ಹತ್ಯೆಗೀಡಾದ ಭಾರತೀಯ ದಂಪತಿಯ ಪುತ್ರಿಯರಿಗೆ, ತಂದೆ-ತಾಯಿಗೆ ಗೋಲ್ಡ್ ವೀಸಾ ನೀಡಿದ ದುಬೈ | ನ್ಯಾಯ ಅಂದರೆ ಏನು? ಇಲ್ಲಿದೆ ನೋಡಿ - Mahanayaka

ಹತ್ಯೆಗೀಡಾದ ಭಾರತೀಯ ದಂಪತಿಯ ಪುತ್ರಿಯರಿಗೆ, ತಂದೆ-ತಾಯಿಗೆ ಗೋಲ್ಡ್ ವೀಸಾ ನೀಡಿದ ದುಬೈ | ನ್ಯಾಯ ಅಂದರೆ ಏನು? ಇಲ್ಲಿದೆ ನೋಡಿ

25/11/2020

ದುಬೈ:  ದುಬೈನಲ್ಲಿ ಹತ್ಯೆಗೀಡಾದ ಭಾರತೀಯ ದಂಪತಿಗಳ ಮಕ್ಕಳಿಗೆ ಅಲ್ಲಿನ ಸರ್ಕಾರ ನೀಡಿದ ನ್ಯಾಯ ಎಂತಹದ್ದು ಗೊತ್ತೆ? ಈ ಸುದ್ದಿಯನ್ನು ಓದಿದರೆ, ನಮ್ಮ ದೇಶದಲ್ಲಿ ರಾಜಕಾರಣಿಗಳ ನಿರ್ಲಕ್ಷ್ಯದಿಂದ ಕಾನೂನು ವ್ಯವಸ್ಥೆ ಹದಗೆಟ್ಟು, ಮಾನವೀಯತೆ ಮರೆಯಾಗಿದೆ ಎನ್ನುವುದನ್ನು ನಾವು ತಿಳಿಯಬಹುದು.  ಅಷ್ಟಕ್ಕೂ ಈ ಘಟನೆ ಏನು? ಬನ್ನಿ ಈ ರಿಯಲ್ ಸ್ಟೋರಿ ಓದಿ…


Provided by

ಅಂದು ಜೂನ್ 18. ದುಬೈನ ಅರೇಬಿಯನ್ ರಾಂಚೆಸ್‌ ನಲ್ಲಿ  ನಡೆಯಬಾರದ ಘಟನೆಯೊಂದು ನಡೆದೇ ಹೋಗಿತ್ತು.  ಭಾರತೀಯ ದಂಪತಿಗಳಾದ ಹಿರೆನ್ (48) ಮತ್ತು ವಿಧಿ ಅಧಿಯಾ (40) ಅವರ ಸುಂದರ ಕುಟುಂಬದ ಸಂತೋಷವನ್ನು ಕಿತ್ತುಕೊಳ್ಳಲು ಪಾಕಿಸ್ತಾನ ಮೂಲದ ಕಾರ್ಮಿಕನೊಬ್ಬನ ದುಷ್ಕೃತ್ಯ ಕಾರಣವಾಗಿತ್ತು. ರಾತ್ರಿ ಮನೆಗೆ ನುಗ್ಗಿದ ಪಾಕಿಸ್ತಾನದ ಕಾರ್ಮಿಕನೋರ್ವ, ದರೋಡೆಗಾಗಿ ಮನೆಯವರ ಮೇಲೆ ಮನ ಬಂದಂತೆ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಈ ದಾಳಿ ಹೇಗಿತ್ತೆಂದರೆ,  ಪತಿಗೆ 10 ಬಾರಿ ಚಾಕುವಿನಿಂದ ಆತ ಇರಿದಿದ್ದ. ಪತ್ನಿಗೆ 14 ಬಾರಿ ಚಾಕುವಿನಿಂದ ಇರಿದಿದ್ದ, ಈ ಸದ್ದು ಗದ್ದಲ, ಕಿರುಚಾಟ ಕೇಳಿ ಓಡೋಡಿ ಬಂದು ದರೋಡೆಕೋರನನ್ನು ಹಿಡಿಯಲು ಬಂದ ದಂಪತಿಯ ಹಿರಿಯ ಮಗಳಿಗೂ ದರೋಡೆಕೋರ ಇರಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ. ಆದರೆ, ಆಕೆ  ಹೇಗೋ ಆತನಿಂದ ತಪ್ಪಿಸಿಕೊಂಡು ಪೊಲೀಸರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಳು.

ಈ ದರೋಡೆ ಯತ್ನ ಹಾಗೂ ಭೀಕರ ಕೊಲೆ ನಡೆದು 24 ಗಂಟೆಗಳೊಳಗೆ ದರೋಡೆಕೋರನನ್ನು ದುಬೈ ಪೊಲೀಸರು ಬಂಧಿಸಿದ್ದರು. ಅಧಿಯಾ ದಂಪತಿಯ ಹತ್ಯೆಯ ನಂತರ ಅವರ ಇಬ್ಬರು ಪುತ್ರಿಯರು ಅನಾಥರಾಗಿದ್ದರು. ಇವರಿಬ್ಬರ ಜೊತೆಗೆ ಅವರ ಕುಟುಂಬದಲ್ಲಿದ್ದ ಇವರ ಅಜ್ಜ-ಅಜ್ಜಿ ಕೂಡ ಅನಾಥರಾಗಿದ್ದರು. ಇದೇ ಸಂದರ್ಭದಲ್ಲಿ ದುಬೈ ಪೊಲೀಸರು ಮತ್ತು ಸರ್ಕಾರ ಅಪರಾಧಿಯನ್ನು ಬಂಧಿಸುವುದಷ್ಟೇ ನಮ್ಮ ಕೆಲಸ ಎಂದು ಸುಮ್ಮನಾಗಲಿಲ್ಲ. ಅವರು ಈ ಅನಾಥ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಿದರು. ಕುಟುಂಬದ ಜೊತೆಗೆ ಪೊಲೀಸರು, ಸರ್ಕಾರದ ಅಧಿಕಾರಿಗಳು ಸಂಪರ್ಕದಲ್ಲಿದ್ದರು.


Provided by

ಹಿರೆನ್ ಮತ್ತು ವಿಧಿ ಅಧಿಯಾ ದಂಪತಿ ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕು ಎಂದು ಆಸೆಪಟ್ಟಿದ್ದರು ಎಂಬ ವಿಚಾರ ತಿಳಿದುಕೊಂಡ ದುಬೈ ಪೊಲೀಸರು, ಅವರ ಆಸೆಯನ್ನು ಈಡೇರಿಸಲು  ಮುಂದೆ ನಿಂತರು.  ಯುಎಇಯಲ್ಲಿ ಇಬ್ಬರು ಸಹೋದರಿಯರು ವಿದ್ಯಾಭ್ಯಾಸ ಮುಂದುವರಿಸಲು ಕ್ರಮಕೈಗೊಂಡರು. ಮತ್ತು ದುಬೈ ಸರ್ಕಾರವು ಈ ಸಹೋದರಿಯರ ಶಿಕ್ಷಣಕ್ಕಾಗಿ ಭಾರೀ ಮೊತ್ತದ ಹಣವನ್ನು ಮೀಸಲಿಟ್ಟಿದೆ. ಜೊತೆಗೆ ಈ ಇಬ್ಬರು ವಿದ್ಯಾರ್ಥಿನಿಯರಿಗೆ ತಮ್ಮ ಅಜ್ಜ-ಅಜ್ಜಿಯ ಜೊತೆಗೆ ವಾಸಿಸಲು ಪ್ರತ್ಯೇಕ ಸ್ಥಳವನ್ನೂ ಸರ್ಕಾರ ನೀಡಿತು.

ಇದೀಗ ದುಬೈ ಸರ್ಕಾರವು, ದುಬೈ ಪೊಲೀಸರು, ದುಬೈನ ರೆಸಿಡೆನ್ಸಿ ಮತ್ತು ವಿದೇಶಿಯರ ವ್ಯವಹಾರಗಳ ಸಾಮಾನ್ಯ ನಿರ್ದೇಶನಾಲಯ (GDRFA)ದ ಸಹಕಾರದೊಂದಿಗೆ ಈ ಸಹೋದರಿಯರಿಗೆ ಹಾಗೂ ಅವರ ಅಜ್ಜ-ಅಜ್ಜಿಗೆ ಗೋಲ್ಡ್ ವೀಸಾ ನೀಡಿದ್ದು, ಇದು ಸಾಂತ್ವಾನದ ಭಾಗ ಎಂದು ಭಾವಿಸಿದೆ. ದುಬೈ ಪೊಲೀಸರ ಕಮಾಂಡರ್-ಇನ್-ಚೀಫ್ ಲೆಫ್ಟಿನೆಂಟ್ ಜನರಲ್ ಅಬ್ದುಲ್ಲಾ ಖಲೀಫಾ ಅಲ್ ಮೆರ್ರಿ ಮತ್ತು GDRFA-ದುಬೈ ಮಹಾನಿರ್ದೇಶಕ ಮೇಜರ್ ಜನರಲ್ ಮೊಹಮ್ಮದ್ ಅಹ್ಮದ್ ಅಲ್ ಮರ್ರಿ  ಹಾಗೂ ಇತರ ಹಿರಿಯ ಅಧಿಕಾರಿ ಗೋಲ್ಡ್ ವೀಸಾ ಕಾರ್ಡ್ ನ್ನು ಸಹೋದರಿಯರಿಗೆ ಹಾಗೂ ಅವರ ಅಜ್ಜ ಮತ್ತು ಅಜ್ಜಿಗೆ ಹಸ್ತಾಂತರಿಸಿದರು.


ಅನಾಥ ಸಹೋದರಿಯರಿಗೆ ಗೋಲ್ಡ್ ವಿಸಾ ನೀಡುವುದು ನೊಂದ ಕುಟುಂಬಕ್ಕೆ ಯುಎಇ ನೀಡುವ ಸಾಂತ್ವನದ ಹಾಗೂ ಮಾನವೀಯ ಕಾರ್ಯದ ಪ್ರತಿಬಿಂಬವಾಗಿದೆ.  ನೊಂದವರ ಮುಖದಲ್ಲಿ ಮಂದಹಾಸ ಮೂಡಿಸುವ ಕಾರ್ಯವಾಗಿ ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ ಎಂದು ಲೆಫ್ಟಿನೆಂಟ್ ಜನರಲ್ ಅಲ್ ಮೆರ್ರಿ ಹೇಳಿದ್ದಾರೆ.

ಕೊವಿಡ್ 19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಯಾರನ್ನೂ ಯಾರೂ ಗಮನಿಸದಂತಹ ಸಂದರ್ಭ ಇಡೀ ವಿಶ್ವದಲ್ಲಿ ತಲೆದೋರಿತ್ತು. ಈ ಸಂದರ್ಭದಲ್ಲಿ  ಭಾರತದ ವಾಯು ಮಾರ್ಗವನ್ನೂ ಬಂದ್ ಮಾಡಲಾಗಿತ್ತು. ಈ ವೇಳೆ ಕೂಡ ಅಧಿಕಾರಿಗಳ ಸಹಕಾರದೊಂದಿಗೆ  ಇಬ್ಬರು ಸಹೋದರಿಯರಿಗೆ ಭಾರತಕ್ಕೆ ಮರಳಲು ದುಬೈ ಪೊಲೀಸರು ವಿಶೇಷ ಪರವಾನಗಿ ನೀಡಿದ್ದರು. ಇದಲ್ಲದೇ ಕ್ಯಾಪ್ಟನ್ ಅಬ್ದುಲ್ಲಾ ಅಲ್ ಶೇಖ್ ಅವರು ಭಾರತದಲ್ಲಿದ್ದ ಸಹೋದರಿಯರಿಗೆ ತಂದೆಯ ಸ್ಥಾನದಲ್ಲಿ ನಿಂತು ಅವರ ಯೋಗ ಕ್ಷೇಮ ವಿಚಾರಿಸುತ್ತಿದ್ದರು. ಅಲ್ಲದೇ ಅವರ ತಂದೆಯ ಆಶಯವನ್ನು ಈಡೇರಿಸುವ ಎಲ್ಲ ಕ್ರಮಗಳಿಗೆ ಮುಂದೆ ನಿಂತಿದ್ದರು.

ದುಬೈನ ಕೆನಡಿಯನ್ ವಿಶ್ವವಿದ್ಯಾಲಯದ ಅಧ್ಯಕ್ಷ ಮತ್ತು ಅಧ್ಯಕ್ಷರಾದ ಡಾ. ಕರೀಮ್ ಚೆಲ್ಲಿ ಈ ಇಬ್ಬರು ಸಹೋದರಿಯರ ಸಂಪೂರ್ಣ ವಿದ್ಯಾಭ್ಯಾಸದ ಹೊಣೆಯನ್ನು ಹೊತ್ತುಕೊಂಡಿದ್ದು, ಎಲ್ಲ ಖರ್ಚುಗಳನ್ನು ನಾವು ಭರಿಸುವುದಾಗಿ ಹೇಳಿದ್ದಾರೆ. ಜೊತೆಗೆ ದುಬೈನ ರೆಪ್ಟನ್ ಶಾಲೆಯ ಡೇವಿಡ್ ಕುಕ್, ಇಬ್ಬರು ಸಹೋದರಿಯರು ಪದವಿ ಮುಗಿಸುವವರೆಗೂ  ಸಂಪೂರ್ಣ ವಿದ್ಯಾರ್ಥಿ ವೇತವನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿ