ಒತ್ತೆಯಾಳುಗಳನ್ನು ನಾವೇ ಹತ್ಯೆ ಮಾಡಿದ್ದು: ಇಸ್ರೇಲ್ ಸೇನೆಯಿಂದ ತಪ್ಪೊಪ್ಪಿಗೆ - Mahanayaka

ಒತ್ತೆಯಾಳುಗಳನ್ನು ನಾವೇ ಹತ್ಯೆ ಮಾಡಿದ್ದು: ಇಸ್ರೇಲ್ ಸೇನೆಯಿಂದ ತಪ್ಪೊಪ್ಪಿಗೆ

11/09/2024

ಹಮಾಸ್ ವಶದಲ್ಲಿ ಒತ್ತೆಯಾಳಾಗಿ ಇದ್ದವರ ಪೈಕಿ ಮೂವರನ್ನು ತಾವೇ ಹತ್ಯೆ ಮಾಡಿರುವುದಾಗಿ ಇಸ್ರೇಲ್ ಸೇನೆ ಒಪ್ಪಿಕೊಂಡಿದೆ. ಅಚಾತುರ್ಯದಿಂದ ಈ ಹತ್ಯೆ ನಡೆದಿದೆ ಎಂದು ಇಸ್ರೇಲ್ ಸೇನೆ ಒಪ್ಪಿಕೊಂಡಿದ್ದು ಇದೀಗ ಇಸ್ರೇಲ್ ನಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ವರ್ಷದ ಡಿಸೆಂಬರ್ ನಲ್ಲಿ ಹಮಾಸ್ ಕಮಾಂಡರ್ ಅಹಮದ್ ಅಂದೂರಿ ಅವರನ್ನು ಹತ್ಯೆಗೈಯುವ ಆಪರೇಷನ್ ಮೂನ್ ಸಂದರ್ಭದಲ್ಲಿ ಈ ಒತ್ತೆಯಾಳುಗಳ ಹತ್ಯೆ ನಡೆದಿದೆ ಎಂದು ಇಸ್ರೇಲ್ ಒಪ್ಪಿಕೊಂಡಿದೆ.

ಡಿಸೆಂಬರ್ 12ರಂದು ಗಾಝಾದಲ್ಲಿ ಐದು ಮೃತ ದೇಹಗಳನ್ನು ಪತ್ತೆ ಹಚ್ಚಿರುವುದಾಗಿ ಇಸ್ರೇಲ್ ಸೇನೆ ಹೇಳಿಕೊಂಡಿತ್ತು. ಆದರೆ ಆ ಸಂದರ್ಭದಲ್ಲಿ ಸೇನೆ ಈ ಒತ್ತೆಯಾಳುಗಳ ಹತ್ಯೆಗೆ ಹಮಾಸ್ ಕಾರಣ ಎಂದು ಹೇಳಿತ್ತು. ಆದರೆ ಹಮಾಸ್ ಒಪ್ಪಿಕೊಂಡಿರಲಿಲ್ಲ. ಇಸ್ರೇಲ್ ನ ವೈಮಾನಿಕ ದಾಳಿಯಿಂದಾಗಿ ಒತ್ತೆಯಾಳುಗಳ ಹತ್ಯೆ ನಡೆದಿದೆ ಎಂದು ಹಮಾಸ್ ಹೇಳಿಕೊಂಡಿತ್ತು.

ನಾವು ಅವರ ಜೀವವನ್ನು ರಕ್ಷಿಸಲು ಶ್ರಮಿಸಿದವು. ಆದರೆ ನೆತನ್ಯಾಹು ಅವರೇ ಒತ್ತೆಯಾಳುಗಳನ್ನು ಹತ್ಯೆ ಮಾಡಿದರು ಎಂದು ಹಮಾಸ್ ಈ ಹತ್ಯೆಗೀಡಾದ ಒತ್ತೆಯಾಳುಗಳ ಫೋಟೋ ದೊಂದಿಗೆ ಸ್ಪಷ್ಟೀಕರಣ ನೀಡಿತ್ತು. ಆದರೆ ಆಗ ಇಸ್ರೇಲ್ ಸೇನೆ ಈ ಸ್ಪಷ್ಟೀಕರಣವನ್ನು ನಿರಾಕರಿಸಿತ್ತು.

ಇದೀಗ ಈ ಮೃತದೇಹವನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು ಈ ಸಂದರ್ಭದಲ್ಲಿ ತಮ್ಮಿಂದ ಆದ ಪ್ರಮಾದಕ್ಕಾಗಿ ಸೇನೆ ವಿಷಾದಿಸಿದೆ. ಹಲವು ಕೋಣೆಗಳು ಮತ್ತು ತಿರುವುಗಳಿದ್ದ ಹಮಾಸ್ ನ ಸುರಂಗ ಮಾರ್ಗದಲ್ಲಿ 13 ಟನ್ ಭಾರವುಲ್ಲ ಸ್ಪೋಟಕವನ್ನು ಇಸ್ರೇಲ್ ಸಿಡಿಸಿತ್ತು. ಈ ಸ್ಫೋಟದಲ್ಲಿ ಒತ್ತೆಯಾಳುಗಳು ಸಾವಿಗೀಡಾಗಿದ್ದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ