ದುಬೈನಲ್ಲಿ ವಿಶ್ವದಲ್ಲೇ ಮೊದಲ ಬಾರಿಗೆ ತೇಲುವ ಮಸೀದಿ ನಿರ್ಮಾಣ: ಇದರ ವಿಶೇಷತೆ ಏನು..? ಹೇಗೆ ನಿರ್ಮಿಸಲಾಗುತ್ತೆ..? - Mahanayaka

ದುಬೈನಲ್ಲಿ ವಿಶ್ವದಲ್ಲೇ ಮೊದಲ ಬಾರಿಗೆ ತೇಲುವ ಮಸೀದಿ ನಿರ್ಮಾಣ: ಇದರ ವಿಶೇಷತೆ ಏನು..? ಹೇಗೆ ನಿರ್ಮಿಸಲಾಗುತ್ತೆ..?

24/09/2023

ದುಬೈ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಅದು ‘ನೀರಿನ ಮೇಲೆ ತೇಲುವ ಮಸೀದಿ’ ನಿರ್ಮಾಣ ಮಾಡುವ ಪ್ರಯತ್ನ. ಹೌದು. ದುಬೈನಲ್ಲಿ ಸ್ಪಟಿಕದಂತಹ ನೀರು ಇರುವಂತಹ ಕಾಲುವೆಗಳಲ್ಲಿ 5.5 ಕೋಟಿ ದಿರಹಂ ವೆಚ್ಚ ಮಾಡಿ ಅಂದರೆ ಸುಮಾರು 125 ಕೋಟಿ ರೂಪಾಯಿ ವೆಚ್ಚ ಮಾಡಿ ನೀರಿನ ಮೇಲೆ ತೇಲುವ ಮಸೀದಿ ನಿರ್ಮಿಸಲು ತೀರ್ಮಾನಿಸಲಾಗಿದೆ. ಅಲ್ಲದೇ ಇಸ್ಲಾಮಿಕ್ ವ್ಯವಹಾರಗಳು ಮತ್ತು ಚಾರಿಟೇಬಲ್ ಚಟುವಟಿಕೆಗಳ ಇಲಾಖೆಯ ಅಧಿಕಾರಿಗಳು ಮುಂದಿನ ವರ್ಷ ಮಸೀದಿಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುತ್ತೇವೆ ಎಂದು ಹೇಳಿದ್ದಾರೆ.

ವಿಶ್ವದಲ್ಲೇ ಮೊದಲ ಬಾರಿಗೆ ತೇಲುವ ಮಸೀದಿಯನ್ನು ನಿರ್ಮಿಸುವುದಾಗಿ ಯುಎಇ ಘೋಷಿಸಿದೆ. ಈ ಮಸೀದಿಯಲ್ಲಿ ಮೂರು ಮಹಡಿಗಳನ್ನು ನಿರ್ಮಿಸಲಾಗುವುದು ಎಂದು ಘೋಷಿಸಲಾಗಿದೆ. ಎಮಿರೇಟ್ಸ್​ ಇಸ್ಲಾಮಿಕ್ ಅಫೇರ್ಸ್ ಮತ್ತು ಚಾರಿಟಬಲ್ ಆಕ್ಟಿವಿಟೀಸ್ ಡಿಪಾರ್ಟ್‌ಮೆಂಟ್‌ನ ಕೃಪೆಯಿಂದಾಗಿ ಈ ವಿಶಿಷ್ಟ ಪ್ರಾರ್ಥನಾ ಸ್ಥಳವು ಪ್ರಸ್ತುತ ದುಬೈ ವಾಟರ್ ಕೆನಾಲ್‌ನಲ್ಲಿ ನಿರ್ಮಾಣ ಹಂತದಲ್ಲಿದೆ. ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವ ಮತ್ತು ದುಬೈಗೆ ಭೇಟಿ ನೀಡುವವರ ಸಂಖ್ಯೆಯನ್ನು ಹೆಚ್ಚಿಸುವ ಪ್ರಯತ್ನಗಳ ಭಾಗವಾಗಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.

ಮಸೀದಿಯು ವಿಶಿಷ್ಟ ಲಕ್ಷಣಗಳನ್ನು ಹೊಂದಿರುವ ಮೂರು ಅಂತಸ್ತಿನ ರಚನೆಯಾಗಿದೆ. ಒಂದೇ ಸಮಯದಲ್ಲಿ 50 ರಿಂದ 75 ಭಕ್ತರು ಪ್ರಾರ್ಥನೆ ಸಲ್ಲಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಮುಸಲ್ಮಾನರು ಪ್ರಾರ್ಥನೆಗಾಗಿ ವಿಶೇಷವಾಗಿ ನಿರ್ಮಿಸಲಾದ ಈ ತೇಲುವ ಮಸೀದಿಗೆ ಭೇಟಿ ನೀಡಬಹುದು. ಇದು ಎಮಿರೇಟ್ಸ್​​ನಲ್ಲಿ ಪ್ರಮುಖ ಆಕರ್ಷಣೆಯಾಗಿದೆ. ಅಲ್ಲದೇ ಈ ಮಸೀದಿಯು ಶೇಖ್ ಮಕ್ತೌಮ್ ಬಿನ್ ರಶೀದ್ ಅಲ್ ಮಕ್ತೌಮ್ ಅವರ ಕುರಾನ್‌ ಪ್ರದರ್ಶನವನ್ನು ಆಯೋಜಿಸುತ್ತದೆ.

ಈ‌ ಮಸೀದಿಯು ನೀರಿನ ಮೇಲೆ ಮೂರು ಮಹಡಿಗಳನ್ನು ಹೊಂದಿರುತ್ತದೆ. ಮುಂದಿನ ವರ್ಷದ ವೇಳೆಗೆ ಸಂದರ್ಶಕರಿಗೆ ಇಸ್ಲಾಮಿಕ್ ಉಪನ್ಯಾಸಗಳು, ಕಾರ್ಯಾಗಾರಗಳು ಇತ್ಯಾದಿಗಳಿಗಾಗಿ ಇಲ್ಲಿ ಸಭಾಂಗಣ ನಿರ್ಮಿಸಲಾಗುತ್ತದೆ. ಗಮನಾರ್ಹ ಸಂಗತಿಯೆಂದರೆ, ಈ ತೇಲುವ ಮಸೀದಿ ಎಲ್ಲಾ ಧರ್ಮದ ಜನರನ್ನು ಆಹ್ವಾನಿಸುತ್ತದೆ. ಸಂದರ್ಶಕರು ಸಾಧಾರಣವಾದ ಸಾಮಾನ್ಯವಾದ ಉಡುಗೆ ತೊಟ್ಟು ಬರಬಹುದು. ಆದರೆ ಇಸ್ಲಾಮಿಕ್ ಪದ್ಧತಿಗಳನ್ನು ಗೌರವಿಸಲು ಮನವಿ ಮಾಡಲಾಗಿದೆ.

ನೀರಿನೊಳಗಿನ ಡೆಕ್ ಅನ್ನು ಪ್ರಾರ್ಥನಾ ಪ್ರದೇಶವಾಗಿ ಬಳಸಲಾಗುವುದು. ಸುಮಾರು 50-75 ಮಂದಿ ನೀರಿನೊಳಗೆ ಪ್ರಾರ್ಥನೆ ಸಲ್ಲಿಸುವ ವಿಶಿಷ್ಟ ಅನುಭವವನ್ನು ಹೊಂದಬಹುದು. ಹೀಗಾಗಿ ಈ ವಿಚಾರ ಕುತೂಹಲ ಮೂಡಿಸಿದೆ.

ಇತ್ತೀಚಿನ ಸುದ್ದಿ