ಡಿಸೆಂಬರ್ 6: ದೇಶ ‘ಭೀಮ’ನನ್ನು ಕಳೆದುಕೊಂಡ ದಿನ
- ದಮ್ಮಪ್ರಿಯ ಬೆಂಗಳೂರು
ಇಂದು ನಾವು ನಿಜವಾಗಿಯೂ ನೆನಪಿಡಬೇಕಾದ ಕರಾಳ ದಿನ ಎಂದರು ತಪ್ಪಾಗಲಾರದು. ಭಾರತ ದೇಶದಲ್ಲಿ ಬಹುಸಂಖ್ಯಾತರ ಪಾಲಿಗೆ ಬೆಳಕಾಗಿ ನಿಂತ ಭೀಮನನ್ನು ಕಳೆದುಕೊಂಡ ದಿನ. ಡಿಸೆಂಬರ್ 6 ನೇ ತಾರೀಖು ಎಂದರೆ ಈ ದೇಶದ ಕೋಮುವಾದಿಗಳಿಗೆ ಬಾಬರಿ ಮಸೀದಿಯನ್ನು ನೆಲಸಮ ಮಾಡಿದ ದಿನ ಎನ್ನುವುದಾದರೆ, ಈ ದೇಶದ ಬಹುಸಂಖ್ಯಾತರಿಗೆ ಬಾಬಾಸಾಹೇಬ್ ಡಾ.ಅಂಬೇಡ್ಕರ್ ರವರನ್ನು ಕಳೆದುಕೊಂಡ ದಿನ, ಬಹುಸಂಖ್ಯಾತರ ಪಾಲಿಗೆ ನೋವಿನ ದಿನ ಎನ್ನಬಹುದು.
ಬಾಬಾಸಾಹೇಬರು ತನ್ನ ಜೀವತದ ಕೊನೆಯವರೆವಿಗೂ ಈ ದೇಶದ ಶೋಷಿತ ಸಮುದಾಯಗಳ, ನಿಮ್ನ ವರ್ಗಗಳ, ಶೋಷಿತ ಮಹಿಳೆಯರ ಪರವಾಗಿಯೇ ಹೋರಾಡುತ್ತಾ ಎಲ್ಲರ ವಿಮೋಚಣೆಗಾಗಿಯೇ ತನ್ನ ಜೀವನವನ್ನು ಮುಡುಪಿಟ್ಟವರು. ತನ್ನ ಜನಾಂಗವನ್ನು ಗುಲಾಮಗಿರಿಯ ಸಂಕೋಲೆಗಳಿಂದ ಮುಕ್ತಿಗೊಳಿಸಲು ಕೊನೆಯ ಕ್ಷಣದವರೆವಿಗೂ ಹೋರಾಡುತ್ತಲೇ ಬಂದರು.
ಯಾವುದೇ ಅಡ್ಡಿ ಆತಂಕಗಳು ಎದುರಾದರು ಎಂದು ತಮ್ಮ ಸಿದ್ಧಾಂತವನ್ನು ರಾಜಿ ಮಾಡಿಕೊಂಡವರಲ್ಲ. ಯಾರ ನಡುವೆಯೂ ಕೈಯೊಡ್ಡಿ ಬೇಡಿದವರಲ್ಲ, ಇದು ಬಾಬಾಸಾಹೇಬರಲ್ಲಿ ಕಂಡಂತಹ ಸ್ವಾಭಿಮಾನದ ಬದುಕಿನ ಹೋರಾಟ ಎನ್ನಬಹುದು. ಬಾಬಾಸಾಹೇಬರು ಭಾರತಕ್ಕೆ ನೀಡಿದ ಬಹುದೊಡ್ಡ ಆಸ್ತಿ ಎಂದರೆ ವಿದ್ಯೆ ಎನ್ನುವ ಆಯುಧ, ಅಧಿಕಾರ ಎನ್ನುವ ಅಸ್ತ್ರ, ಸ್ವಾಭಿಮಾನ ಎನ್ನುವ ಎದೆಗಾರಿಕೆ ಇವು ಎಲ್ಲರನ್ನು ಇಂದು ಒಂದು ಹಂತಕ್ಕೆ ತರಲು ಸಾಧ್ಯವಾಯಿತು.
ಬಾಬಾಸಾಹೇಬರ ವಿಚಾರಗಳ ಬಗ್ಗೆ ಇಂದು ಪ್ರತಿಯೊಬ್ಬರೂ ಮಾತನಾಡುತ್ತಾರೆ. ಆದರೇ ತನ್ನ ಸ್ವಂತ ಬದುಕಿನ ಅಭಿವೃದ್ಧಿಯನ್ನು ಕಾಣಲು ಹೊರಟವರು ಅದನ್ನು ಬಂಡವಾಳ ಮಾಡಿಕೊಂಡು ಬದುಕುವುದಾಗಿದೆ.ಕೆಲವೊಮ್ಮೆ ಅವರ ವಿಚಾರಗಳನ್ನು ಸ್ವಲ್ಪ ಪಕ್ಕಕ್ಕಿಟ್ಟು ಸ್ವಾರ್ಥದ ಬದುಕನ್ನು ಕಟ್ಟಿಕೊಳ್ಳುವ ಸಮಾಜವನ್ನು ಕೆಲವರು ಸೃಷ್ಟಿಮಾಡಿಕೊಂಡಿದ್ದಾರೆ. ಒಂದು ವೇಳೆ ಬಾಬಾಸಾಹೇಬರು ಇಂತಹ ಸ್ಥಿತಿಯಲ್ಲಿರುವ ಜನರನ್ನು ನೋಡಿದಿದ್ದೆ ಆಗಿದ್ದರೆ, ನಾನೇ ತಪ್ಪು ಮಾಡಿದೆನೇನೋ ಎಂದುಕೊಳ್ಳುತ್ತಿದ್ದರು. ಅಷ್ಟರ ಮಟ್ಟಿಗೆ ಬಾಬಾಸಾಹೇಬರನ್ನು ಅವರ ಸಿದ್ಧಾಂತಗಳನ್ನು ತಿರುಚಿ ತಮ್ಮ ಬೇಳೆಕಾಳು ಬೇಯಿಸಿಕೊಳ್ಳುತ್ತಿದ್ದಾರೆ.
ಆದರೇ ಬಾಬಾಸಾಹೇಬರ ಸಿದ್ಧಾಂತಗಳನ್ನು ಚೆನ್ನಾಗಿ ಅರಿತವರು, ಬಾಬಾಸಾಹೇಬರಂತೆ ಸಮಾಜದಲ್ಲಿ ನೋವುಂಡವರು ಅವರ ಸಿದ್ಧಾಂತಗಳ ಬಗ್ಗೆ ಮಾತನಾಡುತ್ತಿದ್ದರೆ, ಅದಕ್ಕೆ ಚಪ್ಪಾಳೆ ತಟ್ಟಿ ಆ ಮಾತನ್ನು ಸಾಮಾನ್ಯವಾಗಿ ಗಾಳಿಗೆ ತೂರಿಬಿಡುವವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅದಕ್ಕಾಗಿಯೇ ಬಾಬಾಸಾಹೇಬರು ಅಂದು ಕಂಡ ಕನಸ್ಸು ಇಂದಿಗೂ ಈಡೇರದೆ ಹಾಗೆಯೇ ಉಳಿದಿದೆ.
ನನ್ನ ಜನ ಈ ದೇಶವನ್ನು ಆಳುವ ದೊರೆಗಳಾಗಬೇಕು ಎನ್ನುವ ಮಾತು ಇಂದು ಕ್ಲೀಷೆಯಾಗಿಬಿಟ್ಟಿದೆ. ಶಿಕ್ಷಣ, ಸಂಘಟನೆ, ಹೋರಾಟ ಎನ್ನುವ ಸೂತ್ರಗಳು, ಜಾಗೃತರಾಗಿ, ಚಿಂತಿಸಿ, ಒಂದಾಗಿ ಎಂದು ಕಾಲಕ್ಕೆ ತಕ್ಕಂತೆ ಬದಲಾದರು ಅವುಗಳು ಕೇವಲ ವೇದಿಕೆಗೆ ಸೀಮಿತವಾಗಿಬಿಟ್ಟಿವೆ.
ನೀನು ಬದುಕಿದರೆ ಸ್ವಾಭಿಮಾನಿಯಾಗಿ ಬದುಕು ಎನ್ನುವ ಬಾಬಾಸಾಹೇಬರ ಮಾತು ಕೇವಲ ಶಬ್ಧದ ರೂಪದಲ್ಲಿ ಕುಳಿತು ಮಾನಸಿಕ ಗುಲಾಮನನ್ನಾಗಿಸಿದೆ. ಅಂದಿನ ಕಾಲದ ದೈಹಿಕ ಗುಲಾಮಗಿರಿಯನ್ನು ಕಿತ್ತೊಗೆಯಲು ಶ್ರಮಿಸಿದ ಬಾಬಾಸಾಹೇಬರ ಶ್ರಮಕ್ಕೆ ಇಂದು ಮಾನಸಿಕ ಗುಲಾಮಗಿರಿತನ ಎನ್ನುವುದು ಸೋಂಕು ತಗುಲಿ ಮತ್ತೆ ಇನ್ನೊಬ್ಬರ ನೆರಳಲ್ಲಿಯೇ ಬದುಕುವ ಸ್ಥಿತಿ ನಿರ್ಮಾಣವಾಗಿಬಿಟ್ಟಿದೆ.
ಹಾಗಾದರೆ ಬಾಬಾಸಾಹೇಬರ ಸಂವಿಧಾನದ ಮೂಲ ಆಶಯಗಳು ಈಡೇರಿವೆಯೇ, ಎಲ್ಲರಿಗೂ ಈ ಸಮಾಜದಲ್ಲಿ ಸಮಾನತೆ ದೊರೆತಿದೆಯೇ? ಸ್ತ್ರೀ ಸ್ವಾತಂತ್ರ್ಯ ಹಕ್ಕುಗಳು ಜಾರಿಯಾಗಿವೆಯೇ, ವಾಕ್ ಸ್ವತಂತ್ಯ ಎನ್ನುವುದು ಎಷ್ಟರ ಮಟ್ಟಿಗೆ ತನ್ನ ಪ್ರಭಲತೆಯನ್ನು ಸಾಧಿಸಿದೆ ಎನ್ನುವ ಪ್ರಶ್ನೆಗಳು ನಮ್ಮ ಮುಂದಿವೆ.
ಬಾಬಾಸಾಹೇಬರು ತನ್ನ ಕೊನೆಯ ದಿನಗಳಲ್ಲಿ ಹೇಳಿದಂತೆ, ಜಾತಿ ವ್ಯವಸ್ಥೆ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಅಸಮಾನತೆಗಳು ಈ ಸಮಾಜಕ್ಕೆ ಅಂಟಿರುವ ಬಹು ದೊಡ್ಡ ರೋಗಗಳು, ಅವುಗಳನ್ನು ತೊಡೆದುಹಾಕಲು ಎಲ್ಲರಿಗೂ ಸಮಾನವಾದ ಸಂವಿಧಾನವನ್ನು ನಾನು ನಿಮಗೆ ಕೊಟ್ಟಿದ್ದೇನೆ, ಅದನ್ನು ಜಾರಿ ಮಾಡುವ ಜಾಗದಲ್ಲಿ ನೀವುಗಳಿರಬೇಕೆ ಹೊರತು. ಸಂವಿಧಾನದ ವಿರೋಧಿಗಳು, ಜಾತ ಪದ್ದತಿಯನ್ನು ಆಚರಿಸುವವರು ಇರಬಾರದು ಎಂದರು. ಆದರೇ ಇಂದಿಗೂ ನಮ್ಮ ದುರದೃಷ್ಟಕರ ಸಂಗತಿ ಎಂದರೆ ಇವತ್ತಿಗೂ ಸಂವಿಧಾನ ವಿರೋಧಿಗಳೇ ಸಂವಿಧಾನವನ್ನು ಜಾರಿ ಮಾಡುವ ಜಾಗದಲ್ಲಿ ಕುಳಿತಿದ್ದಾರೆ. ಇದು ಈ ದೇಶದ ನಿಜವಾದ ದುರಂತದ ಸ್ಥಿತಿ.
ನಾನು ಯಾವ ಜನರಿಗಾಗಿ ಅವರ ಹಕ್ಕುಗಳು ಮತ್ತು ಸಮಾನತೆಗಾಗಿ ಹೋರಾಡಿದೆನೋ ಅವರೇ ನನ್ನನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಾದರು. ನಾನು ಯಾರ ವಿರುದ್ಧ, ಯಾವ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡಿದೆನೋ ಅವರು ನನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಅದೇ ವ್ಯವಸ್ಥೆಯನ್ನೇ ಯತಾವಥಾಗಿ ಜಾರಿಮಾಡುತ್ತಿದ್ದಾರೆ. ಆದರೆ ಎಂದು ನನ್ನ ಜನರಿಗೆ ನಾನು ಕೊಟ್ಟ ಸಂವಿಧಾನದ ಹಕ್ಕು ಮತ್ತು ಅಧಿಕಾರದ ಅರಿವಾಗುತ್ತದೋ ಅಂದು ಸಂವಿಧಾನ ವಿರೋಧಿಗಳು ಬೀದಿಗಿಳಿದು ಬಾಯಿ ಬಾಯಿ ಬಡಿದುಕೊಳ್ಳುತ್ತಾರೆ ಎಂದಿದ್ದರು.
ಬಂಧುಗಳೇ ಬಾಬಾಸಾಹೇಬರ ಕನಸುಗಳು ನನಸಾಗಬೇಕಿದೆ, ನಿಮ್ಮ ನಿಮ್ಮಗಳ ಸ್ವಾರ್ಥಕ್ಕೆ ಬಾಬಾಸಾಹೇಬರನ್ನು, ಅವರ ಸಿದ್ಧಾಂತವನ್ನು ಬಲಿತೆಗೆದುಕೊಳ್ಳಬೇಡಿ. ಬಾಬಾಸಾಹೇಬರು ನಮ್ಮನ್ನು ತ್ಯಜಿಸಿ ಇಂದಿಗೆ ಸುಮಾರು 68 ವರ್ಷಗಳು ಕಳೆದಿವೆ. ಆದರೂ ಇಂದಿಗೂ ಜಾತಿಯ ಶೋಷಣೆ, ಲೈಂಗಿಕ ಶೋಷಣೆ, ಧರ್ಮದ ಶೋಷಣೆ ನಡೆಯುತ್ತಲೇ ಇವೆ. ಇವೆಲ್ಲಕ್ಕೂ ಅಂಬೇಡ್ಕರ್ ಎನ್ನುವ ಔಷದವೇ ಮದ್ದು.
ಜಾತಿಯ ನೋವುಂಡವನು ಜಾತಿಯ ನೋವಿನ ಬಗ್ಗೆ ಮಾತನಾಡಿದಾಗ ನಮಗೆ ಅದರ ಬೆಲೆ ಗೊತ್ತಾಗುತ್ತಿಲ್ಲ, ಆದರೇ ಜಾತಿಯಲ್ಲಿ ಶ್ರೇಷ್ಠ ಎನಿಸಿಕೊಂಡವರು ಬಾಬಾಸಾಹೇಬರ ಅವರ ಸಿದ್ಧಾಂತಗಳ ಬಗ್ಗೆ ಮಾತನಾಡಿದರೆ, ಅಥವಾ ಅಲ್ಲಿ ಇಲ್ಲಿ ಸಣ್ಣ ಪುಟ್ಟ ಬರಹಗಳನ್ನು ಬರೆದರೆ ನಾವು ಅವರನ್ನು ಎದೆಗವುಚ್ಚಿಕೊಂಡು ಪೂಜಿಸುತ್ತೇವೆ. ಇಂತಹ ಆಧುನಿಕ ಮಾನಸಿಕ ಗುಲಾಮಗಿರಿತನವನ್ನು
ಜಾತಿಯ ನೋವುಂಡವರು ಬಿಡಬೇಕಾಗಿದೆ. ಬಾಬಾಸಾಹೇಬರು ಜಾತಿಯನ್ನು ಎಂದು ವಿರೋಧಿಸಿದವರಲ್ಲ, ಜಾತಿಯಲ್ಲಿ ಶ್ರೇಷ್ಠ ಕನಿಷ್ಠ ಎನ್ನುವ ತಾರತಮ್ಯವನ್ನು ವಿರೋಧಿಸಿದವರು. ಎಂದು ಎಲ್ಲಾ ಜಾತಿಗಳು ಆರ್ಥಿಕ, ಸಾಮಜಿಕ, ಶೈಕ್ಷಣಿಕ, ಧಾರ್ಮಿಕ ಸಮಾನತೆಯನ್ನು ಪಡೆಯುತ್ತವೆಯೋ ಅಂದು ಜಾತಿ ಎನ್ನುವುದು ಮುಖ್ಯವಾಗುವುದಿಲ್ಲ ಎಂದರು .
ಬಾಬಾಸಾಹೇಬ್ ನಿಮ್ಮನ್ನು ಪಡೆದ ನಾವೇ ಧನ್ಯರು
ಜೈ ಭೀಮ್, ಜೈ ಬಾಬಾಸಾಹೇಬ್ ಡಾ.ಅಂಬೇಡ್ಕರ್
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: