ನಮ್ಮನ್ನು ಬಂಡಾಯ ಅನ್ನಬೇಡಿ, ಬಿಜೆಪಿ ನಿಷ್ಠಾವಂತರು ಅಂತಾ ಹೇಳಿ: ಶಾಸಕ ಯತ್ನಾಳ್
ವಿಜಯಪುರ: ಸ್ವಪಕ್ಷದ ನಾಯಕತ್ವದ ವಿರುದ್ಧವೇ ಬಂಡಾಯವೆದ್ದಿರುವ ಬಸನಗೌಡ ಪಾಟೀಲ್ ಯತ್ನಾಳ್, ನಾವು ಬಿಜೆಪಿಯ ಬಂಡಾಯ ಅಂತಾ ಯಾರು ಮಾಧ್ಯಮದವರು ಸುದ್ದಿ ಮಾಡಬೇಡಿ. ಕೈ ಮುಗಿದು ಹೇಳ್ತಿದ್ದೇನೆ, ನಮ್ಮನ್ನು ಬಿಜೆಪಿ ನಿಷ್ಠಾವಂತರು ಅಂತಾ ಹೇಳಿ ಅಂತ ಮನವಿ ಮಾಡಿಕೊಂಡಿದ್ದಾರೆ.
ವಿಜಯಪುರದಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಮಾಧ್ಯಮಗಳ ಜೊತೆಗೆ ಅವರು ಮಾತನಾಡಿದರು.
ಬೆಳಗಾವಿಯಲ್ಲಿ ಬಿಜೆಪಿ ನಾಯಕರ ಪ್ರತ್ಯೇಕ ಸಭೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮದೇ ಒಂದು ಕೋರ್ ಕಮಿಟಿ ಮಾಡಿಕೊಂಡಿದ್ದೇವೆ, ಯಾವಾಗ ಪಾದಯಾತ್ರೆ ಮಾಡಬೇಕು ಅಂತ ಮೊನ್ನೆ ಸಭೆಯಲ್ಲಿ ಚರ್ಚಿಸಿದ್ದೇವೆ. ಈ ಬಗ್ಗೆ ನಾನು ಯಾವುದೇ ಹೇಳಿಕೆ ನೀಡಬಾರದು ಎಂದು ನಮ್ಮವರು ನಿರ್ಧಾರ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರೇ ಹೇಳಿಕೆ ನೀಡುತ್ತಾರೆ ಅಂತ ಯತ್ನಾಳ್ ಹೇಳಿದರು.
ಇನ್ನೂ ಪ್ರತ್ಯೇಕ ಮತ್ತೊಂದು ಪಾದಯಾತ್ರೆ ಬಗ್ಗೆ ಮಾತನಾಡಿದ ಅವರು, ಕೇಂದ್ರದ ಹೈಕಮಾಂಡ್ ಅನುಮತಿ ನೀಡಿದರೆ ನಾವು ಪಾದಯಾತ್ರೆ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಮೀಟಿಂಗ್ ಮಾಡಿ ಕೇಂದ್ರ ನಾಯಕರಿಂದ ಅನುಮತಿ ಕೇಳುತ್ತೇವೆ ಎಂದರು.
ವಿಜಯೇಂದ್ರ ಜೊತೆ ಹೊಂದಾಣಿಕೆ ಮಾಡಲ್ಲ:
ವಿಜಯೇಂದ್ರ ಜೊತೆಗೆ ಯಾವುದೇ ಹೊಂದಾಣಿಕೆ ಮಾಡಲ್ಲ, ಮೊನ್ನೆ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ವಿಜಯೇಂದ್ರ ನೀನು ಕಾಂಗ್ರೆಸ್ ಕೊಟ್ಟ ಭಿಕ್ಷೆಯಿಂದ ಎಂಎಲ್ ಎ ಆಗಿದ್ದೀಯಾ ಅಂತ. ಅಂದ್ರೆ ಡಿಕೆಶಿ ವಿಜಯೇಂದ್ರ ಜೊತೆ ಹೊಂದಾಣಿಕೆ ಇದೆ ಅಂತ ಅವರೇ ಒಪ್ಪಿಕೊಂಡಿದ್ದಾರೆ ಎಂದರು.
ನಾವು ಪಾದಯಾತ್ರೆ ಮಾಡುವ ಬಗ್ಗೆ ಚರ್ಚೆ ನಡೆಸಿದ್ದೇವೆ. ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನಮ್ಮ ಸಭೆಗೆ ಬರುವವರಿದ್ದರು. ಆದ್ರೆ ಡೆಂಗ್ಯೂ ಕಾರಣ ಅವರು ಬಂದಿರಲಿಲ್ಲ. ಇನ್ನೂ ಹಲವರು ಬರುವವರಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth