ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದ ಮಹಿಳೆ ಪತ್ತೆಯಾಗಿದ್ದು ಪಕ್ಕದ ಮನೆಯವರ ಬಾವಿಯಲ್ಲಿ! - Mahanayaka

ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದ ಮಹಿಳೆ ಪತ್ತೆಯಾಗಿದ್ದು ಪಕ್ಕದ ಮನೆಯವರ ಬಾವಿಯಲ್ಲಿ!

11/12/2020

ಕಣ್ಣೂರು: ಬಟ್ಟೆ ಒಗೆಯುತ್ತಿದ್ದ ಮಹಿಳೆಯೊಬ್ಬರು ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದು, ಆ  ಬಳಿಕ ಅವರನ್ನು ಹುಡುಕಾಡಿದಾಗ ಅವರು ಪಕ್ಕದ ಮನೆಯವರ ಬಾವಿಯಲ್ಲಿ ಪತ್ತೆಯಾದ ಅಚ್ಚರಿಯ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.

ಕಣ್ಣೂರಿನ ಇರಿಕುರ್ ಆಯಿಪುರ್ ನಿವಾಸಿ  ಉಮೆಬಾ(42) ಅವರು ತಮ್ಮ ಮನೆಯಲ್ಲಿ ಬಟ್ಟೆ ಒಗೆಯುತ್ತಿದ್ದ ಸಂದರ್ಭದಲ್ಲಿ ನೆಲ ಕುಸಿದು ಹೊಂಡಕ್ಕೆ ಬಿದ್ದಿದ್ದರು. ಅವರು ಹೊಂಡಕ್ಕೆ ಬೀಳುತ್ತಿರುವಾಗಲೇ ಸ್ಥಳೀಯರು ಗಮನಿಸಿದ್ದು, ತಕ್ಷಣವೇ ಅವರ ರಕ್ಷಣೆಗಾಗಿ ಹೊಂಡದ ಬಳಿ ಬಂದು  ಬಂದು ಇಣುಕಿ ನೋಡಿದ್ದಾರೆ. ಆದರೆ ಮಹಿಳೆ ಆ  ಹೊಂಡದಲ್ಲಿ ಪತ್ತೆಯಾಗಲಿಲ್ಲ. ಟಾರ್ಚ್, ಹಗ್ಗ ಎಲ್ಲವನ್ನು ಹಿಡಿದು ನೋಡಿದರೂ ಮಹಿಳೆಯ ಪತ್ತೆಯೇ ಇಲ್ಲ…

ಹೊಂಡಕ್ಕೆ ಬಿದ್ದ ಮಹಿಳೆ ಎಲ್ಲಿ ಹೋದರು ಎಂಬ ಆತಂಕದಲ್ಲಿಯೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಕರೆ ಮಾಡುವಷ್ಟರಲ್ಲಿ, ನಾಪತ್ತೆಯಾಗಿದ್ದ ಮಹಿಳೆಯು ಪಕ್ಕದ ಮನೆಯವರ ಬಾವಿಯಿಂದ ಸಹಾಯಕ್ಕಾಗಿ ಕೂಗುವುದು ಕೇಳಿ ಬಂದಿದೆ. ಶಾಕ್ ಗೊಳಗಾದ ಸ್ಥಳೀಯರು ತಕ್ಷಣವೇ ಪಕ್ಕದ ಮನೆಯವರ ಬಾವಿಯಿಂದ ಮಹಿಳೆಯನ್ನು ರಕ್ಷಿಸಿದ್ದಾರೆ.

ಈ ಘಟನೆ ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಿದಾಗ ಮಹಿಳೆಯ ಅಂಗಳಕ್ಕೂ ಪಕ್ಕದ ಮನೆಯವರ ಬಾವಿಗೂ ಭೂಗತ ಗುಹೆಯೊಂದರ ಸಂಪರ್ಕವಿರುವುದು ಪತ್ತೆಯಾಗಿದೆ. ಹೀಗಾಗಿಯೇ ನೆಲ ಕುಸಿದು ಹೊಂಡಕ್ಕೆ ಬಿದ್ದ ಮಹಿಳೆ ಪಕ್ಕದ ಮನೆಯವರ ಬಾವಿಯಲ್ಲಿ ಪತ್ತೆಯಾಗಿದ್ದಾರೆ. ಸದ್ಯ ಬಾವಿಗೆ ಬಿದ್ದ ಉಮೆಬಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಇತ್ತೀಚಿನ ಸುದ್ದಿ