ಹಿಂಡೆನ್‌ಬರ್ಗ್ ವರದಿ: ಅದಾನಿ ವಹಿವಾಟು ಕುರಿತು ತನಿಖೆ ನಡೆಸಬೇಕೆಂದು ಸುಪ್ರೀಂಗೆ ಅರ್ಜಿ

ಸೆಬಿ ಅಧ್ಯಕ್ಷೆ ಮಾಧಬಿ ಪುರಿ ಬುಚ್ ಬಗ್ಗೆ ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆಯ ವರದಿಯ ಅದಾನಿಯ ಕಿವಿ ಹಿಂಡುವ ಲಕ್ಷಣ ಗೋಚರಿಸುತ್ತಿದೆ. ಅದಾನಿ ಸಮೂಹ ಸಂಸ್ಥೆಗಳ ವಿರುದ್ಧದ ಈ ಹಿಂದಿನ ಆರೋಪಗಳ ತನಿಖೆ ಪೂರ್ಣಗೊಳಿಸಲು ಸೆಬಿಗೆ ಆದೇಶಿಸಬೇಕೆಂದು ಸುಪ್ರೀಂ ಕೋರ್ಟಿಗೆ ಹೊಸ ಅರ್ಜಿ ಸಲ್ಲಿಸಲಾಗಿದೆ. ಇತ್ತೀಚಿನ ಹಿಂಡೆನ್‌ಬರ್ಗ್ ವರದಿಯ ಅನಂತರ ಸಂಶಯದ ವಾತಾವರಣವಿರುವುದರಿಂದ ತನಿಖೆ ಪೂರ್ಣಗೊಳಿಸುವ ಅಗತ್ಯವಿದೆ ಎಂದೂ ಅರ್ಜಿದಾರರು ಹೇಳಿದ್ದಾರೆ.
ಹಿಂಡೆನ್‌ಬರ್ಗ್ ಸಂಸ್ಥೆ ಈ ಹಿಂದೆ ಜನವರಿ 2023ರಲ್ಲಿ ಅದಾನಿ ಸಂಸ್ಥೆಯ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿ ಹೊರತಂದ ವರದಿಯ ಹಿನ್ನೆಲೆಯಲ್ಲಿ ಎಸ್‌ಐಟಿ/ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಆ ವರ್ಷ ಅರ್ಜಿ ಸಲ್ಲಿಸಿದ್ದ ಹಲವರಲ್ಲಿ ಒಬ್ಬರಾಗಿದ್ದ ವಿಶಾಲ್ ತಿವಾರಿ ಇದೀಗ ಮತ್ತೆ ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾರೆ.
ಈ ವರ್ಷದ ಜನವರಿಯಲ್ಲಿ ಎಸ್‌ಐಟಿ/ಸಿಬಿಐ ತನಿಖೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿ ಸೆಬಿ ತನಿಖೆಯನ್ನು ಬೆಂಬಲಿಸಿತ್ತು. ಆಗ ತನಿಖೆಯನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸುವಂತೆಯೂ ಸೆಬಿಗೆ ಸುಪ್ರೀಂ ಕೋರ್ಟ್ ಸೂಚಿಸಿತ್ತು.
ತನಿಖೆ ಪೂರ್ಣಗೊಳಿಸುವಂತೆ ಸೆಬಿಗೆ ಆದೇಶಿಸಬೇಕೆಂದು ಕೋರಿ ತಿವಾರಿ ಜೂನ್ ತಿಂಗಳಲ್ಲಿ ಮತ್ತೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿ ಸ್ವೀಕರಿಸಲು ಸುಪ್ರೀಂ ಕೋರ್ಟಿನ ಜುಡಿಶಿಯಲ್ ಲಿಸ್ಟಿಂಗ್ ರಿಜಿಸ್ಟ್ರಾರ್ ನಿರಾಕರಿಸಿದ್ದರಲ್ಲದೆ ಸುಪ್ರೀಂ ಕೋರ್ಟ್ ಮೂರು ತಿಂಗಳೊಳಗೆ ತನಿಖೆ ಪೂರ್ಣಗೊಳಿಸಬೇಕೆಂದು ಖಡಾಖಂಡಿತವಾಗಿ ಹೇಳಿಲ್ಲ ಎಂದಿದ್ದರು.
ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿದ ರಿಜಿಸ್ಟ್ರಾರ್ ಕ್ರಮವನ್ನು ಪ್ರಶ್ನಿಸಿ ತಿವಾರಿ ಈಗ ಮೂರನೆ ಬಾರಿ ಕೋರ್ಟ್ ಕದ ತಟ್ಟಿದ್ದು, ಇತ್ತೀಚಿನ ಹಿಂಡೆನ್‌ಬರ್ಗ್ ವರದಿ ಹಿನ್ನೆಲೆಯಲ್ಲಿ “ ಸಂಶಯದ ವಾತಾವರಣವಿರುವುದರಿಂದʼ ಆದಷ್ಟು ಬೇಗ ತನಿಖೆ ಪೂರ್ಣಗೊಳಿಸುವಂತೆ ಆದೇಶಿಸಲು ಕೋರಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth