ಮಕ್ಕಳಿಗೆ ಮೊಟ್ಟೆ ವಿತರಿಸಿ ಕಿತ್ತುಕೊಂಡ ಅಂಗನವಾಡಿ ಕಾರ್ಯಕರ್ತೆ: ಇಬ್ಬರು ಅಮಾನತು
ಕೊಪ್ಪಳ: ಮಕ್ಕಳಿಗೆ ಮೊಟ್ಟೆ ವಿತರಿಸಿ, ವಿಡಿಯೋ ಮಾಡಿಕೊಂಡು ನಂತರ ಮೊಟ್ಟೆಯನ್ನು ಕಸಿದುಕೊಂಡಿರುವ ಆರೋಪದ ಹಿನ್ನೆಲೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದ ಅಂಗನವಾಡಿ ಶಾಲೆಯ ಕಾರ್ಯಕರ್ತೆ, ಸಿಬ್ಬಂದಿಯನ್ನು ಅಮಾನತು ಮಾಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಆದೇಶಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮೀ ಹಾಗೂ ಸಹಾಯಕಿ ಶೈನಜಾಬೇಗಂ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಮಕ್ಕಳಿಗೆ ಮೊಟ್ಟೆ ಕೊಟ್ಟು ಫೋಟೋ ಕ್ಲಿಕ್ಕಿಸಿ ನಂತರ ಮೊಟ್ಟೆ ಕಸಿದುಕೊಳ್ಳುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ಈ ಕ್ರಮಕೈಗೊಳ್ಳಲಾಗಿದೆ.
ತಟ್ಟೆಯಲ್ಲಿ ಮೊಟ್ಟೆಯನ್ನಿಟ್ಟು ಪ್ರಾರ್ಥನೆ ಸಲ್ಲಿಸಲಾಗಿದ್ದು, ಮಕ್ಕಳು ಮೊಟ್ಟೆಯನ್ನು ಆಸೆಯಿಂದ ತಿನ್ನಲು ಮುಂದಾಗುತ್ತಿದ್ದಂತೆಯೇ ಮಕ್ಕಳ ಕೈಯಿಂದ ಕಸಿದುಕೊಳ್ಳುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಒಬ್ಬ ಬಾಲಕ ಆಸೆಯಿಂದ ಮೊಟ್ಟೆಯನ್ನು ತಿನ್ನಲು ಮುಂದಾಗುತ್ತಿದ್ದಂತೆಯೇ ಆತನನ್ನು ತಡೆಯುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಘಟನೆಯ ಬೆನ್ನಲ್ಲೇ ಜಿಲ್ಲಾ ಸತ್ರ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಸಿ.ಚಂದ್ರಶೇಖರ ನೇತೃತ್ವದಲ್ಲಿ ನ್ಯಾಯಾಧೀಶರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಂಗನವಾಡಿಯಲ್ಲಿ ಇನ್ನೂ ಅನೇಕ ನಿರ್ಲಕ್ಷ್ಯತೆಗಳನ್ನು ಪತ್ತೆಹಚ್ಚಲಾಗಿದ್ದು, ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಈ ಬಗ್ಗೆ ಮಾಹಿತಿ ನೀಡೋದಾಗಿ ನ್ಯಾಯಾಧೀಶರು ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: