ದೆಹಲಿ ಗಲಭೆ ಹಿಂದಿನ ಪಿತೂರಿ ಆರೋಪ ಪ್ರಕರಣ: ವಿದ್ಯಾರ್ಥಿ ಕಾರ್ಯಕರ್ತನ ಜಾಮೀನು ಅರ್ಜಿ ವಿಚಾರಣೆ ಮಾಡಿ ಎಂದ ಸುಪ್ರೀಂಕೋರ್ಟ್ - Mahanayaka

ದೆಹಲಿ ಗಲಭೆ ಹಿಂದಿನ ಪಿತೂರಿ ಆರೋಪ ಪ್ರಕರಣ: ವಿದ್ಯಾರ್ಥಿ ಕಾರ್ಯಕರ್ತನ ಜಾಮೀನು ಅರ್ಜಿ ವಿಚಾರಣೆ ಮಾಡಿ ಎಂದ ಸುಪ್ರೀಂಕೋರ್ಟ್

25/10/2024

ದೆಹಲಿ ಗಲಭೆ ಹಿಂದಿನ ಪಿತೂರಿ ಆರೋಪ ಪ್ರಕರಣದಲ್ಲಿ ಜಾಮೀನು ಕೋರಿ ವಿದ್ಯಾರ್ಥಿ ಕಾರ್ಯಕರ್ತ ಶಾರ್ಜೀಲ್ ಇಮಾಮ್ ಸಲ್ಲಿಸಿರುವ ಅರ್ಜಿ ಏಪ್ರಿಲ್ 2022 ರಿಂದ ಇತ್ಯರ್ಥವಾಗದೇ ಬಾಕಿ ಉಳಿದಿದೆ. ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯನ್ನು ತ್ವರಿತವಾಗಿ ವಿಲೇವಾರಿ ಮಾಡುವ ಅವರ ಮನವಿಯನ್ನು ಪರಿಗಣಿಸುವಂತೆ ಸುಪ್ರೀಂಕೋರ್ಟ್, ದೆಹಲಿ ಹೈಕೋರ್ಟ್‌ಗೆ ಸೂಚಿಸಿದೆ.

ತನ್ನ ಜಾಮೀನು ಅರ್ಜಿಯನ್ನು ಶೀಘ್ರವಾಗಿ ವಿಲೇವಾರಿ ಮಾಡುವಂತೆ ಹೈಕೋರ್ಟ್‌ಗೆ ನಿರ್ದೇಶನ ನೀಡಲು ಕೋರಿ ಇಮಾಮ್ ಅವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ನ್ಯಾಯಪೀಠ ಪರಿಗಣಿಸಿದೆ. ಆದಷ್ಟು ಬೇಗ ಜಾಮೀನು ಅರ್ಜಿಯನ್ನು ವಿಲೇವಾರಿ ಮಾಡುವಂತೆ ಹೈಕೋರ್ಟ್‌ಗೆ ಕೋರುವ ಸ್ವಾತಂತ್ರ್ಯ ಅರ್ಜಿದಾರರಿಗೆ ಇದೆ ಎಂದು ಹೇಳಿದೆ.

ಇಮಾಮ್ ಅವರ ಜಾಮೀನು ಅರ್ಜಿಯನ್ನು ನವೆಂಬರ್ 25 ರಂದು ವಿಚಾರಣೆಗೆ ಹೈಕೋರ್ಟ್‌ನಲ್ಲಿ ಪಟ್ಟಿ ಮಾಡಿರುವುದನ್ನು ಇದೇ ವೇಳೆ ಪೀಠ ಗಮನಿಸಿದೆ.
ವಿಚಾರಣೆಯ ಆರಂಭದಲ್ಲಿ, ಹೈಕೋರ್ಟ್‌ನಲ್ಲಿ ವಿಷಯ ಬಾಕಿ ಇರುವಾಗ ಅರ್ಜಿದಾರರು ಸುಪ್ರೀಂ ಕೋರ್ಟ್‌ನಲ್ಲಿ ರಿಟ್ ಅರ್ಜಿಯನ್ನು ಏಕೆ ಸಲ್ಲಿಸಿದ್ದಾರೆ? ಎಂದು ಪೀಠವು ಕೇಳಿತ್ತು.

ಇದಕ್ಕೆ ಉತ್ತರಿಸಿದ ಇಮಾಮ್ ಪರ ಹಿರಿಯ ವಕೀಲ ಸಿದ್ಧಾರ್ಥ್ ದವೆ ನಾವು ಯಾರ ವಿರುದ್ಧ ಏನೂ ಹೇಳುತ್ತಿಲ್ಲ. ನಾವು ಯಾರನ್ನೂ ದೂಷಿಸುತ್ತಿಲ್ಲ. ಆದರೆ, ನಮ್ಮ ಕಕ್ಷಿದಾರರ ಅರ್ಜಿಯನ್ನು ಪುರಸ್ಕರಿಸಿ ಅಥವಾ ತಿರಸ್ಕರಿಸಿ ಒಟ್ಟಿನಲ್ಲಿ ಅದನ್ನು ವಿಲೇವಾರಿ ಮಾಡಿ” ಎಂದು ದವೆ ಮನವಿ ಮಾಡಿದರು.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಾಯ್ದೆಯ ಸೆಕ್ಷನ್ 21(2)ರ ಪ್ರಕಾರ, ಹೈಕೋರ್ಟ್ ಮೂರು ತಿಂಗಳೊಳಗೆ ಮೇಲ್ಮನವಿಯನ್ನು ತೀರ್ಮಾನಿಸಬೇಕೆಂಬ ಆದೇಶವಿದೆ ಎಂದು ದವೆ ತಿಳಿಸಿದರು. ಜಾಮೀನು ತಿರಸ್ಕಾರವನ್ನು ಪ್ರಶ್ನಿಸಿ ಇಮಾಮ್ ಅವರ ಮೇಲ್ಮನವಿಯನ್ನು ಏಪ್ರಿಲ್ 29, 2022 ರಂದು ಸಲ್ಲಿಸಲಾಗಿದೆ. ಅದನ್ನು 64 ಬಾರಿ ಮುಂದೂಡಲಾಗಿದೆ ಎಂದು ವಕೀಲ ದಾವೆ ಹೇಳಿದ್ದಾರೆ.

 

<

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ