ಗೋಹತ್ಯೆ ಮಸೂದೆ ಗೊಂದಲಗಳ ಗೂಡು | ಗೋಹತ್ಯೆ ನಿಷೇಧ ಕಾನೂನು ಜಾರಿಯಾಗುವುದು  ಅನುಮಾನ? - Mahanayaka

ಗೋಹತ್ಯೆ ಮಸೂದೆ ಗೊಂದಲಗಳ ಗೂಡು | ಗೋಹತ್ಯೆ ನಿಷೇಧ ಕಾನೂನು ಜಾರಿಯಾಗುವುದು  ಅನುಮಾನ?

11/12/2020

ಒಂದೆಡೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕೋಟ್ಯಂತರ ಗೋವುಗಳ ತಲೆ ಕಡಿದು ವಿದೇಶಕ್ಕೆ ರಫ್ತು ಮಾಡುತ್ತಿದ್ದರೆ, ಇತ್ತ ರಾಜ್ಯ ಬಿಜೆಪಿ ಸರ್ಕಾರವು ಗೋಹತ್ಯೆ ಮಸೂದೆ ಮಂಡನೆ ಮಾಡಿದೆ. ಈ ಮಸೂದೆಯು ಆರಂಭದಲ್ಲಿ ಜನರ ಮೆಚ್ಚುಗೆಗೆ ಪಾತ್ರವಾದರೂ, ಇದೀಗ ಮುಂದಿನ ಚುನಾವಣೆಗೆ ಬಿಜೆಪಿ ಮತಗಳನ್ನು ಭದ್ರಪಡಿಸಲು ಮತ್ತು ಹಿಂದೂಗಳ ಮತ ಬ್ಯಾಂಕ್ ಗಾಗಿ ಸರ್ಕಾರ ಮಾಡಿರುವ ತೋರಿಕೆಯ ಮಸೂದೆ ಇದು. ಹಿಂದೂಗಳನ್ನು ದಾರಿ ತಪ್ಪಿಸಲು ರಾಜ್ಯ ಸರ್ಕಾರವು ಗೋ ಹತ್ಯೆ ನಿಷೇಧ ಎಂಬ ಮಸೂದೆಯನ್ನು ಮಂಡಿಸುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿದೆ.

ರಾಜ್ಯ ಸರ್ಕಾರದ ಗೋಹತ್ಯೆ ಮಸೂದೆಯಲ್ಲಿ ನೀಡಲಾಗಿರುವ ಕೆಲವು ಕಾನೂನುಗಳು ಇದೀಗ ವಿವಾದಕ್ಕೆ ಕಾರಣವಾಗಿದ್ದು, ಇದು ಯಾವುದೋ ಕೋಮುವಾದಿ ಸಂಘಟನೆಯ ಕಚೇರಿಯಲ್ಲಿ ಕುಳಿತು, ಸಿದ್ಧಪಡಿಸಿರುವ ಕರಡಿನಂತಿದೆ ಎಂದು ಹೇಳಲಾಗುತ್ತಿದೆ. 13 ವರ್ಷದೊಳಗಿನ ಹಸು, ಎಮ್ಮೆ, ಕೋಣಗಳ ಹತ್ಯೆಯನ್ನು ನಿಷೇಧಿಸಲಾಗಿದೆ ಎಂದು ರಾಜ್ಯ ಸರ್ಕಾರ ತನ್ನ ಮಸೂದೆಯಲ್ಲಿ ಹೇಳಿದೆ. ಹಾಗಾದರೆ ಅದಕ್ಕೂ ಅಧಿಕ ವಯಸ್ಸಿನ ಗೊಡ್ಡು ಹಸು, ಎಮ್ಮೆ ಕೋಣಗಳ ಪರಿಸ್ಥಿತಿ ಏನು? ಗೋವಿನಲ್ಲಿ ಮುಕ್ಕೋಟಿ ದೇವರಿದ್ದಾರೆ ಎಂಬ ಕಾರಣಕ್ಕಾಗಿ ಅದರ ಹತ್ಯೆ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತಿದೆ ಎಂದು ವಾದಿಸುತ್ತಿರುವ ಬಿಜೆಪಿ, ಗೊಡ್ಡು ದನ, ಎಮ್ಮೆ, ಕೋಣ, ಎತ್ತುಗಳಲ್ಲಿ ದೇವರಿಲ್ಲ ಎಂದು ಹೇಳುತ್ತಿದೆಯೇ? ಎನ್ನುವ ಪ್ರಶ್ನೆಗಳು ಸದ್ಯ ಕೇಳಿ ಬಂದಿದೆ.

ಇನ್ನೂ ಈ ಮಸೂದೆಯಲ್ಲಿ ಗೋರಕ್ಷಣೆಗೆ ಶ್ರಮಿಸುವವರ ಮೇಲೆ ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳುವಂತಿಲ್ಲ ಎಂದು ಹೇಳಿದೆ. ಈ ಮೂಲಕ ಕಾನೂನನ್ನು ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರ ಪ್ರೇರೇಪಣೆ ನೀಡಿದಂತಾಗುವುದಿಲ್ಲವೇ? ಹಾಗಿದ್ದರೆ, ರಾಜ್ಯದಲ್ಲಿ ಪೊಲೀಸರ ಕೇವಲ ಸೆಲ್ಯೂಟ್ ಹೊಡೆಯಲು ಮಾತ್ರವೇ ನೇಮಕವಾಗಿದ್ದಾರೆಯೇ? ರಕ್ಷಣೆಯ ಕೆಲಸವನ್ನು ಸಂಘಟನೆಗಳಿಗೆ ಕೊಟ್ಟವರು ಯಾರು? ಕಾನೂನು ಸುವ್ಯವಸ್ಥೆಯನ್ನು ಸರ್ಕಾರವೇ ಕೆಡಿಸಲು ಮುಂದಾಗಿದೆಯೇ? ಎನ್ನುವ ಪ್ರಶ್ನೆಗಳು ಕೇಳಿ ಬಂದಿದೆ.

ವಶಕ್ಕೆ ಪಡೆದುಕೊಂಡ ಹಸುಗಳನ್ನು ಹರಾಜಿಗೆ ಹಾಕಬಹುದು ಎಂದು ರಾಜ್ಯ ಸರ್ಕಾರ ಮಸೂದೆಯಲ್ಲಿ ಹೇಳಿದೆ. ಹರಾಜಿಗೆ ಪಡೆದುಕೊಂಡವರು ಹಸುವನ್ನು ಹತ್ಯೆ ಮಾಡುತ್ತಾರೆಯೇ, ಸಾಕುತ್ತಾರೆಯೇ ಎನ್ನುವುದನ್ನು ಸರ್ಕಾರ ಹೇಗೆ ಕಂಡು ಹಿಡಿಯುತ್ತದೆ. ಅದರಲ್ಲೂ ಮುಖ್ಯವಾಗಿ ರಾಜ್ಯದಲ್ಲಿ ಸದ್ಯ ಕಾರ್ಯಾಚರಿಸುತ್ತಿರುವ ಲೈಸೆನ್ಸ್ ಪಡೆದುಕೊಂಡು ಗೋಹತ್ಯೆ ಮಾಡುತ್ತಿರುವ ಕಂಪೆನಿಗಳನ್ನು ಮುಚ್ಚಿಸಲಾಗುತ್ತದೆಯೇ? ಈ ಬಗ್ಗೆ ಯಾಕೆ ಮಸೂದೆಯಲ್ಲಿ ಯಾವುದೇ ಪ್ರಸ್ತಾಪ ಇಲ್ಲ? ಎಂಬ ಪ್ರಶ್ನೆಗಳು ಕೇಳಿ ಬಂದಿದೆ.

ಗೋಹತ್ಯೆ ಮಸೂದೆಯಲ್ಲಿ ಬಹಳಷ್ಟು ಗೊಂದಲಗಳಿದ್ದು, ಹೀಗಾಗಿಯೇ ಈ ಕಾನೂನು ವಿಳಂಬವಾಗಲಿದೆ ಎಂದು ಹೇಳಲಾಗುತ್ತಿದೆ. ಮೊದಲನೆಯದ್ದಾಗಿ  ವಿಧಾನಪರಿಷತ್ ನಲ್ಲಿ ಬಿಜೆಪಿಗೆ ಬಹುಮತವಿಲ್ಲ ಎನ್ನುವುದು ತಿಳಿದೇ ಬಿಜೆಪಿ ಗೋಹತ್ಯೆ ಮಸೂದೆ ಮಂಡನೆ ಮಾಡಲಾಗಿದೆ. ಗೋಹತ್ಯೆ ಮಸೂದೆ ಮಂಡನೆಯ ಮೂಲಕ ಹಿಂದೂಗಳ ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸಕ್ಕೆ ಆಡಳಿತ ಪಕ್ಷ ಬಿಜೆಪಿ ಮುಂದಾಗಿದೆ ಎಂದು ಹೇಳಲಾಗಿದೆ. ಗೋ ಹತ್ಯೆ ನಿಷೇಧವನ್ನು ರಾಜ್ಯ ಸರ್ಕಾರ ಪ್ರಾಮಾಣಿಕವಾಗಿ ಮಾಡಲಿ. ಗೋ ಹತ್ಯೆ ನಿಷೇಧ ಮಾಡುವ ಉದ್ದೇಶವಿದ್ದರೆ, ಮೊದಲು ಕರ್ನಾಟಕದಲ್ಲಿ ಲೈಸೆನ್ಸ್ ಪಡೆದು ಗೋಹತ್ಯೆ ಮಾಡುತ್ತಿರುವ ಕಂಪೆನಿಗಳಿಗೆ ಬೀಗ ಜಡಿದು ರಾಜ್ಯ ಸರ್ಕಾರ ಬದ್ಧತೆ ಪ್ರದರ್ಶಿಸಲಿ ಎಂದು ಜನರು ಕೇಳುತ್ತಿದ್ದಾರೆ.

ಸದ್ಯದ ಮಾಹಿತಿಯ ಪ್ರಕಾರ, ಗೋಹತ್ಯೆ ನಿಷೇಧ ಕಾನೂನು ಮುಂದಿನ ಅಧಿವೇಶನದವರೆಗೆ ವಿಳಂಬವಾಗುತ್ತದೆ ಎಂದು ಹೇಳಲಾಗುತ್ತಿದೆ.  ಬುಧವಾರ ಗೋಹತ್ಯೆ ಕಾನೂನನ್ನು ರಾಜ್ಯ ಸರ್ಕಾರ ಅಂಗೀಕಾರ ಮಾಡಿತ್ತು. ವಿಧಾನಸಭೆಯಲ್ಲಿ ಬಿಜೆಪಿಯ ಈ ಅಸಮರ್ಪಕ ಕಾನೂನಿಗೆ ಬೆಂಬಲ ಸಿಗುವುದು ಅನುಮಾನ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಅಧಿವೇಶನದ ವರೆಗೆ ಗೋಹತ್ಯೆ ಕಾನೂನು ಏನಾಗಲಿದೆ ಎನ್ನುವುದು ತಿಳಿಯಲು ಸಾಧ್ಯವಿಲ್ಲ.

ಇತ್ತೀಚಿನ ಸುದ್ದಿ