ಬಾನಹಳ್ಳಿಯಲ್ಲಿ ನ.14ರಂದು ಉಣ್ಣಕ್ಕಿ ಹುತ್ತದ ಪವಾಡ ನೋಡಲು ಭಕ್ತರ ಕಾತುರ - Mahanayaka

ಬಾನಹಳ್ಳಿಯಲ್ಲಿ ನ.14ರಂದು ಉಣ್ಣಕ್ಕಿ ಹುತ್ತದ ಪವಾಡ ನೋಡಲು ಭಕ್ತರ ಕಾತುರ

huttada pavada
12/11/2024

  • ಸಂತೋಷ್ ಅತ್ತಿಗೆರೆ, ಕೊಟ್ಟಿಗೆಹಾರ

ಕೊಟ್ಟಿಗೆಹಾರ: ಮಲೆನಾಡಿನಲ್ಲಿ ಅನೇಕ ಧಾರ್ಮಿಕ ಪವಾಡಗಳು ಎಲೆಮರೆಯಲ್ಲಿ ನಡೆಯುತ್ತಲೇ ಇವೆ.ಕೆಲವು ಮಾತ್ರ ಜನರ ಕಣ್ಣಿಗೆ ಗೋಚರಿಸಿದರೆ,ಉಳಿದವುಗಳು ಮಾತ್ರ ಜನರಿಗೆ ಗೋಚರಿಸುವುದೇ ಇಲ್ಲ.ಅಂತಹ ಸರದಿಯಲ್ಲಿ ಮೂರು ಶತಮಾನಗಳಿಂದ ಮಂಗಳಾರತಿಯ ಸಮಯದಲ್ಲಿ ಮಾತ್ರ ಉಣ್ಣಕ್ಕಿ ಹುತ್ತ ಅಲುಗಾಡಿ  ವಿಸ್ಮಯ ಸೃಷ್ಟಿಸಿ ಜನರನ್ನು  ಮೂಕ ವಿಸ್ಮಿತರನ್ನಾಗಿ ಮಾಡುವುದಲ್ಲದೇ ಅಚ್ಚರಿಯನ್ನು ಮೂಡಿಸುತ್ತದೆ.  ಇದೇ ನ.14ರಂದು ಗುರುವಾರ ಬಾನಹಳ್ಳಿಯಲ್ಲಿ ಅಲುಗಾಡುವ ಹುತ್ತದ ಪವಾಡ ನೋಡಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಕಾತುರರಾಗಿದ್ದಾರೆ.

ಮೂರು ಶತಮಾನದ ಹಿಂದೆ ಮಣ್ಣಿನಲ್ಲಿಯೇ ನಿರ್ಮಾಣವಾದ ಈ ಹುತ್ತ 10ಅಡಿ ಎತ್ತರದಲ್ಲಿದ್ದು ಮಳೆ, ಗಾಳಿಗೂ ಅಲುಗಾಡದೇ ಶತಮಾನ ಕಂಡರೂ ಶಿಥಿಲವಾಗದೇ ಜನರನ್ನು ತನ್ನೆಡೆಗೆ ಆಕರ್ಷಿಸಿ ಭಕ್ತಿ ಪರವಶರಾಗಲೂ ಸೆಳೆಯುತ್ತಿದೆ. ಉಣ್ಣಕ್ಕಿ ಹುತ್ತದ ವಿಶೇಷವೆಂದರೆ, ಈ ಭಾಗದ ಜನರಿಗೆ, ಜಾನುವಾರುಗಳಿಗೆ ಕಾಯಿಲೆ ಬಂದರೆ ಹುತ್ತದ ಮಣ್ಣು ಮೈಗೆ ಹಚ್ಚಿದರೆ ಕಾಯಿಲೆ ಗುಣವಾಗುತ್ತದೆ ಎಂಬ ಅಚಲ ನಂಬಿಕೆ ಸ್ಥಳೀಯರದ್ದು ಹಾಗೂ ನಂಬಿದ ಭಕ್ತರದ್ದು.

ಬಾನಹಳ್ಳಿಯಲ್ಲಿ ನಡೆಯುವ ಉಣ್ಣಕ್ಕಿ ಹುತ್ತದ ಜಾತ್ರೆಗೆ ವಿಸ್ಮಯ ವೀಕ್ಷಿಸಲು ಸಂಜೆ ಬಗ್ಗಸಗೋಡು ಮಾತ್ರವಲ್ಲದೇ ಸ್ಥಳೀಯ ಗ್ರಾಮಗಳು, ವಿವಿಧ ಜಿಲ್ಲೆಯಿಂದ ಜನಸಾಗರವೇ ಹರಿದು ಬರುತ್ತದೆ. ಬೆಳಿಗ್ಗೆಯಿಂದಲೆ ಹುತ್ತಕ್ಕೆ ವಿಶೇಷ ಪೂಜೆ ನಡೆಯುತ್ತದೆ.ಆದರೆ ಸಂಜೆ 6ಗಂಟೆಯಿಂದ 10ರವರೆಗೆ ನಡೆಯುವ ವಿಸ್ಮಯ ಸೃಷ್ಟಿಸುವ ವಿಶೇಷ ಪೂಜೆಯಲ್ಲಿ ಪ್ರತಿವರ್ಷವೂ ಸಾವಿರಾರು ಭಕ್ತ ಗಣ ಸೇರಿ ಹಾಲು ಮತ್ತು ಅಕ್ಕಿಯನ್ನು ಸಮರ್ಪಿಸಿ ಭಕ್ತರು ಭಕ್ತಿ ಮೆರೆಯುತ್ತಾರೆ. ಹೊಸತಾಗಿ ಮದುವೆಯಾದ ನವ ದಂಪತಿಗಳು ಕೂಡ ಇಲ್ಲಿ ಹರಕೆ ಸಲ್ಲಿಸುವುದು ವಾಡಿಕೆಯಲ್ಲಿದೆ. ದೀಪಾವಳಿ ಬಳಿಕ ಬರುವ ಹುಣ್ಣಿಮೆ ದಿನ ಅಂದರೆ ನವೆಂಬರ್ 14ರ ಗುರುವಾರ ಉಣ್ಣಕ್ಕಿ ಜಾತ್ರಾ ಮಹೋತ್ಸವ  ವಿಜೃಂಭಣೆಯಿಂದ ನಡೆಯುತ್ತದೆ ಎಂದು ಮುಖಂಡರಾದ ಬಗ್ಗಸಗೋಡು ಪ್ರತಾಪ್ ಗೌಡ ಹೇಳುತ್ತಾರೆ.

ಹುತ್ತದ ಸುತ್ತ ಕರು ಪ್ರದಕ್ಷಿಣಿ: 

ಅಂದು ರಾತ್ರಿ  ಮಹಾಮಂಗಳಾರತಿ  ಸಮಯದಲ್ಲಿ ವಿದ್ಯುತ್ ಮತ್ತು ಹೂಗಳಿಂದ ಅಲಂಕೃತವಾದ ಹುತ್ತದ ಸುತ್ತ ಕರುವೊಂದನ್ನು ಪ್ರದಕ್ಷಿಣೆ ಹಾಕಿ ಭಕ್ತರು ಮಂಡಕ್ಕಿ ಎರಚುವ ಹರಕೆ ನೆರವೇರಿಸಲಾಗುತ್ತದೆ.ಬಳಿಕ ರಾತ್ರಿ ನಡೆಯುವ ಮಹಾಮಂಗಳಾರತಿ ಸಮಯದಲ್ಲಿ ಹುತ್ತ ಕ್ಷಣಾರ್ಧದಲ್ಲಿ ಅಲುಗಾಡಿ ಭಕ್ತರನ್ನು ವಿಸ್ಮಯ ಗೊಳಿಸುತ್ತದೆ.ಜಾತ್ರೆಗೆ ಬಂದ ಭಕ್ತರಿಗೆ ಹಾಲಕ್ಕಿಯನ್ನು  ವಿತರಿಸಲಾಗುತ್ತದೆ.ಜನರು ಅದನ್ನು ಮನೆಗೆ ಕೊಂಡು ಹೋಗಿ ಹೊಲ, ಗದ್ದೆ, ತೋಟಗಳಿಗೆ ಹಾಕಿ ಶುದ್ಧೀಕರಣವಾಗತ್ತದೆ ಎಂಬ ನಂಬಿಕೆಯಿದೆ.ಈ ಹುತ್ತದ ಪೂಜೆಯಿಂದ ನರ ಹುಣ್ಣು, ಕುರ,ಸರ್ಪಸುತ್ತು ಮತ್ತಿತರ ಕಾಯಿಲೆಗಳು ಗುಣವಾಗುತ್ತವೆ’ ಎನ್ನುತ್ತಾರೆ ಗ್ರಾಮಸ್ಥರಾದ ವಿನಯ್ ಬಾನಹಳ್ಳಿ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ