ದರ್ಶನ್ ಮ್ಯಾನೇಜರ್  ಆಗಿದ್ದ ಮಲ್ಲಿಕಾರ್ಜುನ್ ಹಲವು ವರ್ಷಗಳಿಂದ ನಾಪತ್ತೆ!: ಆತ ಎಲ್ಲಿದ್ದಾನೆ? - Mahanayaka

ದರ್ಶನ್ ಮ್ಯಾನೇಜರ್  ಆಗಿದ್ದ ಮಲ್ಲಿಕಾರ್ಜುನ್ ಹಲವು ವರ್ಷಗಳಿಂದ ನಾಪತ್ತೆ!: ಆತ ಎಲ್ಲಿದ್ದಾನೆ?

actor darshan
14/06/2024

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗುತ್ತಿದ್ದಂತೆ ದರ್ಶನ್ ಅವರ ಹಳೆಯ ವಿಚಾರಗಳು ಇದೀಗ ಹೊರಬರುತ್ತಿದ್ದು, ಇದೀಗ  ದರ್ಶನ್ ಅವರ ಮ್ಯಾನೇಜರ್ ಆಗಿದ್ದ ಮಲ್ಲಿಕಾರ್ಜುನ ಸ್ವಾಮಿಯ ನಾಪತ್ತೆ  ಕೂಡ ಹಲವು ಅನುಮಾನಗಳನ್ನು ಸೃಷ್ಟಿಸಿದೆ.


Provided by

ಕಳೆದ ಏಳು ವರ್ಷಗಳಿಂದ ದರ್ಶನ್ ಅವರ ಮ್ಯಾನೇಜರ್ ಮಲ್ಲಿಕಾರ್ಜುನ ಸ್ವಾಮಿ ನಾಪತ್ತೆಯಾಗಿದ್ದು,  ಹಲವು ಮಾಧ್ಯಮಗಳು ಈ ಘಟನೆಯನ್ನು ಕೆದಕಿದ್ದು, ಹಲವು ಅನುಮಾನಗಳನ್ನು ವ್ಯಕ್ತಪಡಿಸಿದೆ.

ಮಲ್ಲಿಕಾರ್ಜುನ್ ಬಿ ಸಂಕೇಗೌಡರ್‌ , ದರ್ಶನ್ ಅವರ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ದರ್ಶನ್ ಅವರ ಚಿತ್ರಗಳ ಡೇಟ್ಸ್ ಗಳನ್ನು ನೋಡಿಕೊಳ್ಳುವುದು, ಅವರ ಇತರ ವ್ಯವಹಾರಗಳನ್ನು ನೋಡಿಕೊಳ್ಳುವುದು ಇತ್ಯಾದಿಗಳನ್ನು ಮಾಡುತ್ತಿದ್ದರು.

ಕೆಲವು ಸಿನಿಮಾಗಳ ನಿರ್ಮಾಣಕ್ಕೆ ಹಣ ಹಾಕಿ ಕೈ ಸುಟ್ಟುಕೊಂಡರು. ಜೊತೆಗೆ ಸಿನಿಮಾ ಹಂಚಿಕೆ (ಡಿಸ್ಟ್ರಿಬ್ಯೂಷನ್) ಮಾಡಲು ಹೋಗಿ ಅಲ್ಲಿಯೂ ಕೈ ಸುಟ್ಟುಕೊಂಡರು. ಆದರೆ, ಅಷ್ಟರಲ್ಲಾಗಲೇ ಚಿತ್ರರಂಗದ ಹಲವಾರು ಗಣ್ಯರಿಂದ ದರ್ಶನ್ ಅವರ ಮ್ಯಾನೇಜರ್ ಎಂಬ ಹೆಸರಿನಲ್ಲೇ ಸುಮಾರು 10 ಕೋಟಿ ರೂ. ಸಾಲ ಮಾಡಿದ್ದರೆಂಬುದು ತಿಳಿದುಬಂದಿದೆ.

ಹಿರಿಯ ನಟ ಅರ್ಜುನ್ ಸರ್ಜಾ ಅವರಿಂದಲೂ 1 ಕೋಟಿ ರೂ. ಸಾಲ ಪಡೆದಿದ್ದರೆಂದು ಹೇಳಲಾಗಿದ್ದು, ಅವರ ವಿರುದ್ಧ ಅರ್ಜುನ್ ಸರ್ಜಾ ಅವರು ಸ್ಥಳೀಯ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಸಾಲ ಹಿಂದಿರುಗಿಸಿಕೊಂಡಬೇಕೆಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಅರ್ಜುನ್ ಸರ್ಜಾ ಮತ್ತು ಮಲ್ಲಿಕಾರ್ಜುನ್ ನಡುವೆ ‘ಪ್ರೇಮ ಬರಹ’ ಸಿನಿಮಾದ (ಇದು ಅರ್ಜುನ್ ಸರ್ಜಾ ನಿರ್ದೇಶನದ ಚಿತ್ರ) ವಿತರಣೆಯ ವಿಚಾರವಾಗಿ ಬರೋಬ್ಬರಿ 1 ಕೋಟಿ ಕೊಡುವ ಒಪ್ಪಂದ ಆಗಿತ್ತು. ಈ ವಿಚಾರವಾಗಿ ಸ್ವತಃ ಮಲ್ಲಿಕಾರ್ಜುನ್ ಅವರೇ ‘ಶ್ರೀ ಕಾಲಕಾಲೇಶ್ವರ ಎಂಟರ್ಪ್ರೈಸಸ್’ ಬುಕ್ಲೈಟ್ನಲ್ಲಿ ವಿತರಣೆಯ ಹಣದ ವಿಚಾರವನ್ನು ಬರೆದುಕೊಟ್ಟಿದ್ದರು. ಆ ಹಿನ್ನೆಲೆಯಲ್ಲಿ, ಅರ್ಜುನ್ ಸರ್ಜಾ ಅವರಿಗೆ ಟೋಪಿ ಹಾಕಿದ್ದಾನೆ ಆರೋಪ ಮಲ್ಲಿಕಾರ್ಜುನ್ ಅವರ ಮೇಲಿದೆ.

ಇನ್ನೊಂದೆಡೆ ಈತನ ಮೇಲೆ ದರ್ಶನ್ ಅತಿಯಾದ ನಂಬಿಕೆ ಇಟ್ಟುಕೊಂಡಿದ್ದರು. ತಮ್ಮ ಅನೇಕ ಜವಾಬ್ದಾರಿಗಳನ್ನು ನೋಡಿಕೊಳ್ಳಲು ಮಲ್ಲಿಕಾರ್ಜುನ್ ಅವರನ್ನು ನೇಮಿಸಿಕೊಂಡಿದ್ದರು ಎನ್ನಲಾಗಿದೆ.  ಆದರೆ ಆತ ದರ್ಶನ್ ಅವರಿಗೂ ಕೆಲವು ವ್ಯವಹಾರಗಳಲ್ಲಿ ಅವರಿಗೆ ಗೊತ್ತಿಲ್ಲದಂತೆಯೇ ಹಣ ಮಾಡಿಕೊಂಡಿದ್ದ ಎಂದು ಹೇಳಲಾಗಿತ್ತು. ಜೊತೆಗೆ, ದರ್ಶನ್ ಅವರ ಹೆಸರೇಳಿಕೊಂಡು ಚಿತ್ರರಂಗದ ಅನೇಕರ ಬಳಿ ಹಣವನ್ನು ಸಾಲ ಮಾಡಿದ್ದ ಎಂದೂ ಹೇಳಲಾಗಿತ್ತು. ಈ ಘಟನೆಯ ಬಳಿಕ ನಾಪತ್ತೆಯಾಗಿರುವ ಮಲ್ಲಿಕಾರ್ಜುನ್ ಈಗ ಎಲ್ಲಿದ್ದಾನೆ ಎನ್ನುವುದು ತಿಳಿದು ಬಂದಿಲ್ಲ. ಆತ ಇನ್ನೂ ಜೀವಂತವಾಗಿದ್ದಾನೆಯೇ ಎನ್ನುವ ಅನುಮಾನಗಳನ್ನು ಕೆಲವು ಮಾಧ್ಯಮಗಳು ಹೊರ ಹಾಕಿವೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ