ಅಂತ್ಯ? ಲೆಬನಾನ್ ಜೊತೆಗೆ ಕದನ ವಿರಾಮ ಘೋಷಿಸಿದ ಇಸ್ರೇಲ್
ಒಂದು ವರ್ಷ ಕಳೆದರೂ ಗಾಝಾದಲ್ಲಿ ಕದನ ವಿರಾಮ ಏರ್ಪಡಿಸಲು ಒಪ್ಪಿಕೊಳ್ಳದ ಇಸ್ರೇಲ್ ಇದೀಗ ಕೇವಲ ಒಂದೇ ತಿಂಗಳ ಒಳಗೆ ಲೆಬನಾನ್ ಜೊತೆಗೆ ಕದನ ವಿರಾಮ ಘೋಷಿಸಿದೆ. ನವಂಬರ್ 27 ರ ಮುಂಜಾನೆ ನಾಲ್ಕು ಗಂಟೆಯಿಂದ ಈ ಕದನ ವಿರಾಮ ದ ಸಮಯ ಆರಂಭವಾಗಲಿದೆ. ಮುಂದಿನ ಎರಡು ತಿಂಗಳವರೆಗೆ ಈ ಕದನ ವಿರಾಮ ಜಾರಿಯಲ್ಲಿ ಇರುತ್ತದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಈ ಒಪ್ಪಂದದ ಪ್ರಕಾರ ಹಿಝ್ಬುಲ್ಲ ಪಶ್ಚಿಮ ಪ್ರದೇಶದಿಂದ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳಬೇಕಾಗುತ್ತದೆ. ಹಾಗೆಯೇ ಲಬನಾನ್ ಗಡಿಯಿಂದ ಇಸ್ರೇಲ್ ತನ್ನ ಸೇನೆಯನ್ನು ಹಿಂದಕ್ಕೆ ಪಡೆಯಬೇಕಾಗುತ್ತದೆ. ಈ ಕದನ ವಿರಾಮದ ಬಗ್ಗೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರು ಮೊದಲಾಗಿ ಮಾಧ್ಯಮದ ಮುಂದೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆದರೆ ಹಿಝ್ಬುಲ್ಲ ಈವರೆಗೆ ನೇರವಾಗಿ ಏನನ್ನೂ ಹೇಳಿಲ್ಲ. ಲೆಬನಾನ್ ಪಾರ್ಲಿಮೆಂಟ್ ನಲ್ಲಿ ವಿಷಯ ಚರ್ಚೆಯಾಗಲಿದೆ ಎಂದು ತಿಳಿದುಬಂದಿದೆ.
ಈ ಕದನ ವಿರಾಮವನ್ನು ಜಾಗತಿಕ ರಾಷ್ಟ್ರಗಳು ಸ್ವಾಗತಿಸಿವೆ. ಕಳೆದೊಂದು ವರ್ಷದಲ್ಲಿ ಇಸ್ರೇಲ್ ದಾಳಿಗೆ ಲೆಬನಾನ್ ನಲ್ಲಿ 3700 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಾಗೆಯೇ ಹಿಝ್ಬುಲ್ಲ ನಾಯಕ ಹಸನ್ ನಸ್ರುಲ್ಲಾ ಸೇರಿದಂತೆ ಅನೇಕ ನಾಯಕರ ಹತ್ಯೆಯೂ ನಡೆದಿದೆ. ಇದೇ ವೇಳೆ ಹಿಝ್ ಬುಲ್ಲಾದ ಜೊತೆಗೆ ಇದು ಸಂಪೂರ್ಣ ಯುದ್ಧ ವಿರಾಮದ ಘೋಷಣೆ ಅಲ್ಲ ಎಂದು ಇಸ್ರೇಲ್ ಹೇಳಿಕೊಂಡಿದೆ.
ಕಳೆದ 24 ಗಂಟೆಗಳ ಒಳಗೆ ಇಸ್ರೇಲ್ ನಡೆಸಿದ ದಾಳಿಗೆ 36 ಮಂದಿ ಸಾವಿಗೀಡಾಗಿದ್ದಾರೆ. ಇನ್ನೊಂದಡೆ ಹಿಝ್ಬುಲ್ಲಾ ಕೂಡ ಬಿಟ್ಟು ಕೊಟ್ಟಿಲ್ಲ. ಇಸ್ರೇಲ್ ನ ಒಳಗೆ ಅದು ನಡೆಸಿದ ದಾಳಿಯಿಂದ ಸಾಕಷ್ಟು ಹಾನಿ ಉಂಟಾಗಿದೆ ಎಂದು ತಿಳಿದುಬಂದಿದೆ. ಪ್ರಧಾನಿ ಅವರೇ ತನ್ನ ಮನೆಯನ್ನು ಬಿಟ್ಟು ಬಂಕರ್ ನಲ್ಲಿ ಅಡಗಿ ಕೊಳ್ಳುವಂತಹ ಪರಿಸ್ಥಿತಿಯನ್ನು ಹಿಝ್ಬುಲ್ಲಾ ನಿರ್ಮಿಸಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj