ಪೂಜೆ ಸಲ್ಲಿಸಿ ಬರುವಾಗ ಭೀಕರ ಅಪಘಾತ: ಗರ್ಭಿಣಿ, ಹೊಟ್ಟೆಯಿಂದ ಹೊರಬಂದ ಶಿಶು ದಾರುಣ ಸಾವು
ನೆಲಮಂಗಲ: ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ವಾಪಸ್ ಆಗುತ್ತಿದ್ದ ತುಂಬು ಗರ್ಭಿಣಿ ಹಾಗೂ ಆಕೆಯ ಗರ್ಭದಲ್ಲಿದ್ದ 8 ತಿಂಗಳ ಮಗು ದಾರುಣವಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಎಡೇಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ನಡೆದಿದೆ.
ಎಡೇಹಳ್ಳಿಯ ಸಿಂಚನಾ (30) ಮೃತಪಟ್ಟವರಾಗಿದ್ದಾರೆ. ಸಿಂಚನ ತುಂಬು ಗರ್ಭಿಣಿಯಾಗಿದ್ದು ಆಗಸ್ಟ್ 17ಕ್ಕೆ 9 ತಿಂಗಳು ತುಂಬಬೇಕಿತ್ತು. ಹೀಗಾಗಿ ಹೆರಿಗೆ ಸುಸೂತ್ರವಾಗಿ ನಡೆಯಲಿ ಎಂದು ಪೂಜೆ ಸಲ್ಲಿಸಲು ದಂಪತಿ ಬೈಕ್ ನಲ್ಲಿ ದಾಬಸ್ ಪೇಟೆಯಲ್ಲಿರುವ ಶಿವಗಂಗೆಯ ಗಣಪತಿ ದೇವಸ್ಥಾನಕ್ಕೆ ತೆರಳಿದ್ದರು. ಅಲ್ಲಿ ಪೂಜೆ ಸಲ್ಲಿಸಿ ಮರಳಿ ತಮ್ಮೂರು ತೋಟನಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಟಿಪ್ಪರ್ ಡಿಕ್ಕಿ ಹೊಡೆದಿದೆ.
ಈ ವೇಳೆ ಸಿಂಚನಾ ಮೇಲೆ ಟಿಪ್ಪರ್ ಹರಿದಿದ್ದು, ಅಪಘಾತದ ತೀವ್ರತೆಗೆ ಸಿಂಚನಾ ಗರ್ಭದಲ್ಲಿದ್ದ ಮಗು ಹೊರ ಬಂದು ರಸ್ತೆಯಲ್ಲಿ ವಿಲವಿಲನೆ ಒದ್ದಾಡಿ ಮೃತಪಟ್ಟಿದೆ. ಈ ದೃಶ್ಯ ಮನಕಲಕುವಂತಿತ್ತು.
ಅಪಘಾತದಲ್ಲಿ ಸಿಂಚನಾ ಪತಿ ಮಂಜುನಾಥ್ ಪಾರಾಗಿದ್ದಾರೆ. ಪತ್ನಿ ಹಾಗೂ ಶಿಶುವಿನ ಮೃತ ದೇಹದ ಮುಂದೆ ಪತಿ ಮಂಜುನಾಥ್ ಹಾಗೂ ಅತ್ತೆಯ ಆಕ್ರಂದನ ಮುಗಿಲು ಮುಟ್ಟಿದೆ.
ಟಿಪ್ಪರ್ ಚಾಲಕ ಪರಾರಿ:
ಅಪಘಾತದ ಬಳಿಕ ಟಿಪ್ಪರ್ ಚಾಲಕ ಸ್ಥಳದಲ್ಲಿ ಟಿಪ್ಪರ್ ನಿಲ್ಲಿಸಿ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಸಾರ್ವಜನಿಕ ಅಸ್ಪತ್ರೆಗೆ ಮೃತದೇಹದ ರವಾನೆ ಮಾಡಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth