ಬೆಳ್ತಂಗಡಿ ಅಪಹರಣ ಯತ್ನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! - Mahanayaka
7:41 PM Tuesday 10 - February 2026

ಬೆಳ್ತಂಗಡಿ ಅಪಹರಣ ಯತ್ನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!

belthangady attempted kidnapping
10/02/2026

ಬೆಳ್ತಂಗಡಿ: ತಾಲೂಕಿನಲ್ಲಿ ಸಂಚಲನ ಮೂಡಿಸಿದ್ದ ಕಾಲೇಜು ವಿದ್ಯಾರ್ಥಿನಿಯ ಅಪಹರಣ ಯತ್ನ ಪ್ರಕರಣ ಈಗ ನಾಟಕೀಯ ತಿರುವು ಪಡೆದುಕೊಂಡಿದೆ. ಅಪರಿಚಿತರಿಂದ ಅಪಹರಣ ಯತ್ನ ನಡೆದಿದೆ ಎನ್ನಲಾದ ಘಟನೆ ಸುಳ್ಳಾಗಿದ್ದು, ವಿದ್ಯಾರ್ಥಿನಿಯೇ ಈ ಕಥೆಯನ್ನು ಸೃಷ್ಟಿಸಿದ್ದಾಳೆ ಎಂಬ ಅಂಶ ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.

ಏನಿದು ಪ್ರಕರಣ? ಫೆಬ್ರವರಿ 9ರ ಸೋಮವಾರ ಬೆಳಗ್ಗೆ ಬೆಳ್ತಂಗಡಿಯ ಸುದೇಮುಗೇರು ಎಂಬಲ್ಲಿ 16 ವರ್ಷದ ವಿದ್ಯಾರ್ಥಿನಿ ಸ್ಕೂಟರ್‌ ನಲ್ಲಿ ಕಾಲೇಜಿಗೆ ತೆರಳುತ್ತಿದ್ದಳು. ಈ ವೇಳೆ ಕಾರಿನಲ್ಲಿ ಬಂದ ಮುಸುಕುಧಾರಿಗಳು ತನ್ನನ್ನು ಅಪಹರಿಸಲು ಯತ್ನಿಸಿದರು ಮತ್ತು ತಾನು ಕಿರುಚಾಡಿದಾಗ ಚೂರಿಯಿಂದ ಕೈಗೆ ಇರಿದು ಪರಾರಿಯಾದರು ಎಂದು ಆಕೆ ದೂರು ನೀಡಿದ್ದಳು. ಗಾಯಗೊಂಡಿದ್ದ ಬಾಲಕಿಯನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಪೊಲೀಸ್ ತನಿಖೆಯಲ್ಲಿ ಬಯಲಾದ ಸತ್ಯ: ದೂರು ದಾಖಲಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಬೆಳ್ತಂಗಡಿ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದರು. ದಿನವಿಡೀ ತನಿಖೆ ನಡೆಸಿದರೂ ವಿದ್ಯಾರ್ಥಿನಿ ಹೇಳಿದಂತಹ ಯಾವುದೇ ಓಮ್ನಿ ಕಾರು ಆ ಪ್ರದೇಶದಲ್ಲಿ ಸಂಚರಿಸಿದ್ದು ಪತ್ತೆಯಾಗಿರಲಿಲ್ಲ.

ಪೊಲೀಸರು ವಿದ್ಯಾರ್ಥಿನಿಯನ್ನು ಕೂಲಂಕಷವಾಗಿ ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಹೊರಬಿದ್ದಿದೆ. ಕಾಲೇಜಿಗೆ ಹೋಗಲು ಇಷ್ಟವಿಲ್ಲದ ಕಾರಣ, ಮನೆಯವರಿಗೆ ಕಾರಣ ನೀಡಲು ಆಕೆ ತಾನೇ ಬ್ಲೇಡ್‌ನಿಂದ ಕೈಗೆ ಗಾಯ ಮಾಡಿಕೊಂಡು ಈ ಅಪಹರಣದ ಕಥೆಯನ್ನು ಕಟ್ಟಿದ್ದಾಳೆ ಎಂಬುದು ತಿಳಿದುಬಂದಿದೆ.

ವಿದ್ಯಾರ್ಥಿನಿಯ ಈ ನಡೆಯಿಂದಾಗಿ ಕೆಲವು ಕಾಲ ಸ್ಥಳೀಯರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಸದ್ಯ ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ