ಚಾರ್ಮಾಡಿ ಘಾಟಿಯಲ್ಲಿ ಹಗಲಲ್ಲೇ ಕಾಡಾನೆ ಸಂಚಾರ: ಕೂದಲೆಳೆ ಅಂತರದಲ್ಲಿ ಪಾರಾದ ಬೈಕ್ ಸವಾರ - Mahanayaka

ಚಾರ್ಮಾಡಿ ಘಾಟಿಯಲ್ಲಿ ಹಗಲಲ್ಲೇ ಕಾಡಾನೆ ಸಂಚಾರ: ಕೂದಲೆಳೆ ಅಂತರದಲ್ಲಿ ಪಾರಾದ ಬೈಕ್ ಸವಾರ

charmadi
09/04/2024

ಚಾರ್ಮಾಡಿ ಘಾಟಿಯ ಒಂಬತ್ತನೇ ತಿರುವಿನ ಸಮೀಪ ಒಂಟಿ ಸಲಗ ಸೋಮವಾರ ಮಧ್ಯಾಹ್ನ 12ರ ಸುಮಾರಿಗೆ ಕಂಡುಬಂದಿದೆ.


Provided by

ಸೋಮವಾರ ನೆರಿಯದ ಬಾಂಜಾರು ಮಲೆ ಕಡೆಯಿಂದ ಆಗಮಿಸಿದ ಕಾಡಾನೆ ಕೆಲವು ಹೊತ್ತು ರಸ್ತೆ ಬದಿಯಲ್ಲಿ ನಿಂತುಕೊಂಡು ಬಳಿಕ ಅಲ್ಲಿಂದ ತೆರಳಿ  ರಸ್ತೆಯಲ್ಲಿ ಒಂದಿಷ್ಟು ಹೊತ್ತು ಸಂಚರಿಸಿ ಮತ್ತೆ ನೆರಿಯ ಕಾಡಿನ ಕಡೆಗೆ ತೆರಳಿದೆ.

ಕೂದಲೆಳೆ ಅಂತರದಲ್ಲಿ ಪಾರಾದ ಬೈಕ್ ಸವಾರ:


Provided by

ರಸ್ತೆ ಬದಿ ಆನೆಯನ್ನು ಗಮನಿಸಿದ ವಾಹನ ಸವಾರರು ಆನೆ ದಾಟಿ ಹೋಗಲು ಅನುಕೂಲವಾಗುವಂತೆ ಇಕ್ಕೆಲಗಳಲ್ಲೂ ವಾಹನಗಳನ್ನು ನಿಲ್ಲಿಸಿದ್ದರು. ಆದರೆ ರಸ್ತೆಯ ಒಂದು ಬದಿಯಲ್ಲಿ ವಾಹನಗಳಿಲ್ಲದ ಕಾರಣ ಆನೆ ಇರುವುದನ್ನು ತಿಳಿಯದ ಬೈಕ್ ಸವಾರರೊಬ್ಬ ಆನೆ ದಾಟುತ್ತಿರುವ ಸಮಯದಲ್ಲೇ ಸಂಚರಿಸಿದ್ದು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾನೆ.

ಉಳಿದ ವಾಹನ ಸವಾರರು ಆನೆ ಇರುವುದರ ಬಗ್ಗೆ ಆತನ ಗಮನಕ್ಕೆ ತಂದರೂ ಆತ ಅದನ್ನು ಗಮನಿಸದೇ ಬೈಕ್ ಚಲಾಯಿಸಿದ್ದಾನೆ. ಈ ದೃಶ್ಯವನ್ನು ಪ್ರಯಾಣಿಕರು ವಿಡಿಯೋ ಚಿತ್ರೀಕರಣ ಮಾಡಿದ್ದು, ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಶನಿವಾರ ರಾತ್ರಿ ಕಾಡಾನೆ ಬೆಳ್ತಂಗಡಿ ತಾಲ್ಲೂಕಿನ ಕಲ್ಮಂಜದ ತೋಟವೊಂದರಲ್ಲಿ ದಾಂಧಲೆ ನಡೆಸಿದ್ದು ಬಳಿಕ ಭಾನುವಾರ ರಾತ್ರಿ ಚಾರ್ಮಾಡಿ ಬಳಿ ಕಂಡುಬಂದಿದ್ದು, ಸ್ಥಳೀಯರು ಹಾಗೂ  ಇಲಾಖೆಯವರು ಸೇರಿ ಆನೆಯನ್ನು ಕಾಡಿಗಟ್ಟಿದ್ದರು. ಈ ಸಮಯ ಅದು ನೆರಿಯ ಕಾಡಿನ ಓಡಿತ್ತು. ಅದರ ಬಳಿಕ ಸೋಮವಾರ ನೆರಿಯದ ಬಾಂಜಾರು ಮಲೆ ಮೂಲಕ ಚಾರ್ಮಾಡಿ ಘಾಟಿಗೆ ತೆರಳಿರುವ ಶಂಕೆ ವ್ಯಕ್ತವಾಗಿದೆ. ಕಲ್ಮಂಜದಲ್ಲಿ ದಾಂಧಲೆ ನಡೆಸಿದ ಆನೆ ಚಾರ್ಮಾಡಿ ಘಾಟಿಯಲ್ಲಿ ಪ್ರತ್ಯಕ್ಷವಾಗಿರುವ ಅನುಮಾನಗಳು ಮೂಡಿವೆ.

ಪ್ರಸ್ತುತ ಕಾಡಿನ ಕೆರೆಗಳು, ನೇತ್ರಾವತಿ ನದಿ ಸಂಪೂರ್ಣ ಒಣಗಿದ್ದು ಕೇವಲ ಮೃತ್ಯುಂಜಯ ನದಿಯಲ್ಲಿ ಮಾತ್ರ ನೀರು ಹರಿಯುತ್ತಿದ್ದು, ಈ ನದಿ ಹರಿಯುವ ನೆರಿಯ, ಚಾರ್ಮಾಡಿ  ಈ ಭಾಗದಲ್ಲಿ ಕಾಡಾನೆ ಆಶ್ರಯ ಪಡೆದಿರುವ ಸಾಧ್ಯತೆ ಇದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

 

ಇತ್ತೀಚಿನ ಸುದ್ದಿ