸಿನಿಯರ ಬಳಿಯಲ್ಲಿ, “ನಿಮ್ಮನ್ನು ಮತಾಂತರ ಮಾಡಲು ಕರೆದುಕೊಂಡು ಹೋಗಲಾಗುತ್ತಿದೆ” ಎಂದು ಪದೇ ಪದೇ ಹಿಂಸಿಸಿದ್ದಾರೆ. ಈ ವೇಳೆ ಸನ್ಯಾಸಿನಿಯೊಬ್ಬರು ದೆಹಲಿ ಪ್ರಾಂತೀಯ ಸದನವನ್ನು ಸಂಪರ್ಕಿಸಲು ಕರೆ ಮಾಡಿದ್ದು, ಈ ವೇಳೆ ಲೌಡ್ ಸ್ಪೀಕರ್ ಆನ್ ಆಗಿದ್ದರಿಂದಾಗಿ ಅಲ್ಲಿದ್ದ ಬಜರಂಗದಳದವರು ಸನ್ಯಾಸಿನಿಯರ ಮೇಲೆ ಇನ್ನಷ್ಟು ತೊಂದರೆ ನೀಡಲು ಆರಂಭಿಸಿದ್ದಾರೆ. ಬಳಿಕ ಪೊಲೀಸರಿಗೆ ಫೋನ್ ಮಾಡಿದ್ದಾರೆ.

ಸ್ಥಳಕ್ಕೆ ಉತ್ತರಪ್ರದೇಶ ಪೊಲೀಸರು ಬಂದಿದ್ದು, ಈ ವೇಳೆ “ಮತಾಂತರ ಕಾಯ್ದೆಯನ್ನು ಉಲ್ಲಂಘಿಸಿ ಇವರು ಮತಾಂತರ ಮಾಡುತ್ತಿದ್ದಾರೆ” ಎಂದು ದಾಳಿಕೋರರು ದೂರಿದ್ದಾರೆ. ಆದರೆ ಇದೇ ವೇಳೆ ಕ್ರೈಸ್ತ ಸನ್ಯಾಸಿನಿಯರು, ತಾವು ರಜಾದಿನದ ಪ್ರಯುಕ್ತ ಹೊರಡುತ್ತಿದ್ದೇವೆ ಎಂದು ಹೇಳಿದ್ದು, ಇದನ್ನು ಪೊಲೀಸರು ಕಿವಿಗೆ ಹಾಕಿಕೊಳ್ಳಲೇ ಇಲ್ಲ. ತಮ್ಮ ಆಧಾರ್ ಕಾರ್ಡ್ ಗಳನ್ನು ಕೂಡ ತೋರಿಸಿ, ನಾವು ಕ್ರೈಸ್ತರು ಎಂದು ಸನ್ಯಾಸಿನಿಯರು ಹೇಳಿದ್ದು, ಈ ವೇಳೆ ಇದು ನಕಲಿ ಆಧಾರ್ ಕಾರ್ಡ್ ಎಂದು ಪೊಲೀಸರು ಹೇಳಿದ್ದಾರೆ. ಜೊತೆಗೆ ರೈಲಿನಿಂದ ಇಳಿದು ಪೊಲೀಸ್ ಠಾಣೆಗೆ ಬರುವಂತೆ ಪೊಲೀಸರು ಹೇಳಿದ್ದಾರೆ. ಆದರೆ ಅವರ ಜೊತೆಗೆ ಮಹಿಳಾ ಪೊಲೀಸರು ಇರಲಿಲ್ಲ. ಹಾಗಾಗಿ ಮಹಿಳಾ ಪೊಲೀಸರ ಜೊತೆಗೆ ಮಾತ್ರವೇ ನಾವು ಬರುತ್ತೇವೆ ಎಂದು ಸನ್ಯಾಸಿನಿಯರ ಹೇಳಿದ್ದು, ಈ ವೇಳೆ ಪೊಲೀಸರು ಅವರ ಮಾತುಗಳನ್ನು ಲೆಕ್ಕಕ್ಕೇ ತೆಗೆದುಕೊಳ್ಳದೇ ರೈಲಿನಿಂದ ಬಲವಂತವಾಗಿ ಕರೆದುಕೊಂಡು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.




ನಾಲ್ಕು ಸನ್ಯಾಸಿನಿಯರನ್ನು ರೈಲಿನಿಂದ ಹೊರಗೆ ಕರೆದೊಯ್ಯುವಾಗ ಸುಮಾರು 150ಕ್ಕೂ ಅಧಿಕ ಬಜರಂಗದಳದ ಕಾರ್ಯಕರ್ತರು ಜೈಶ್ರೀರಾಮ್ ಘೋಷಣೆ ಕೂಗಿದರು. ಬಳಿಕ ರೈಲು ನಿಲ್ದಾಣದಿಂದ ಪೊಲೀಸ್ ಠಾಣೆಗೆ ಮೆರವಣಿಗೆಯಂತೆ ಸನ್ಯಾಸಿನಿಯರನ್ನು ಕರೆದೊಯ್ಯಲಾಗಿದೆ. ಈ ಸಮಯದಲ್ಲಿ ದೊಡ್ಡ ಜನರ ಗುಂಪುಗಳು ಉಗ್ರಗಾಮಿಗಳಂತೆ ಘೋಷಣೆ ಕೂಗಿದ್ದಾರೆ. ಬಳಿಕ ಮಹಿಳಾ ಅಧಿಕಾರಿಗಳನ್ನು ಕರೆತಂದು ಸನ್ಯಾಸಿಯರನ್ನು ರೈಲ್ವೇ ಪೊಲೀಸ್ ಠಾಣೆಯಿಂದ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಇತ್ತ ದೆಹಲಿಯ ಕ್ರೈಸ್ತ ಸನ್ಯಾಸಿನಿಯರು, ಈ ಸನ್ಯಾಸಿನಿಯರಿಗೆ ಏನಾಗಿದೆ ಎಂದು ತಿಳಿದು ಕೊಳ್ಳಲು ಕರೆ ಮಾಡುತ್ತಲೇ ಇದ್ದರು. ಆದರೆ, ದಾಳಿಕೋರರು ಹಾಗೂ ಪೊಲೀಸರು ಕರೆ ಸ್ವೀಕರಿಸಲು ಅವಕಾಶವೇ ನೀಡುತ್ತಿರಲಿಲ್ಲ.  ಇದರಿಂದಾಗಿ ದೆಹಲಿಯಲ್ಲಿರುವ ಕ್ರೈಸ್ತ ಸನ್ಯಾಸಿನಿಯರು ಆತಂಕಕ್ಕೊಳಗಾಗಿದ್ದಾರೆ.

ಕ್ರೈಸ್ತ ಸನ್ಯಾಸಿನಿಯರನ್ನು ಪೊಲೀಸ್ ಠಾಣೆಗೆ ಕರೆತರುತ್ತಿದ್ದಂತೆಯೇ ನೂರಾರು ಬಜರಂಗದಳದ ಕಾರ್ಯಕರ್ತರು ಘೋಷಣೆ ಕೂಗುತ್ತಾ ಭಯೋತ್ಪಾದನಾ ವಾತಾವರಣ ಸೃಷ್ಟಿಸಿದ್ದಾರೆ. ಈ ಪ್ರದೇಶದಲ್ಲಿ  ಪೊಲೀಸರು ಬಜರಂಗದಳದ ಕಾರ್ಯಕರ್ತರು ಹೇಳಿದಂತೆ ಕೇಳುವ ಆಳುಗಳಂತೆ ಕಂಡು ಬಂದರು.

ಇತ್ತ ದೆಹಲಿ ಸನ್ಯಾಸಿನಿಯರು ಸಮಯಪ್ರಜ್ಞೆ ಮರೆದು, ಝಾನ್ಸಿಯಲ್ಲಿರುವ ಬಿಷಪ್ ಹೌಸ್ ಮತ್ತು ಲಕ್ನೋ ಐಜಿ ಹಾಗೂ ದೆಹಲಿಯಲ್ಲಿರುವ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಓರ್ವ ಅನುಭವಿ ವಕೀಲರ ಮೂಲಕ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ತಿಳಿದ ಸ್ವಲ್ಪ ಸಮಯದ ಬಳಿಕ ಐಜಿಯ ಸೂಚನೆಯ ಮೇರೆಗೆ ಉನ್ನತ ಪೊಲೀಸ್ ಅಧಿಕಾರಿಗಳು ಹಾಗೂ ಚರ್ಚ್ ನ ಪಾದ್ರಿಗಳು ಸ್ಥಳಕ್ಕೆ ಆಗಮಿಸಿದ್ದು, ಬಳಿಕ ರಾತ್ರಿ 11:30ರ ವೇಳೆಗೆ ಕ್ರೈಸ್ತ ಸನ್ಯಾಸಿನಿಯರನ್ನು ಪೊಲೀಸ್ ಠಾಣೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಕ್ರೈಸ್ತ ಸನ್ಯಾಸಿನಿಗಳು ತಿಳಿಸಿದ್ದಾರೆಂದು ಮಲಯಾಳಂ ಮಾಧ್ಯಮಗಳು ವರದಿ ಮಾಡಿವೆ. ಈ ಸಂಬಂಧ ಹಲವು ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಇತ್ತೀಚಿನ ಸುದ್ದಿ