ಪಟಾಕಿ ಸಿಡಿಸುವುದು ದೀಪಾವಳಿಯ ಅವಿಭಾಜ್ಯ ಅಂಗವೇ? | ಅಷ್ಟಕ್ಕೂ ಪಟಾಕಿಯ ಇತಿಹಾಸ ಏನು ನಿಮಗೆ ತಿಳಿದಿದೆಯೇ? - Mahanayaka

ಪಟಾಕಿ ಸಿಡಿಸುವುದು ದೀಪಾವಳಿಯ ಅವಿಭಾಜ್ಯ ಅಂಗವೇ? | ಅಷ್ಟಕ್ಕೂ ಪಟಾಕಿಯ ಇತಿಹಾಸ ಏನು ನಿಮಗೆ ತಿಳಿದಿದೆಯೇ?

11/11/2020

ಮಹಾನಾಯಕ ವಿಶೇಷ ವರದಿ:  ಒಂದೆಡೆ ಕೊರೊನಾ ವೈರಸ್ ತಂದ ಸಂಕಷ್ಟ. ಇನ್ನೊಂದೆಡೆಯಲ್ಲಿ ಹಬ್ಬಗಳ ಸಂಭ್ರಮ. ದುಡಿಯುವ ಕೈಯಲ್ಲಿ ಹಣ ಖಾಲಿಯಾಗಿದ್ದರೂ, ಸಾಲ ಮಾಡಿಯಾದರೂ ಈ ಬಾರಿ ಪಟಾಕಿ ಸುಟ್ಟು ದೀಪಾವಳಿ ಆಚರಿಸಬೇಕು ಎಂದು ಸಿದ್ಧರಾಗುತ್ತಿರುವ ಮನೆಯ ಯಜಮಾನರು. ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವುದು ಒಂದು ಸಂಪ್ರದಾಯ, ಪಟಾಕಿ ಸಿಡಿಸದೇ ಹಬ್ಬ ಮಾಡುವುದು ಸಂಸ್ಕೃತಿಗೆ ವಿರುದ್ಧ ಎಂಬಂತಹ ಹಲವು ವಾದಗಳನ್ನು ನಾವು ಕೇಳುತ್ತಲೇ ಇದ್ದೇವೆ. ಆದರೆ ದೀಪಾವಳಿ ಮತ್ತು ಪಟಾಕಿಗೆ ಸಂಬಂಧಪಟ್ಟಂತೆ ಒಂದಷ್ಟು ಚಿಂತನೆಗಳನ್ನು ಮಾಡಬೇಕಾದ ಕಾಲ ಇದಾಗಿದೆ.

ಸಾಂಕ್ರಾಮಿಕ ರೋಗ ಕೊರೊನಾ ವೈರಸ್ ಇಡೀ ದೇಶವನ್ನು ಅಲ್ಲೋಲ ಕಲ್ಲೋಲ ಮಾಡಿದೆ. ಇದೇ ಸಂದರ್ಭದಲ್ಲಿ ದೀಪಾವಳಿ ಬಂದಿದೆ. ದೀಪಾವಳಿಯಲ್ಲಿ ಪಟಾಕಿ ಸಿಡಿಸುವುದು ನಮ್ಮ ಸಂಪ್ರದಾಯ. ಇದು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ ಎಂದು ಜನರನ್ನು ಒಂದು ವರ್ಗ ಪ್ರೇರೇಪಿಸುತ್ತಲೇ ಬರುತ್ತಿದೆ. ಈ ಪಟಾಕಿಯನ್ನು ಸಿಡಿಸಲೇ ಬೇಕು ಎನ್ನುವುದಕ್ಕೆ ಇರುವುದು ಒಂದೇ ಕಾರಣ ಇದು ನಮ್ಮ ಧಾರ್ಮಿಕತೆ ಎಂದು. ಆದರೆ ಪಟಾಕಿ ಸಿಡಿಸಬಾರದು ಎನ್ನುವುದಕ್ಕೆ ಇರುವ ಕಾರಣಗಳು ಹಲವಾರು. ವಿಜ್ಞಾನವನ್ನು ಒಪ್ಪದ ಮೂಢರ ಪಡೆಯೊಂದು ಏನು ಹೇಳಿದರೂ ಕೇಳದೇ ನಮ್ಮ ನದಿಗಳನ್ನು ಕಲುಶಿತ ಮಾಡಿ ಹಾಕಿತು. ಗಂಗೆ ಶುದ್ಧ ಅದರಲ್ಲಿ ಮಿಂದರೆ, ಪಾಪ ಪರಿಹಾರವಾಗುತ್ತದೆ ಎನ್ನುತ್ತಲೇ ಹೊಟ್ಟೆ ತುಂಬಿಸಿಕೊಂಡು ತಮ್ಮ ಹಾಗೂ ತಮ್ಮ ಮುಂದಿನ ಪೀಳಿಗೆಯವರೆಗೂ ಆರಾಮವಾಗಿ ಬದುಕುವಷ್ಟು ಹಣ, ಆಸ್ತಿ ಮಾಡಿಕೊಂಡಿರುವ ಕೆಲವರು, ಇಷ್ಟೂ ಸಾಲದು ಎಂಬಂತೆ ನಮ್ಮ ಪ್ರಕೃತಿಯಲ್ಲಿರುವ ಗಾಳಿಯನ್ನು ಕಲುಶಿತ ಮಾಡಲು ಕೂಡ, ಧಾರ್ಮಿಕತೆಯನ್ನೇ ಕಾರಣವಾಗಿ ನೀಡುತ್ತಿದ್ದಾರೆ. ಅದರ ಮುಂದಿನ ಭಾಗವಾಗಿಯೇ ಈ ಪಟಾಕಿ ಸಂಪ್ರದಾಯವಾಗಿ ಮಾರ್ಪಟ್ಟಿದೆ.

ವಿಜ್ಞಾನದ ಪ್ರಕಾರವಾಗಿ ನೋಡುವುದಾದರೆ, ಪಟಾಕಿ ಸುಡುವುದರಿಂದ ನೈಟ್ರಸ್ ಆಕ್ಸೈಡ್, ಸಲ್ಫರ್ ಡೈ ಆಕ್ಸೈಡ್, ಕಾರ್ಬನ್ ಮಾನಾಕ್ಸೈಡ್ ನಂತಹ ಹಲವಾರು ಹಾನಿಕಾರಕ ರಾಸಾಯನಿಕಗಳು ಪ್ರಕೃತಿಗೆ ಬಿಡುಗಡೆಯಾಗುತ್ತದೆ. ಉಸಿರಾಟದ ಸಮಸ್ಯೆ ಹೊಂದಿರುವವರ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮವನ್ನು ಬೀರುತ್ತದೆ. ಇದು ಕೊವಿಡ್ 19 ಸಮಯವಾಗಿರುವುದರಿಂದ ಈ ಸಂದರ್ಭದಲ್ಲಿ ಓರ್ವ ಆರೋಗ್ಯವಂತ ವ್ಯಕ್ತಿ ಕೂಡ ಗಂಭೀರವಾದ ಆರೋಗ್ಯ ಸಮಸ್ಯೆಗೆ ಒಳಗಾಗುವ ಸಾಧ್ಯತೆಗಳಿವೆ. ಈ ಕಾರಣಕ್ಕಾಗಿಯೇ ವಿದ್ಯಾವಂತರು ಇದನ್ನು ಅರ್ಥ ಮಾಡಿಕೊಂಡು ಪಟಾಕಿ ಸಿಡಿಸಬೇಡಿ ಎಂದು ಹೇಳುತ್ತಿದ್ದಾರೆ. ಆದರೆ ಅವಿವೇಕಿಗಳಂತಾಡುತ್ತಿರುವ ಸರ್ಕಾರಗಳು ಪಟಾಕಿ ಸುಡಲು ಹಿಂಬಾಗಿಲಿನಿಂದ ಪರೋಕ್ಷ ಬೆಂಬಲ ನೀಡು ಬೇಜವಾಬ್ದಾರಿಯಿಂದ ನಡೆದುಕೊಂಡಿದೆ. ಈ ನಿರ್ಧಾರದಿಂದಾಗಿ ಅನಗತ್ಯವಾಗಿ ಎಲ್ಲರೂ ಸಂಕಷ್ಟಕ್ಕೀಡಾಗುವ, ಗಲಾಟೆ, ಗದ್ದಲಗಳಾಗುವ ಸಾಧ್ಯತೆಗಳು ಕಂಡು ಬಂದಿದೆ.

ಪಟಾಕಿ ದೀಪಾವಳಿಯ ಅವಿಭಾಜ್ಯ ಅಂಗವೇ?

ರಾಮಾಯಣದ ಕಥೆಯ ಪ್ರಕಾರ, ಮತ್ತು ಬ್ರಾಹ್ಮಣರ ಆಚರಣೆಯ ಪ್ರಕಾರ ರಾಮ ರಾವಣನನ್ನು ಸೋಲಿಸಿ ಅಯೋಧ್ಯೆಗೆ ವಾಪಸ್ ಆಗುತ್ತಿರುವ ಸಂದರ್ಭಗಳಲ್ಲಿ ದೀಪಗಳನ್ನು ಹಚ್ಚಿ ದೀಪಾವಳಿಯನ್ನು ಆಚರಿಸಲಾಯಿತು. ಆದರೆ, ಅಲ್ಲಿ ಪಟಾಕಿ ಸುಟ್ಟಿರುವ ಬಗ್ಗೆ ಯಾವುದೇ ಉಲ್ಲೇಖಗಳು ಇಲ್ಲ. ಅಷ್ಟಕ್ಕೂ ಪಟಾಕಿ ತಯಾರಿಸುವ ಚೀನಾ ಕಂಪೆನಿಗಳು ಆ ಕಾಲದಲ್ಲಿ ಇಲ್ಲವೇ ಇಲ್ಲ. ಹಾಗಾದರೆ, ಪಟಾಕಿ ಸುಡುವುದು ಹಿಂದೂ ಸಂಪ್ರದಾಯ ಹೇಗೆ ಆಗಿದೆ? ಶ್ರೀರಾಮನ ಅಯೋಧ್ಯೆಯಲ್ಲಿ ಪಟಾಕಿ ಸಿಡಿಸಲಾಗಿದೆ ಎಂಬ ಒಂದೇ ಒಂದು ಉಲ್ಲೇಖಗಳು ಸಿಗುವುದಿಲ್ಲ.

ದೀಪಾವಳಿಯನ್ನು ಶೂದ್ರರು, ಅಂದರೆ, ಬ್ರಾಹ್ಮಣರನ್ನು ಹೊರತುಪಡಿಸಿ ಇತರ ಎಲ್ಲಾ ಜಾತಿಗಳು ಆಚರಿಸುತ್ತಿರುವ ಪ್ರಕಾರ ಬಲಿ ಚಕ್ರವರ್ತಿ ಸೇರಿದಂತೆ ತಮ್ಮ ಹಿರಿಯರನ್ನು ಕಳೆದುಕೊಂಡ ದುಃಖವಾಗಿ ದೀಪಾವಳಿಯನ್ನು ಆಚರಿಸಲಾಗುತ್ತದೆ. ಅಲ್ಲಿ ಮರವನ್ನು ನೆಟ್ಟು ಬಲೀಂದ್ರನನ್ನು ಕರೆಯುವ ಸಂಪ್ರದಾಯವಿದೆ. ಕರಾವಳಿಯಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತದೆ. ಇನ್ನೂ ವಿವಿಧೆಡೆಗಳಲ್ಲಿ ತಮ್ಮ ಹಿರಿಯರಿಗೆ ಎಡೆ ಇಡುವ ಕಾರ್ಯಕ್ರಮವಿದೆ. ಇವೆಲ್ಲವೂ ದುಃಖದ ಆಚರಣೆಯಾಗಿದೆ. ದುಃಖದಲ್ಲಿ ಯಾರೂ ಪಟಾಕಿ ಸಿಡಿಸಿ ಸಂಭ್ರಮಿಸಲು ಸಾಧ್ಯವಿಲ್ಲ. ಹಾಗೆಯೇ ಬಲೀಂದ್ರನ ಕಾಲದಲ್ಲಿ ಪಟಾಕಿಗಳು ಇರಲಿಲ್ಲ.

ಇನ್ನೂ ವಾಸ್ತವವಾದ ಅಂಶ ಏನೆಂದರೆ,  ಕ್ರಿ.ಶ.1000ದವರೆಗೆ ಭಾರತದಲ್ಲಿ ಪಟಾಕಿ ತಯಾರಿಸುತ್ತಿದ್ದ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ. ಚೀನಾದಲ್ಲಿ ಮಾತ್ರವೇ ಪಟಾಕಿಗಳನ್ನು ತಯಾರಿಸಲಾಗುತ್ತಿತ್ತು. ಇವೆಲ್ಲವನ್ನು ಗಮನಿಸಿದರೆ, ದೀಪಾವಳಿಯು ದೀಪಗಳ ಹಬ್ಬವಾಗಿ ಆಚರಿಸಲ್ಪಡುತ್ತಿದೆಯೇ ಹೊರತು, ಪಟಾಕಿ ಶಬ್ದಗಳ ಹಬ್ಬವಾಗಿ ಎಂದಿಗೂ ಆಚರಣೆಯಲ್ಲಿಲ್ಲ. ಇದು ಕಾಲ ಕ್ರಮೇಣವಾಗಿ ಕೆಲವರ ಸ್ವಾರ್ಥಕ್ಕಾಗಿ ಮಾಡಿಕೊಂಡಿರುವ ಆಚರಣೆ ಅಷ್ಟೆ.

ಭಾರತದಲ್ಲಿ ಕ್ರಿ.ಶ.1400ರ ನಂತರ ಪಟಾಕಿ ಅಸ್ತಿತ್ವಕ್ಕೆ ಬಂದಿರಬೇಕು ಎಂದು ಹೇಳಲಾಗುತ್ತಿದೆ. ಗನ್ ಪೌಡರ್ ಭಾರತದಲ್ಲಿ ಬಳಕೆಗೆ ಬಂದ ಬಳಿಕವಷ್ಟೇ ಪಟಾಕಿ ಆರಂಭವಾಗಿದೆ ಎಂದು ಇತಿಹಾಸಕಾರ ದಿವಂಗತ ಪಿಕೆ ಗೋಡೆ ಹೇಳುತ್ತಾರೆ. ಭಾರತದ ಪುರಾಣಗಳಲ್ಲಿಯೂ ಬಿಲ್ಲು ಬಾಣಗಳು, ರಥಗಳು, ಗಧೆ ಇಂತಹ ವಸ್ತುಗಳು ಮಾತ್ರವೇ ಬಳಕೆಯಾಗಿರುವುದಕ್ಕೆ ಉಲ್ಲೇಖ ಇದೆ ಹೊರತು ಮದ್ದು ಗುಂಡುಗಳ ಬಗ್ಗೆ ಉಲ್ಲೇಖವಿಲ್ಲ. ಜೊತೆಗೆ ಪಟಾಕಿಯ ಬಗ್ಗೆ ಎಲ್ಲಿಯೂ ಉಲ್ಲೇಖ ಇಲ್ಲವೇ ಇಲ್ಲ.

ಪಟಾಕಿ ಚೀನಾದ ಸ್ವತ್ತು

ಪಟಾಕಿ ಕ್ರಿ.ಶ.700ರಲ್ಲಿ ಚೀನಾದಲ್ಲಿ ಬಳಕೆಯಾಯಿತು. ವಾಸ್ತವವಾಗಿ ನೋಡುವುದಾದರೆ, ಚೀನಾದಲ್ಲಿ ಪಟಾಕಿಯನ್ನು ಮೊದಲ ಬಾರಿಗೆ ಸಂಪ್ರದಾಯವಾಗಿ ಬಳಕೆ ಮಾಡಲಾಯಿತು. ಚೀನಾದಲ್ಲಿನ ಟ್ಯಾಂಗ್ ರಾಜವಂಶದಲ್ಲಿ ಬಳಕೆಯಲ್ಲಿರುವ ಸಂಪ್ರದಾಯದಂತೆ, ಪಟಾಕಿಯ ಜೋರಾದ ಶಬ್ದಕ್ಕೆ ಬೂತ ಪ್ರೇತಗಳು, ದುಷ್ಟ ಶಕ್ತಿಗಳು ಓಡಿ ಹೋಗುತ್ತವೆ ಎಂಬ ನಂಬಿಕೆ ಇತ್ತು. ಇದು ಕಾಲ ಕ್ರಮೇಣ ಇತರ ಹಬ್ಬಗಳಿಗೂ ಬಳಕೆಯಾಗಲು ಆರಂಭವಾಯಿತು ಕಾಲ ಕ್ರಮೇಣ ಅದು ಭಾರತದಲ್ಲಿಯೂ ಬಳಕೆಗೆ ಬಂತು.

ಒಟ್ಟಿನಲ್ಲಿ ಸಂಪ್ರದಾಯದ ಹೆಸರಿನಲ್ಲಿ ಭಾರತವು ಮಾಲಿನ್ಯಗಳ ಮೇಲೆ ಮಾಲಿನ್ಯಕ್ಕೆ ಒಳಗಾಗುತ್ತಿದೆ. ಭಾರತದ ದೆಹಲಿಯಲ್ಲಿ ಶುದ್ಧ ಗಾಳಿ ಇಲ್ಲ. ಟ್ರಂಪ್ ನಂತಹ ವಿದೇಶಿಯರು ಇದೇ ಕಾರಣಕ್ಕೆ ಭಾರತದ ಗಾಳಿ ಹೊಲಸು ಎಂದು ಹೇಳಿದ್ದಾರೆ. ದೇಶ ಭಕ್ತಿಯಿರುವ ಯಾವನೇ ಒಬ್ಬ ಪ್ರಜೆ ಕೂಡ ಪಟಾಕಿಯನ್ನು ಹಚ್ಚಲಾರರು. ಈ  ದೀಪಾವಳಿಯಲ್ಲಿ ನೀವು ಪಟಾಕಿ ಹಚ್ಚಿದರೆ, ವಯೋವೃದ್ಧರ, ಪುಟ್ಟ ಮಕ್ಕಳ, ರೋಗಿಗಳ, ಗರ್ಭಿಣಿಯರ ಸಾವಿಗೆ ನೀವು ಕಾರಣವಾಗುತ್ತೀರಿ. ಪಟಾಕಿ ಹಚ್ಚಬೇಡಿ, ಹಚ್ಚಲು ಬಿಡಬೇಡಿ. ಇದರಿಂದ ಪ್ರತಿಯೊಬ್ಬರಿಗೂ ಸಮಸ್ಯೆ ಕಟ್ಟಿಟ್ಟ ಬುತ್ತಿಯಾಗಿದೆ. ಪಟಾಕಿ ಭಾರತದ ಧಾರ್ಮಿಕತೆಯೇ ಅಲ್ಲ, ಅದು ಚೀನಾದ ಸಂಪ್ರದಾಯದ ಭಾಗವಾಗಿದೆ, ಕಾಲ ಕ್ರಮೇಣ ಅದು ಭಾರತದ ಆಚರಣೆಗಳಿಗೆ ಟ್ಯಾಗ್ ಆಗಿದೆ ಅಷ್ಟೆ.

ಇತ್ತೀಚಿನ ಸುದ್ದಿ