ಕಾಫಿನಾಡಲ್ಲಿ ಅರಣ್ಯ ಸಚಿವರ ಮಾತಿಗೂ ಕವಡೆ ಕಾಸಿನ ಕಿಮ್ಮತ್ತಿಲ್ಲ…!
ಕೊಟ್ಟಿಗೆಹಾರ: ಸರ್ಕಾರದ ನಿರ್ಬಂಧದ ನಡುವೆಯೂ ಮೂಡಿಗೆರೆ ತಾಲೂಕಿನ ಪ್ರವಾಸಿ ತಾಣ ಎತ್ತಿನಭುಜದಲ್ಲಿ ಭಾನುವಾರ ಮತ್ತೆ 200ಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದಾರೆ. ಆದರೆ, ಸರ್ಕಾರದ ನಿಯಮ, ಅರಣ್ಯ ಸಚಿವರ ಆದೇಶಕ್ಕೆ ಬೆಲೆ ಇಲ್ಲವೇ ಎಂಬ ಪ್ರಶ್ನೆ ಕಾಡುತ್ತಿದೆ.
ಸರ್ಕಾರದ ಮಟ್ಟದಲ್ಲಿ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಒಂದು ಕಾನೂನು ಮಾಡಿದರೆ, ಜಿಲ್ಲೆ–ತಾಲೂಕು ಕೇಂದ್ರದಲ್ಲಿನ ಅಧಿಕಾರಿಗಳು ಮತ್ತೊಂದು ಮಾಡುತ್ತಾರೆ. ಜನ ಸಾಮಾನ್ಯರು ಹಾಗೂ ಪ್ರಕೃತಿ ಅನುಕೂಲಕ್ಕಾಗಿ ಒಂದು ಕಾನೂನನ್ನ ಜಾರಿಗೆ ತಂದಿದ್ದರೆ ಅಧಿಕಾರಿಗಳು ಅದನ್ನ ಸಂಪೂರ್ಣ ಗಾಳಿಗೆ ತೂರಿದ್ದಾರೆ.
ಭಾರೀ ಮಳೆ ಮಧ್ಯೆಯೂ ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರವಾಸಿಗರು ಎಣ್ಣೆ–ಗಾಂಜಾ ಹೊಡೆದುಕೊಂಡು ಮೋಜು–ಮಸ್ತಿ ಮಾಡುತ್ತಿದ್ದ ಪರಿಣಾಮ, ಒಂದೆಡೆ ಭಾರೀ ಮಳೆ, ಮತ್ತೊಂದೆಡೆ ಕಿರಿದಾದ ಮಾರ್ಗವೆಂದು ಮುಂಜಾಗೃತ ಕ್ರಮವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಅರಣ್ಯ ಸಚಿವ ಈಶ್ವರಖಂಡ್ರೆ ಹಾಗೂ ಹಿರಿಯ ಅಧಿಕಾರಿಗಳು ಮುಳ್ಳಯ್ಯನಗಿರಿ, ದತ್ತಪೀಠ ಸೇರಿದಂತೆ ಮೂಡಿಗೆರೆ ತಾಲೂಕಿನ ಬಾಳೂರು ಸಮೀಪದ ದೇವರಮನೆಗುಡ್ಡ, ಎತ್ತಿನಭುಜ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ತಾತ್ಕಾಲಿಕ ನಿರ್ಬಂಧ ಹೇರಿದ್ದರು.
ಅವುಗಳಲ್ಲಿ ಕೆಲ ತಾಣಗಳಿಗೆ ವಿಧಿಸಿದ್ದ ನಿರ್ಬಂಧ ತೆರವುಗೊಳಿಸಲಾಗಿದೆ. ಆದರೆ, ಮೂಡಿಗೆರೆ ತಾಲೂಕಿನ ದೇವರಮನೆಗುಡ್ಡ–ಎತ್ತಿನಭುಜಕ್ಕೆ ವಿಧಿಸಿದ್ದ ತೆರವನ್ನ ಹಾಗೇ ಮುಂದುವರಿಸಿದೆ. ಆದರೆ, ಭಾನುವಾರ ಮತ್ತೆ 200ಕ್ಕೂ ಹೆಚ್ಚು ಜನ ಅದೇ ನಿರ್ಬಂಧ ಜಾಗಕ್ಕೆ ಭೇಟಿ ನೀಡಿ ಮತ್ತೆ ಮೋಜು–ಮಸ್ತಿಯಲ್ಲಿ ತೊಡಗಿದ್ದಾರೆ.
ಹಾಗಾದರೆ, ಸರ್ಕಾರ, ಸಚಿವರ ಆದೇಶಕ್ಕೆ ಬೆಲೆ ಇಲ್ಲವೇ ಎಂಬ ಪ್ರಶ್ನೆ ಜನಸಾಮಾನ್ಯರನ್ನ ಕಾಡ್ತಿದೆ. ಎತ್ತಿನಭುಜದ ಬಳಿ ಪೊಲೀಸರು ಇಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಇಲ್ಲ. ಆ ಜಾಗದಲ್ಲಿ ಯಾರೂ ಇರಲ್ಲ. ಮತ್ತೆ ಅದೇ ಜಾಗದಲ್ಲಿ ಏನಾದ್ರು ಅನಾಹುತವಾದರೆ ಜವಾಬ್ದಾರಿ ಯಾರು ಎಂಬ ಪ್ರಶ್ನೆ ಸಾರ್ವಜನಿಕರನ್ನ ಕಾಡುತ್ತಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: