ಕದ್ದ ನೆಕ್ಲೆಸ್ ಧರಿಸಿ ವಾಟ್ಸಾಪ್ ಡಿಪಿ ಹಾಕಿ ಸಿಕ್ಕಿ ಬಿದ್ದ ಮನೆ ಕೆಲಸದ ಮಹಿಳೆ!

ಬೆಂಗಳೂರು: ಕದ್ದ ನೆಕ್ಲೆಸ್ ಧರಿಸಿಕೊಂಡು ಫೋಟೋ ತೆಗೆದು ವಾಟ್ಸಾಪ್ ಡಿಪಿಯಲ್ಲಿ ಹಾಕಿಕೊಂಡಿದ್ದ ಮಹಿಳೆಯೊಬ್ಬರನ್ನು ಎಚ್ ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಾರತ್ತಹಳ್ಳಿಯ ನಿವಾಸಿ ರೇಣುಕಾ (38) ಬಂಧಿತ ಮಹಿಳೆಯಾಗಿದ್ದು, ಈಕೆಯಿಂದ 5 ಲಕ್ಷ ರೂ. ಮೌಲ್ಯದ 80 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ಮಾರತ್ತಹಳ್ಳಿಯ ಅಪಾರ್ಟ್‌ಮೆಂಟ್ನ ಫ್ಲ್ಯಾಟ್ ವೊಂದರಲ್ಲಿ ಆರೋಪಿ ಹಲವು ತಿಂಗಳಿಂದ ಮನೆಗೆಲಸ ಮಾಡುತ್ತಿದ್ದರು. ಮಾಲೀಕರ ಗಮನಕ್ಕೆ ಬಾರದಂತೆ ಕಬೋರ್ಡ್‌ನಲ್ಲಿದ್ದ ಚಿನ್ನದ ನೆಕ್ಲೆಸ್ ಅನ್ನು ಕಳವು ಮಾಡಿದ್ದರು. ಕೆಲವು ದಿನಗಳ ಹಿಂದೆ ಕಬೋರ್ಡ್ ಪರಿಶೀಲನೆ ನಡೆಸಿದಾಗ ನೆಕ್ಲೆಸ್ ಇರಲಿಲ್ಲ. ಮನೆಯಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾ ಸೇರಿದಂತೆ ನಾಲ್ವರು ಕೆಲಸಗಾರರ ಮೇಲೆ ಅನುಮಾನ ವ್ಯಕ್ತಪಡಿಸಿ, ಮಾಲೀಕರು ಎಚ್ ಎಎಲ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರು ನಾಲ್ವರು ಕೆಲಸಗಾರರನ್ನು ಕೂಡ ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಯಾವುದೇ ಸುಳಿವು ಲಭ್ಯವಾಗಿರಲಿಲ್ಲ. ಆದರೆ ದಿನ ಕಳೆದಂತೆ ಪ್ರಕರಣ ಮುಚ್ಚಿ ಹೋಯ್ತು ಅಂತ ಭಾವಿಸಿ ಕದ್ದ ನೆಕ್ಲೆಸ್ ನ್ನು ಧರಿಸಿ ಮಹಿಳೆ ಫೋಟೋ ತೆಗೆದು ವಾಟ್ಸಾಪ್ ಡಿಪಿಯಲ್ಲಿ ಹಾಕಿಕೊಂಡಿದ್ದಾಳೆ.
ಇದನ್ನು ಗಮನಿಸಿದ ಮನೆ ಮಾಲಿಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಕಳ್ಳತನ ನಡೆಸಿರುವುದನ್ನು ಮಹಿಳೆ ಬಾಯ್ಬಿಟ್ಟಿದ್ದಾಳೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth