'ಧುರಂಧರ್ 2' ಭರ್ಜರಿ ಯಶಸ್ಸು: ಪತಿ ರಣವೀರ್ ಸಿಂಗ್ ಜೊತೆ ಸಂಭ್ರಮಿಸಿದ ದೀಪಿಕಾ ಪಡುಕೋಣೆ; ಅಲಿಯಾ ಭಟ್ ಮೆಚ್ಚುಗೆ - Mahanayaka

‘ಧುರಂಧರ್ 2’ ಭರ್ಜರಿ ಯಶಸ್ಸು: ಪತಿ ರಣವೀರ್ ಸಿಂಗ್ ಜೊತೆ ಸಂಭ್ರಮಿಸಿದ ದೀಪಿಕಾ ಪಡುಕೋಣೆ; ಅಲಿಯಾ ಭಟ್ ಮೆಚ್ಚುಗೆ

dhurandhar 2
23/03/2026

ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಸಿನಿಮಾ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ವಿಶ್ವಾದ್ಯಂತ ಬರೋಬ್ಬರಿ 700 ಕೋಟಿ ರೂಪಾಯಿಗಳಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ. ಈ ಭರ್ಜರಿ ಯಶಸ್ಸನ್ನು ರಣವೀರ್ ಸಿಂಗ್ ಮತ್ತು ಅವರ ಪತ್ನಿ, ಖ್ಯಾತ ನಟಿ ದೀಪಿಕಾ ಪಡುಕೋಣೆ ಅದ್ದೂರಿಯಾಗಿ ಸಂಭ್ರಮಿಸಿದ್ದಾರೆ.

ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಈ ಸ್ಟಾರ್ ಜೋಡಿ ಮುಂಬೈನ ವರ್ಲಿಯಲ್ಲಿರುವ ಪ್ರಸಿದ್ಧ ಸೀಫುಡ್ ರೆಸ್ಟೋರೆಂಟ್ ‘ಮಾಸ್ಲಿ’ಗೆ ಭೇಟಿ ನೀಡಿತ್ತು. ಬಿಳಿ ಟಿ–ಶರ್ಟ್ ಮತ್ತು ನೀಲಿ ಜೀನ್ಸ್ ಧರಿಸಿದ್ದ ದೀಪಿಕಾ ಹಾಗೂ ಕ್ಯಾಶುಯಲ್ ಲುಕ್‌ನಲ್ಲಿ ಕಾಣಿಸಿಕೊಂಡ ರಣವೀರ್ ಅವರ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸಿನಿಮಾದ ಬಗ್ಗೆ ದೀಪಿಕಾ ಯಾವುದೇ ಪೋಸ್ಟ್ ಹಂಚಿಕೊಂಡಿಲ್ಲ ಎಂದು ಟ್ರೋಲ್ ಮಾಡುತ್ತಿದ್ದವರಿಗೆ ಈ ಮೂಲಕ ದೀಪಿಕಾ ಮೌನವಾಗಿಯೇ ಉತ್ತರ ನೀಡಿದ್ದಾರೆ.

ರಣವೀರ್ ಸಿಂಗ್ ಅವರ ಆಪ್ತ ಗೆಳತಿ ಮತ್ತು ಸಹನಟಿ ಅಲಿಯಾ ಭಟ್ ಸಿನಿಮಾವನ್ನು ನೋಡಿ ಹಾಡಿ ಹೊಗಳಿದ್ದಾರೆ. ರಣವೀರ್ ಅವರು ಸಿಖ್ ಉಡುಪಿನಲ್ಲಿರುವ ಫೋಟೋವನ್ನು ಹಂಚಿಕೊಂಡಿರುವ ಅಲಿಯಾ, “ಜಸ್ಕಿರತ್ ಸಿಂಗ್ ರಂಗಿ (ರಣವೀರ್ ಪಾತ್ರದ ಹೆಸರು) ಮತ್ತು ಈ ಕ್ಷಣ.. ಎಲ್ಲವೂ ಅದ್ಭುತವಾಗಿದೆ. ನಟ ಮತ್ತು ನಿರ್ದೇಶಕ ಆದಿತ್ಯ ಧರ್ ಅವರ ಸಮನ್ವಯತೆ ಮ್ಯಾಜಿಕ್ ಸೃಷ್ಟಿಸಿದೆ” ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಆದಿತ್ಯ ಧರ್ ನಿರ್ದೇಶನದ ಈ ಸ್ಪೈ ಥ್ರಿಲ್ಲರ್ ಸಿನಿಮಾ ಭಾರತದಲ್ಲಿ ಮೊದಲ ವಾರಾಂತ್ಯದಲ್ಲೇ 450 ಕೋಟಿ ರೂಪಾಯಿ ದಾಟಿದ್ದು, ‘ಪುಷ್ಪ 2’ ಸಿನಿಮಾದ ದಾಖಲೆಯನ್ನು ಹಿಂದಿಕ್ಕುವತ್ತ ಮುನ್ನುಗ್ಗುತ್ತಿದೆ. ರಣವೀರ್ ಸಿಂಗ್ ಅವರ ‘ಹಮ್ಜಾ ಅಲಿ ಮಜಾರಿ’ ಮತ್ತು ‘ಜಸ್ಕಿರತ್ ಸಿಂಗ್ ರಂಗಿ’ ಎಂಬ ದ್ವಿಮುಖ ಪಾತ್ರದ ನಟನೆಗೆ ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ