ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ರೋಡ್ ಶೋ ನಡೆಸಲಿರುವ ಮಾಜಿ ಸಂಸದೆ, ನಟಿ ರಮ್ಯಾ!

ಮಂಡ್ಯ: ಮೈತ್ರಿ ಅಭ್ಯರ್ಥಿಯಾಗಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮಂಡ್ಯದ ಹಾಲಿ ಸಂಸದೆ ಸುಮಲತಾ ಅವರು ಬೆಂಬಲ ಸೂಚಿಸಿರುವ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಪ್ರತಿ ತಂತ್ರ ಹೆಣೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಮಾಜಿ ಸಂಸದೆ, ನಟಿ ರಮ್ಯಾ ಅವರಿಂದ ಪ್ರಚಾರ ನಡೆಸಲು ಮುಂದಾಗಿದೆ.
ಸ್ಟಾರ್ ಚಂದ್ರು ಪರ ಪ್ರಚಾರ ನಡೆಸಲು ರಮ್ಯಾ ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ. ಮಂಡ್ಯ ಸಂಸದೆಯಾಗಿ ಆಯ್ಕೆಯಾಗಿದ್ದ ರಮ್ಯಾ 6 ತಿಂಗಳಲ್ಲೇ ಜನಮನ್ನಣೆಗಳಿಸಿದ್ದರು. ಇದೀಗ ರಮ್ಯಾ ಜೊತೆ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಈಗಾಗಲೇ ಮಾತುಕತೆ ನಡೆಸಿದ್ದು, ಮಂಡ್ಯ ಕ್ಷೇತ್ರದ ಕ್ಯಾಂಪೇನ್ಗೆ ಬರಲು ಅವರು ಒಪ್ಪಿಗೆ ಸೂಚಿಸಿದ್ದಾರೆ, ಕಾಂಗ್ರೆಸ್ ನಾಯಕರು ಅಂದುಕೊಂಡಂತಾದರೆ ಸ್ಟಾರ್ ಚಂದ್ರು ಪರವಾಗಿ ರಮ್ಯಾ ರೋಡ್ ಶೋ ನಡೆಸಲಿದ್ದಾರೆ ಎನ್ನಲಾಗುತ್ತಿದೆ.
ಇನ್ನೂ ಮಂಡ್ಯದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಕೂಡ ಪ್ರಚಾರ ನಡೆಸಲಿದ್ದಾರೆ. ಇನ್ನಷ್ಟು ಸಿನಿಮಾ ಸ್ಟಾರ್ ಗಳು ಮಂಡ್ಯದಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರ ನಡೆಸುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಇನ್ನೂ ಸುಮಲತಾ ಅವರು ಚುನಾವಣಾ ಕಣದಿಂದ ಹಿಂದೆ ಸರಿದಿದ್ದರೂ, ಕುಮಾರಸ್ವಾಮಿ ಪರ ಪ್ರಚಾರಕ್ಕೆ ಇನ್ನೂ ಮುಂದಾಗಿಲ್ಲ, ಮುಂದಿನ ದಿನಗಳಲ್ಲಿ ಪ್ರಚಾರ ನಡೆಸುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಸದ್ಯ ಸ್ಥಳೀಯ ನಾಯಕರೊಂದಿಗೆ ಪ್ರಚಾರ ನಡೆಸಲು ಮಾತುಕತೆಗಳು ನಡೆಯುತ್ತಿವೆ ಎಂದು ತಿಳಿದು ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth