ಮೊದಲ Dictionary: "ನಿಂಘಟು ಜೊತೆಗೆ ನಿಮಗೆಷ್ಟು ನಂಟು" ಒಂದು ನೋಟ - Mahanayaka
11:02 AM Thursday 7 - November 2024

ಮೊದಲ Dictionary: “ನಿಂಘಟು ಜೊತೆಗೆ ನಿಮಗೆಷ್ಟು ನಂಟು” ಒಂದು ನೋಟ

dictionary
21/10/2024

–ಉದಂತ ಶಿವಕುಮಾರ್

ಒಂದು ಭಾಷೆಯಲ್ಲಿರುವ ಎಲ್ಲಾ ಪದಗಳನ್ನು ಆಕಾರಾದಿಯಾಗಿ ಜೋಡಿಸಿ ಅವುಗಳಿಗೆ ಅರ್ಥ ಹೇಳುವ ಗ್ರಂಥ ನಿಘಂಟು. ಪದಗಳು ಯಾವ ಭಾಷೆಯಲ್ಲಿವೆಯೋ ಅರ್ಥ ಅದೇ ಭಾಷೆಯಲ್ಲಿ ಇರಬಹುದು, ಇಲ್ಲವೇ ಒಂದು ಭಾಷೆಯ ಪದಗಳಿಗೆ ಇನ್ನೊಂದು ಭಾಷೆಯಲ್ಲಿ ಅರ್ಥವಿರಬಹುದು. ನಿಘಂಟಿನಲ್ಲಿ ಪದಗಳ ಅರ್ಥ ಮಾತ್ರವಲ್ಲದೆ ಅವುಗಳ ಉಚ್ಚಾರಣೆಯೂ ಇರುತ್ತದೆ. ಪದಗಳ ಅರ್ಥ, ಉಚ್ಚಾರಣೆ, ಇವುಗಳ ಜೊತೆಗೆ ಪದಗಳ ವ್ಯಾಕರಣ, ಅವು ಆ ಭಾಷೆಗೆ ಸೇರಿದ್ದೇ ಅಥವಾ ಪರಭಾಷೆಯಿಂದ ಬಂದದ್ದೇ, ಆ ಪದದ ಮೂಲರೂಪ ಏನು, ಹೇಗೆ ಬೆಳೆದುಕೊಂಡು ಬಂದಿದೆ ಎಂಬುದನ್ನೆಲ್ಲ ಒಳ್ಳೆಯ ನಿಘಂಟು ತಿಳಿಸುತ್ತದೆ. ಪದಗಳಿಗೆ ಅರ್ಥ ತಿಳಿಸುವುದರ ಜೊತೆಗೆ ಸಮಾನಾರ್ಥ ಶಬ್ದಗಳನ್ನು ಕೊಡುತ್ತದೆ.

ಕ್ರಿಸ್ತಶಕ ಒಂದನೆಯ ಶತಮಾನದಲ್ಲಿ ಗ್ರೀಸ್ ನಲ್ಲಿ ಅಪೊಲೋನಿಯಸ್ ಎಂಬಾತ ಒಂದು ಪದಕೋಶವನ್ನು ರಚಿಸಿದ. ಅರಬರು, ಗ್ರೀಕರು, ರೋಮನ್ನರು ಕಷ್ಟವಾದ, ಅಪೂರ್ವವಾದ ಪದಗಳನ್ನು ಮಾತ್ರ ನಿಘಂಟಿನಲ್ಲಿ ಸೇರಿಸುತ್ತಿದ್ದರು. ಭಾರತದಲ್ಲಿ ಕ್ಲಿಷ್ಟವಾದ ವೈದಿಕ ಶಬ್ದಗಳ ಸಂಗ್ರಹ ನಿಘಂಟು ಎಂದು ಪ್ರಸಿದ್ಧವಾಯಿತು. ಈ ನಿಘಂಟು ವೇದದಷ್ಟೇ ಪವಿತ್ರವೆಂದು ಹೆಸರು ಪಡೆದಿದೆ. ಈ ನಿಘಂಟು ಐದು ಅಧ್ಯಾಯಗಳಲ್ಲಿದೆ. ಮೊದಲ ಮೂರು ಅಧ್ಯಾಯಗಳಿಗೆ “ನೈಘಂಟಿಕ ಕಾಂಡ” ಎಂದು ಹೆಸರು. ನೈಘಂಟಿಕ ಕಾಂಡದಲ್ಲಿ ಒಂದೇ ಅರ್ಥವುಳ್ಳ ಅನೇಕ ಪದಗಳ 69 ಗಣಗಳಿವೆ. ಒಟ್ಟು 1341 ಪದಗಳಿವೆ. ಉಳಿದ ಎರಡು ಕಾಂಡಗಳಾದ “ನೈಗಮಕಾಂಡ” “ದೈವತಕಾಂಡ” ಇವುಗಳಲ್ಲಿ 278 ಮತ್ತು 151 ಪದಗಳು ಕ್ರಮವಾಗಿ ಇವೆ. ಹೀಗೆ ಒಟ್ಟು ನಿಘಂಟಿನಲ್ಲಿ 1770 ಪದಗಳಿವೆ. ವೇದ ಮಂತ್ರಗಳ ಅರ್ಥವನ್ನು ತಿಳಿಯಲು ಈ ನಿಘಂಟು ಬಹಳ ಉಪಯೋಗಕರ. ಈ ನಿಘಂಟಿನ ಅನಂತರ ಬಂದ ವೇದಾಂಗಗಳಲ್ಲಿ ಒಂದಾದ “ನಿರುಕ್ತ ನಿಘಂಟು” ಗ್ರಂಥದ ವಿವರಣೆ. ನಿರುಕ್ತವೂ ಒಂದು ರೀತಿಯ ನಿಘಂಟು. ಸುಮಾರು ಮೂರು ನಾಲ್ಕನೆಯ ಶತಮಾನದ ಅಮರಕೋಶವು ಒಂದು ನಿಘಂಟು. 13,000 ಪದಗಳಿರುವ ಈ ಅಮರಕೋಶ ಸಂಸ್ಕೃತ ಭಾಷೆಯಲ್ಲಿದೆ. ಇದನ್ನು ಬರೆದವನು ಅಮರಸಿಂಹ.ಹತ್ತನೆಯ ಶತಮಾನಕ್ಕೆ ಸೇರಿದ “ರನ್ನ ಕಂದ” ಮೊದಲನೆಯ ಕನ್ನಡ ನಿಘಂಟು.

1552 ರಲ್ಲಿ ಪ್ರಕಟವಾದ ರಿಚರ್ಡ್ ಹ್ಯೂಲೊಯೆಟ್ ನ ನಿಘಂಟು ಹಾಗೂ 1604ರಲ್ಲಿ ಪ್ರಕಟವಾದ ರಾಬರ್ಟ್ ಕಾಡ್ರೆ ಬರೆದ ನಿಘಂಟು ಇವು ಆಂಗ್ಲ ಭಾಷೆಯಲ್ಲಿ ಪ್ರಕಟವಾದ ಪ್ರಥಮ ನಿಘಂಟುಗಳು. ಡಿಕ್ಷನರಿ ಎಂಬ ಹೆಸರು ಹೊತ್ತ ಮೊದಲ ನಿಘಂಟು ಹೆನ್ರಿಕೋಕ್ ರಾೄಮಿನ “ಇಂಗ್ಲಿಷ್ ಡಿಕ್ಷನರಿ” 1623ರಲ್ಲಿ ಪ್ರಕಟವಾಯಿತು. ಪ್ರಸಿದ್ಧ ಸಾಹಿತಿ ಸ್ಯಾಮ್ಯುಯಲ್ ಜಾನ್ ಸನ್ ನಿಘಂಟು 1775ರಲ್ಲಿ ಪ್ರಕಟವಾಗಿ, ಬಹಳ ಜನಪ್ರಿಯವಾಯಿತು. ಜಾನ್ಸನ್ ಪದಗಳ ಅರ್ಥ ನಿರೂಪಣೆಯಲ್ಲಿ ಹಾಸ್ಯವನ್ನು ಬೆರೆಸಿದ. ಅವತರಣಿಕೆಗಳಿಂದ ಪದಗಳ ಅರ್ಥವನ್ನು ವಿವರಿಸುವ ಪದ್ಧತಿಯನ್ನು ಆರಂಭಿಸಿದ್ದು ಈತನೇ. ನೋಆ ವೆಬ್ ಸ್ಟರ್ ಎಂಬಾತ ಅಮೆರಿಕದಲ್ಲಿ ಇಂಗ್ಲಿಷ್ ಭಾಷೆಯ ನಿಘಂಟನ್ನು 1828 ರಲ್ಲಿ ಪ್ರಕಟಿಸಿದ. 20 ವರ್ಷಗಳ ಪರಿಶ್ರಮದ ಫಲವಾಗಿ ಪ್ರಕಟವಾದ ಈ ನಿಘಂಟಿನಲ್ಲಿ 70,000 ಕ್ಕಿಂತ ಹೆಚ್ಚು ಪದಗಳಿಗೆ ಅರ್ಥ ಕೊಟ್ಟಿದೆ. ಈ ನಿಘಂಟನ್ನು ಪರಿಷ್ಕರಿಸಿದಾರೆ. ಅದನ್ನು ವೆಬ್ ಸ್ಟರ್ ಇಂಟರ್ನ್ಯಾಷನಲ್ ಡಿಕ್ಷನರಿ ಎಂದು ಕರೆಯುತ್ತಾರೆ. 1884ರಲ್ಲಿ ಆರಂಭವಾಗಿ 1928 ರಲ್ಲಿ ಮುಗಿದ ಆಕ್ಸ್ ಫರ್ಡ್ ನಿಘಂಟಿನಲ್ಲಿ 4,30,000 ವಿವರಣೆಗಳಿವೆ. 18, 27,306 ಅವತರಿಣಿಕೆಗಳು ಇವೆ. ವೆಬ್ಸ್ ಟೂರ್ನಿ ಮೂರನೆಯ ಅಂತರರಾಷ್ಟ್ರೀಯ ನಿಘಂಟಿನಲ್ಲಿ 5 ಲಕ್ಷಕ್ಕೂ ಹೆಚ್ಚು ಪದಗಳಿವೆ. ಈ ದೊಡ್ಡ ನಿಘಂಟುಗಳ ಆಧಾರದ ಮೇಲೆ ಅನೇಕ ಸಣ್ಣ ಸಣ್ಣ ನಿಘಂಟುಗಳು ಈಗ ಬಂದಿದೆ. ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ನಿಘಂಟುಗಳಿವೆ. ಕೆಲವು ನಿಘಂಟುಗಳು ಸಚಿತ್ರವಾಗಿಯೂ ಇರುತ್ತವೆ.

ನಿಘಂಟು ಒಂದೇ ಭಾಷೆಯದಾಗಿರಬೇಕಾಗಿಲ್ಲ. ಒಂದು ಭಾಷೆಯ ಪದಗಳ ವಿಷಯವನ್ನು ಇನ್ನೊಂದು ಭಾಷೆಯಲ್ಲಿ ತಿಳಿಸಬಹುದು. ಇದು ಮೊದಲನೆಯ ಭಾಷೆಯನ್ನು ಕಲಿಯುವ ಎರಡನೆಯ ಭಾಷೆಯವರಿಗೆ ಸಹಾಯವಾಗುತ್ತದೆ. ಫರ್ಗ್ಯುಸನ್ ಎಂಬುವನು ಸಂಪಾದಿಸಿ 1773 ರಲ್ಲಿ ಲಂಡನಿನಲ್ಲಿ ಪ್ರಕಟವಾದ ಇಂಗ್ಲಿಷ್-ಹಿಂದೂಸ್ತಾನಿ ಮತ್ತು ಹಿಂದೂಸ್ತಾನಿ-ಇಂಗ್ಲಿಷ್ ಕೋಸಶವೇ ಆಧುನಿಕ ಭಾರತೀಯ ಭಾಷೆಗಳಲ್ಲಿ ಮೊದಲನೆಯ ನಿಘಂಟು. ಇದು ರೋಮನ್ ಲಿಪಿಯಲ್ಲಿ ಅಚ್ಚಾಗಿದೆ. 1824ರಲ್ಲಿ ಪ್ರಕಟವಾದ ವಿಲಿಯಂ ರೀವ್ ವಿರಚಿತ ಇಂಗ್ಲಿಷ್-ಕನ್ನಡ ನಿಘಂಟು ಈ ಎರಡು ಭಾಷೆಗಳ ಮೊದಲ ನಿಘಂಟು. ಕನ್ನಡದಲ್ಲಿ ಇಂದಿಗೂ ಮೇಲು ಕೃತಿಯಾಗಿ ನಿಂತಿರುವುದು ರೆವೆರೆಂಡ್ ಎಫ್ ಕಿಟಲ್ ವಿರಚಿತ ಶಬ್ದಕೋಶ. 1894 ರಲ್ಲಿ ಪ್ರಕಟವಾದ ಕಿಟಲ್ ನಿಘಂಟು ಮಹತ್ವದ್ದಾಗಿದೆ. ಕಿಟಲ್ ಶಬ್ದಕೋಶದಲ್ಲಿ ಕನ್ನಡ ಜಾನಪದ, ಶಿಷ್ಟ, ಗ್ರಾಂಥಿಕ ಹಾಗೂ ವ್ಯವಹಾರಿಕ ಪದಗಳೂ ಅವುಗಳಿಗೆ ಅರ್ಥವು ಇವೆ. ಕಿಟಲ್ ಶಬ್ದಕೋಶದ ವೈಶಿಷ್ಟ್ಯವೆಂದರೆ ಪದಗಳಿಗೆ ಸಂಬಂಧಿಸಿದಂತೆ ಸಂಗ್ರಹಿತವಾಗಿರುವ ಗಾದೆಗಳು. ಈಗ ಈ ಶಬ್ದಕೋಶವನ್ನು ಮದರಾಸು ವಿಶ್ವವಿದ್ಯಾನಿಲಯ ಪರಿಷ್ಕರಿಸಿ ಪ್ರಕಟಿಸಿದೆ. ಮೈಸೂರು ವಿಶ್ವವಿದ್ಯಾನಿಲಯ ಸಿದ್ಧಪಡಿಸಿದ ಇಂಗ್ಲೀಷ್-ಕನ್ನಡ ನಿಘಂಟು 1946ರಲ್ಲಿ ಪ್ರಕಟವಾಯಿತು. ಇದೇ ವಿಶ್ವವಿದ್ಯಾನಿಲಯವು ಈಗ ಆ ನಿಘಂಟನ್ನು ಪರಿಸ್ಕರಿಸಿ ಪ್ರಕಟಿಸಿದೆ. ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಪದಗಳ ಬೃಹತ್ ಕೋಶವನ್ನು ಪ್ರಕಟಿಸಿದೆ.

ಈಚೆಗಿನ ವರ್ಷಗಳಲ್ಲಿ ಪಾಶ್ಚಾತ್ಯ ದೇಶಗಳಲ್ಲಿ ಶಾಸ್ತ್ರೀಯ ನಿಘಂಟುಗಳು ಬೆಳೆಯುತ್ತಿವೆ. ತತ್ವಶಾಸ್ತ್ರ, ವಾಸ್ತುಶಿಲ್ಪ ವಿಜ್ಞಾನ, ರಸಾಯನ ವಿಜ್ಞಾನ, ಭೌತವಿಜ್ಞಾನ, ಸಸ್ಯ ವಿಜ್ಞಾನ ಹೀಗೆ ಒಂದೊಂದು ಶಾಸ್ತ್ರಕ್ಕೂ ಸಂಬಂಧಿಸಿ ದಂತೆ ನಿಘಂಟುಗಳು ಪ್ರಕಟವಾಗಿವೆ. ಪದಗಳ ಉಚ್ಚಾರಣೆಯನ್ನು ಸ್ಪಷ್ಟ ಗೊಳಿಸುವ ನಿಘಂಟುಗಳು ಇವೆ. ನಿಘಂಟು ಪ್ರತಿಯೊಬ್ಬ ವಿದ್ಯಾವಂತನ ಹತ್ತಿರವೂ ಇರಲೇಬೇಕಾದ ಗ್ರಂಥ.ಸಾಮಾನ್ಯ ವಿದ್ಯಾರ್ಥಿಯಿಂದ ಹಲವು ಶಾಸ್ತ್ರಗಳ ತಜ್ಞರ ವರೆಗೆ, ಜ್ಞಾನ ಬಯಸುವವರಿಗೆ ನಿಘಂಟಿನ ಉಪಯೋಗ ಉಂಟು. ಸಾಮಾನ್ಯ ವಿದ್ಯಾರ್ಥಿಗೆ ಪದದ ಖಚಿತ ರೂಪ, ಅಕ್ಷರ ಸಂಯೋಜನೆ, ಉಚ್ಚಾರಣೆ ಎಲ್ಲಾ ನಿಘಂಟಿನಿಂದ ತಿಳಿಯುತ್ತದೆ. ನಿಘಂಟಿನ ಸತತ ಅಭ್ಯಾಸದಿಂದ ನಮ್ಮ ಶಬ್ದ ಸಂಪತ್ತು, ಭಾಷಾ ಸಂಪತ್ತು ಹೆಚ್ಚುತ್ತವೆ. ಭಾಷೆ ಅಭ್ಯಾಸಕ್ಕೆ ನಿಘಂಟು ದಾರಿದೀಪ. ಒಂದು ದೇಶದ ಜನಜೀವನವನ್ನು, ಸಂಸ್ಕೃತಿಯನ್ನು ಅಭ್ಯಾಸ ಮಾಡುವವರಿಗೆ ಭಾಷೆಯ ಪದಗಳ ಅಭ್ಯಾಸದಿಂದ ಪ್ರಯೋಜನವುಂಟು. ನಿಘಂಟು ಒಂದು ಪದದ ಮೂಲ ರೂಪ ಅದರ ರೂಪದಲ್ಲಿಯೂ, ಅರ್ಥದಲ್ಲಿಯೂ ಆದ ವ್ಯತ್ಯಾಸಗಳು ಇವನ್ನು ತಿಳಿಸುವುದು ದೇಶದ ಚರಿತ್ರೆಯನ್ನು ಅಭ್ಯಾಸ ಮಾಡುವವರಿಗೆ ಸಹಾಯಕ. ಒಂದು ಭಾಷೆ ಇನ್ನೊಂದು ಭಾಷೆಯಿಂದ ತೆಗೆದುಕೊಂಡ ಪದಗಳು ಎರಡು ಭಾಷೆಗಳನ್ನಾಡುವವರ ನಾಗರಿಕತೆಯ ಮೇಲೆ ಬೆಳಕು ಚೆಲ್ಲುತ್ತವೆ.

ನಿಘಂಟನ್ನು ಸಿದ್ಧಗೊಳಿಸಬೇಕಾದರೆ ಘನ ವಿದ್ವಾಂಸರ ಪರಿಶ್ರಮ ಬೇಕು. ನಿಘಂಟಿನ ಸಿದ್ಧತೆಯಲ್ಲಿ ಪಾಲುಗೊಳ್ಳುವ ಅವನಿಗೆ ಭಾಷೆ ಚೆನ್ನಾಗಿ ತಿಳಿದಿರಬೇಕು. ಚರಿತ್ರೆ, ಭಾಷಾಶಾಸ್ತ್ರ, ವ್ಯಾಕರಣ, ಸಾಹಿತ್ಯ ಎಲ್ಲದರಲ್ಲಿ ಆಳವಾದ ವಿದ್ವತ್ತು ಬೇಕು. ಪದಗಳಿಗೆ ಖಚಿತವಾಗಿ, ಸ್ಪಷ್ಟವಾಗಿ ಅರ್ಥ ಹೇಳುವಷ್ಟು ಭಾಷಪ್ರಭುತ್ವ ಬೇಕು. ಸ್ತೂಲವಾಗಿ ಒಂದೇ ಅರ್ಥವುಳ್ಳ, ಆದರೆ ಬಳಕೆಯಲ್ಲಿ ಸೂಕ್ಷ್ಮವಾದ ಅರ್ಥವ್ಯತ್ಯಾಸವುಳ್ಳ ಎರಡು ಪದಗಳಿರಬಹುದು. ಅವನ್ನು ಗುರುತಿಸಿ ವಿವರಿಸುವ ಸಾಮರ್ಥ್ಯವಿರಬೇಕು. ಭಾಷೆ ಬದಲಾಗುತ್ತಾ ಇರುತ್ತದೆ. ವಿದ್ವಾಂಸರು, ರೈತರು, ವಿವಿಧ ವೃತ್ತಿಗಳವರು, ಪತ್ರಿಕೋದ್ಯಮಿಗಳು ಇವರೆಲ್ಲ ಹೊಸ ಹೊಸ ಪದಗಳನ್ನು ಸೃಷ್ಟಿಸುತ್ತಾರೆ. ಹಳೆಯ ಪದಗಳನ್ನು ಹೊಸ ಅರ್ಥದಲ್ಲಿ ಬಳಸುತ್ತಾರೆ. ಹೊಸ ವಸ್ತುಗಳು ಸೃಷ್ಟಿಯಾದಂತೆ ಸ್ಕೂಟರ್, ಟೆರಿಲಿನ್, ನೈಲಾನ್ ಇಂತಹ ಪದಗಳಂತೆ ಹೊಸ ಪದಗಳು ಹುಟ್ಟುತ್ತವೆ. ನಿಘಂಟನ್ನು ತಯಾರಿಸುವವರು ಈ ಎಲ್ಲ ವ್ಯತ್ಯಾಸಗಳನ್ನು ಗಮನಿಸಬೇಕಾಗುತ್ತದೆ. ಹೀಗೆ ಸಿದ್ಧವಾದ ನಿಘಂಟಿನ ಜೊತೆಗೆ ತಮ್ಮ ನೆಂಟನ್ನು ಇಟ್ಟುಕೊಂಡರೆ ನಿಮ್ಮ ಶಬ್ದ ಸಂಪತ್ತು ಮತ್ತು ಭಾಷಾ ಸಂಪತ್ತು ಅಭಿವೃದ್ಧಿಯಾಗುವುದರಲ್ಲಿ ಅನುಮಾನವೇ ಇಲ್ಲ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ