ಜಾಗತೀಕರಣ,  ಶ್ರಮಿಕವರ್ಗ ಮತ್ತು ಸಂಕ್ರಾಂತಿ ಹಬ್ಬ - Mahanayaka

ಜಾಗತೀಕರಣ,  ಶ್ರಮಿಕವರ್ಗ ಮತ್ತು ಸಂಕ್ರಾಂತಿ ಹಬ್ಬ

sankrati
15/01/2023

  •  ಧಮ್ಮಪ್ರಿಯಾ, ಬೆಂಗಳೂರು

ಭಾರತ ದೇಶ ಒಂದು ಉಪಖಂಡವಾಗಿದೆ.  ತನ್ನ ಬೌಗೋಳಿಕ ನೆಲೆಗಟ್ಟಿನ ಆಧಾರದ ಮೇಲೆ ವಿವಿಧ ಭಾಷೆ,  ಹಲವು ಸಂಸ್ಕೃತಿ, ವಿಭಿನ್ನ ಸಂಪ್ರದಾಯ, ಹಲವು ವೇಷಭೂಷಣ,ಆಹಾರ ಪದ್ಧತಿ ಎಲ್ಲವನ್ನೂ ನಾವು ಕಾಣುತ್ತೇವೆ, ಪ್ರಕೃತಿಯ ಆಧಾರದ ಮೇಲೆ ಮಳೆಗಾಲ, ಚಳಿಗಾಲ ಬೇಸಿಗೆಕಾಲ ವೆಂದೂ ಸಹ ವಿಭಾಗಮಾಡಿಕೊಂಡು ಜನರು ತಮ್ಮ ಜೀವನವನ್ನು ನಡೆಸುತ್ತಿದ್ದಾರೆ.  ಈ ಜೀವನ ಕ್ರಮದಲ್ಲಿ ಒಂದು ಕಾಲದಲ್ಲಿ ಸಂಸ್ಕೃತಿ ಸಂಪ್ರದಾಯಗಳು ಬಹಳ ಅಚ್ಚುಕಟ್ಟಾಗಿ ನಡೆದು ಎಲ್ಲರಿಗೂ ಒಳ್ಳೆಯದನ್ನೇ ಬಯಸುವಂತೆ ಕಾಣುತ್ತಿದ್ದವು.

ಆಧುನಿಕತೆಯ ಕಡೆಗೆ ಮಾನವ ಕೈ ಚಾಚುತ್ತಿದ್ದಂತೆ ಎಲ್ಲವೂ ಮಾಯವಾಗತೊಡಗಿದವು. ಹಳ್ಳಿ ಸೊಗಡಿನ ಆಟ ಪಾಠಗಳು ಹಬ್ಬಗಳು ಎಲ್ಲವೂ ಆಡಂಬರವಾಗಿ ಇಂದು ಕೇವಲ ಯಾವುದೋ ಒಂದು ಅನುತ್ಪಾದಕ ಜನಾಂಗಕ್ಕೆ ಕೇವಲ ಆದಾಯದ ಮೂಲಗಳಾಗಿ ಪರಿವರ್ತನೆಯಾಗತೊಡಗಿದವು.  70 ರ ದಶಕದಿಂದ ಹಿಂದೆ  ಹಬ್ಬಗಳು  ಎಂದರೆ ಸಡಗರ ಸಂಭ್ರಮದ ಆಚರಣೆಗಳಾಗಿದ್ದವು.  ಅಂದು ಹಳ್ಳಿಗಳಲ್ಲಿ  ಮಾಡುತ್ತಿದ್ದ ಹಬ್ಬಗಳೆಂದರೆ ಸಂಕ್ರಾಂತಿ (ಸುಗ್ಗಿ), ಮಾರ್ಲೋಮಿ (ಪಿತೃಪಕ್ಷ), ಉಗಾದಿ (ಚಾಂದ್ರ ಮಾನ ಯುಗಾದಿ) ಈ ಹಬ್ಬಗಳು ಬಂದರೆ ನಮಗೆ ಎಲ್ಲಿಲ್ಲದ ಖುಷಿ, ಅದರಲ್ಲೂ ಸಂಕ್ರಾಂತಿ ಅಂದರೆ ಮನೆಯಲ್ಲಿದ್ದ ಹತ್ತಿಪ್ಪತ್ತು ದನ ಕರುಗಳಿಗೆ ಸಿಂಗಾರ ಮಾಡಿ  ಕಿಚ್ಚಾಯಿಸುತ್ತೇವೆ ಎಂದರೆ ಬಹಳ ಖುಷಿ.  ಈ ಹಬ್ಬಕ್ಕೆ ಕೊಟ್ಟಿಗೆಯನ್ನು ಸಾರಿಸಿ ಹೊಲಗಳಿಗೆ ಹೋಗಿ  ಅವರೇ ಸೊಪ್ಪು ಜ್ವಾಳದ ಕಟ್ಟಿ ತಂದು ಅಡೇ ತುಂಡಿನ ಮೇಲೆ ಇಟ್ಟುಕೊಂಡು ಗೇಣುದ್ದ ಕತ್ತರಿಸಿ ದನ ಕರುಗಳಿಗೆ ಹೊಟ್ಟೆ ತುಂಬಾ ಮೇಯಲು ಹಾಕುತ್ತಿದ್ದೆವು. ಅಂದು ಯಾರು ದನಕರುಗಳಿಗೆ ಹೊಡೆಯುತ್ತಿರಲಿಲ್ಲಾ.  ನೇಗಿಲು ನೊಗ ಯಾವ ಕೆಲಸಕ್ಕೂ ಬಳಸುತ್ತಿರಲಿಲ್ಲಾ, ಅಂದಿನಿಂದ ಮುಂಗಾರು ಮಳೆ ಬಂದು ಮತ್ತೆ ಬೇಸಾಯ ಮಾಡಲು ಪ್ರಾರಂಭಿಸುವವರೆಗೂ ದನಕರುಗಳಿಗೆ ಬಹಳ ವಿರಾಮವನ್ನು ನೀಡುತ್ತಿದ್ದರು.

ರೈತರು ಮುಂಗಾರಿನಿಂದ ಪ್ರಾರಂಭಿಸಿದ ಬೇಸಾಯದ ಕೆಲಸಗಳೆಲ್ಲವೂ ಕೊನೆಗೊಳ್ಳುವುದು ಸಂಕ್ರಾಂತಿ ಹಬ್ಬದ ದಿನದಂದೆ , ಅಂದು  ನೇಗಿಲು, ನೊಗ, ರಾಗಿ  ಗುಂಡು, ಬಂಡಿ ಎಲ್ಲವನ್ನು ತೊಳೆದು  ಪೂಜೆ ಮಾಡಿ ಮುಂದಿನ ಮುಂಗಾರಿನ ವರೆಗೂ ವಿರಾಮ ನೀಡುವುದು. ಈ ಸುಗ್ಗಿ ಹಬ್ಬದಲ್ಲಿ ಹೊಸದಾಗಿ ಬೆಳೆದ ಬೆಳೆಗಳಲ್ಲಿ ಅಡುಗೆ ಮಾಡಿ ಮನೆ ಮಂದಿಯೆಲ್ಲಾ ಕುಳಿತು ಊಟ ಮಾಡುತ್ತಾರೆ.ಇದನ್ನು ಕೆಲವು ಭಾಗದಲ್ಲಿ ಹೋಸನ್ನ ಅಂತಲೂ ಕರೆಯುತ್ತಾರೆ. ಇಷ್ಟೆಲ್ಲಾ ಒಳ್ಳೆಯ ಬಾಂಧವ್ಯ, ಸಾಕುಪ್ರಾಣಿಗಳ ನಡುವಿನ ಒಡನಾಟ ಇಂದು ಮಾಯವಾಗಿದೆ.  ಅಂದು ಹಸು,ಮೇಕೆ, ಎಮ್ಮೆ,  ಕುರಿ, ಒಂದು ನಾಯಿ ಮರಿ, ಕೋಳಿಗಳು, ಬೆಕ್ಕು ಎಲ್ಲರ ಮನೆಯಲ್ಲಿಯೂ ಕಂಡುಬರುತ್ತಿದ್ದವು. ಹಳ್ಳಿಗರಲ್ಲಿ ಇವುಗಳೆಲ್ಲವೂ ಇದ್ದರೆ  ಒಂದು ಜೀವನ ಎನ್ನುವ ಹಾಗೆ ಜನರು ಬದುಕುತ್ತಿದ್ದರು.

ಆದರೆ ಇಂದು ಎಲ್ಲವೂ ಮಾರುಕಟ್ಟೆಯ ವ್ಯವಸ್ಥೆಗೆ ಬದಲಾಗಿಬಿಟ್ಟಿವೆ. ಇಂದು ಪ್ರತೀ ಹಳ್ಳಿಗೂ ಆಧುನೀಕತೆ, ಜಾಗತೀಕರಣ, LPG ಪರಿಣಾಮ, ಮಾರ್ಟ್ ಗಳ ರೋಗಗಳು ಬಡಿದುಬಿಟ್ಟಿದೆ.ನಮ್ಮ ಆಚರಣೆಗಳೆಲ್ಲವೂ ಮಾಯವಾಗಿವೆ. ನಾವು ಇಂದು ಇಡೀ ಜಗತ್ತನ್ನೇ ಸುತ್ತಿ ಬಂದರೂ, ನಮಗೆ  ನಮ್ಮೂರಿನ ಕೆರೆ ಹಳ್ಳ ಕೊಳ್ಳಾ,  ನಮ್ಮೂರ ಬೇವಿನ ಮರದ ಕೆಳಗಿನ ನಿದ್ದೆ ,  ಅರಳಿಕಟ್ಟೆಯ ಹರಟೆ ಮುದುಕರ ಗುಂಪು,  ಅಲ್ಲಲ್ಲಿ  ಓಡಾಡುವ ಅಟ್ಲಾಸ್ ಸೈಕಲ್,  ಗೊಬ್ಬರ ತುಂಬಿ ಹೋಗುವ ಎತ್ತಿನ ಗಾಡಿ, ರಾಗಿ ಗುಂಡು,  ಹುಲ್ಲಿನ ಕಳಾ, ಸಗಣಿಯ ತಿಪ್ಪೆ, ಅಣ್ಣೆ  ಸೊಪ್ಪಿನ ಉಪ್ಪುಸಾರು, ಕೊಬ್ಬರಿ ಮಂಡಿ,  ರೇಷ್ಮೆ ಸೊಪ್ಪಿನ ತೋಟ,  ಗೋಲಿ-ಬುಗುರಿ ಆಟ,  ಸಂಕ್ರಾಂತಿಗೆ ಸಿಂಗರಿಸಿದ ನಮ್ಮ ಮನೆಯ ಎತ್ತುಗಳು ,  ನಮ್ಮದೊಂದು ಕರಿ ನಾಯಿ ಮರಿ ,  ಪಕ್ಕದ ಮನೆಯ ಸೋದರಮಾವನ ಮಗಳ ನಗು, ನಮ್ಮ ಇಸ್ಕೊಲಿನ ಕಿವುಡ ಮೇಸ್ಟ್ರು, ನಮ್ಮೂರ ಕಡೆ ಮನೆ ಮಾದಮ್ಮನ ಬೈಗುಳ, ಗೋಲಿ ಬುಗುರಿ ಆಡುವಾಗ ಜೇಬಲ್ಲಿ ತುಂಬಿದ ಗೋಲಿಗಳ ಸದ್ದು,  ಗೋಲಿ ಆಡಿದ ಕೈಲೇ ಪಾಚಿ ಕಟ್ಟಿದ  ನಲ್ಲಿಗೆ ಕೈಯೊಡ್ಡಿ ನೀರು ಕುಡಿದದ್ದು, ಚೌಕಾಬಾರ ಆಡಿದ್ದು, ಸೋತಾಗ ಅತ್ತಿದ್ದು, ಗೆದ್ದಾಗ ಬೇರೆಯವರನ್ನು ಅಣಕಿಸಿದ್ದು,  ಸೈಕಲ್ ಟೈರ್ ಚಕ್ರ ಮಾಡಿ ಓಡಿಸಿದ್ದು, ಇಟ್ಟು ಸೊಪ್ಪಿನ ಆಟ ಆಡಿದ್ದು,  ಉತ್ತ ಹೊಲದಲ್ಲಿ ಕೊಂಡ ತೆಗೆದು ದೇವರು ಬರಿಸಿ ಕೊಂಡ ನುಗ್ಗಿಸಿದ್ದು, ತೆಂಗಿನ ಗೊದಮಟ್ಟೆ ಬ್ಯಾಟ್ ಮಾಡಿ ಕ್ರಿಕೇಟ್ ಆಡಿದ್ದು , ನಾಕಾಣಿಗೆ 5 ಗ್ವಾಮಳೆ ತೆಗೆದುಕೊಂಡು 5 ಬೆರಳಿಗೂ ಹಾಕೊಕೊಂಡು ಎಲ್ಲರನ್ನು ಅಣಕಿಸಿಕೊಂಡು ತಿಂದದ್ದು, 25 ಪೈಸೆ ಐಸ್ಕಂಡಿ ಯನ್ನು ಬಿಸಿಲಲ್ಲಿ ನಿಂತು ಚೀಪುತ್ತಾ ಕೈ ಮೊಳ ಸಂದಿನಲ್ಲಿ ತೊಟ್ಟಿಕ್ಕುವಾಗ ಅಲ್ಲಿಂದ ನಾಲಿಗೆ ಹಾಕಿ ನೆಕ್ಕಿದ್ದು, ಇವೆಲ್ಲವೂ ಬಾಲ್ಯದ ನೆನಪುಗಳು.  ಅಂದಿನ ನಿಸ್ವಾರ್ಥದ ಬದುಕಿನ ಚಿತ್ರಣಗಳು ನಮ್ಮ ಮುಂದಿನ ಪೀಳಿಗೆಗೆ ಕೇವಲ ಕನಸ್ಸುಗಳಾಗಿವೆ.

ಇಷ್ಟೆಲ್ಲಾ  ಸ್ವಾವಲಂಭಿ ಹಾಗೂ ಸ್ವಾಭಿಮಾನದ ಜೀವನವನ್ನು ನಡೆಸುತ್ತಿದ್ದ ಭಾರತೀಯರಲ್ಲಿ  ಶೇಕಡಾ 85 ರಷ್ಟು ಮಾತ್ರ ಶ್ರಮಿಕ ಮತ್ತು ಉತ್ಪಾದಕ ವರ್ಗವಾಗಿದೆ.  ಈ ವರ್ಗವು ತಾವು ದುಡಿದು ತಾವೇ ತಿನ್ನುತ್ತಾ, ಯಾರೂ ಪರಾವಲಂಬಿಯ ಜೀವನವನ್ನು ನಡೆಸುತ್ತಿರಲಿಲ್ಲಾ.  ಆದರೆ ಇನ್ನುಳಿದ ಶೇಕಡಾವಾರು ಜನಾಂಗವು ಕೇವಲ ಉತ್ಪಾದಕ ವರ್ಗವು ದುಡಿದ ದವಸ ಧಾನ್ಯಗಳನ್ನೇ ತನ್ನದೆಂದುಕೊಂಡವರಂತೆ  ಶ್ರಮಿಕವರ್ಗದವರಿಂದ ಕಸಿದು ತಿನ್ನುತ್ತಿದ್ದಾರೆ.  ಈ ಅನುತ್ಪಾದಕ ವರ್ಗವು ದೇವರು ದಿಂಡಿರು, ಗುಡಿ ಗುಂಡಾರ, ಪೌರೋಹಿತ್ಯ, ಶಾಸ್ತ್ರ,  ಪಂಚಾಂಗ ಇದರಲ್ಲೇ ಜನರನ್ನು ನಂಬಿಸಿ ಬದುಕುವ ಪರಾವಲಂಬಿಗಳು,  ಇವರು ದೇವರ ಹೆಸರಲ್ಲಿ ಧರ್ಮದ ನೆಪದಲ್ಲಿ ಜನರನ್ನು ಮಾನಸಿಕವಾಗಿ ಹಿಡಿದಿಟ್ಟು, ತಾವು ಬದುಕಲು  ಉತ್ಪಾದಿತ ವರ್ಗವನ್ನು ತನ್ನ ಅದೀನದಲ್ಲಿ ಇಟ್ಟುಕೊಂಡಿದ್ದಾರೆ.

ಇಂದು ರೈತರು ಬೆಳೆವ ಬೆಳೆಗಳು ನಿಜವಾಗಿಯೂ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತವೆಯೇ ಎನ್ನುವ ಭಯದ ವಾತಾವರಣದಲ್ಲಿ ಬದುಕುವ ಸ್ಥಿತಿ ಬಂದೊದಗಿದೆ.  ಆಧುನಿಕತೆ ಎನ್ನುವುದು ಸಂವಿಧಾನಿಕವಾಗಿ ರೂಪುಗೊಂಡಿದ್ದರು ಅದು ಸರಿಯಾದ ಕ್ರಮದಲ್ಲಿ ಜಾರಿಯಾಗದಿರುವುದೇ ಬಹಳ ವಿಷಾದಕರವಾದದ್ದು.  ಜಾಗತೀಕರಣದ ಹೆಸರಲ್ಲಿ ಉತ್ವಾದಕ ವರ್ಗವನ್ನು ತನ್ನ ಅಧೀನಕ್ಕೆ ತೆಗೆದುಕೊಳ್ಳಲಾಗಿದೆ. ಮುಕ್ತ ಮಾರುಕಟ್ಟೆಯು ತನಗೆ  ಅಗತ್ಯವಿರುವ ಬೆಳೆಗಳನ್ನು  ರೈತ ಬೆಳೆಯಬೇಕು ಎನ್ನುವಂತೆ ಉತ್ಪಾದಕ ವರ್ಗವನ್ನು (ರೈತ) ನಿಯಂತ್ರಿಸತೊಡಗಿತು.  ರಾಗಿ, ಅಕ್ಕಿ, ವಿವಿಧ ದಾನ್ಯಗಳು ಸೇರುಗಳಲ್ಲಿದ್ದದ್ದು, ಇಂದು  ಕೆ ಜಿ ಲೆಕ್ಕಕ್ಕೆ ಬಂದು ಪ್ಲಾಸ್ಟಿಕ್ ಪೇಪರ್ ಗಳಲ್ಲಿ ಪ್ಯಾಕುಗಳಾಗಿ ಮಾರ್ಪಟ್ಟಾಗಿವೆ. ಊರಲ್ಲಿ ಮಾರುತ್ತಿದ್ದ ಗುಡ್ಡೆ ಮಾಂಸ ಮಾಯವಾಗಿ ಮಾಲುಗಳಲ್ಲಿ ಬಾಕ್ಸ್ ರೂಪಕ್ಕೆ ಬದಲಾಗಿವೆ ,  ತಿನ್ನುವ ಅನ್ನಾ ಸಂಪೂರ್ಣವಾಗಿ ಕಲುಷಿತಗೊಂಡು ವಿಷವನ್ನು ಊಟಮಾಡುವ ಪರಿಸ್ಥಿತಿ ಬಂದೊದಗಿದೆ.  ಇವೆಲ್ಲವೂ ದೇಶದ ಆರ್ಥಿಕ ಸುಧಾರಣೆಯ ಮಂತ್ರಗಳೆಂದು ದುಡಿವ ವರ್ಗಕ್ಕೆ ನಂಬಿಸುತ್ತಾ ಇಡೀ ಅಧಿಕಾರವನ್ನು ಅನುತ್ಪಾದಕ ವರ್ಗವು ನಿರ್ವಹಿಸಲಾರಂಭಿಸಿತು.

ಜಾಗತೀಕರಣವೆಂಬುದು ಭಾರತದ ಮಟ್ಟಕ್ಕೆ ಕೇವಲ ಬಂಡವಾಳಗಾರರ ಬದುಕಿನ ಹೊಸ ಆಯಾಮಗಳಾದವೇ ಹೊರತು,  ಸಾಮಾನ್ಯ ಜನರ ಬಂಧನದ ಬಿಡುಗಡೆಯ ಬದುಕಾಗಲಿಲ್ಲಾ.  ಮಾರ್ಟ್ ಗಳೆಲ್ಲಾ ಮೂಲ ಬಂಡವಾಳಗಾರರ  ಆದಾಯದ ಮೂಲಗಳಾದವೇ ಹೊರತು ಶ್ರಮಿಕರು ಬೆಳೆದ ಬೆಲೆಗಳ ಮುಕ್ತ ಮರುಕಟ್ಟೆಯಾಗಲಿಲ್ಲಾ.  ಬದಲಿಗೆ ರೈತರು ಯಾವರೀತಿಯ ಬೆಳೆಗಳನ್ನು ಇಂದಿನ ಮಾರುಕಟ್ಟೆಗೆ ತಕ್ಕಂತೆ ಬೆಳೆಯಬೇಕು ಎಂದು ನಿರ್ಧರಿಸಿದವು. ಜಾಗತೀಕರಣ, ಮುಕ್ತಮಾರುಕಟ್ಟೆ ವ್ಯವಸ್ಥೆಗಳು ಶ್ರಮಿಕವರ್ಗಕ್ಕೆ  ಯಜಮಾನ್ಯತೆಯನ್ನು ಸೃಷ್ಠಿಸಿತು. ಮೊದಲು ನಡೆಯುತ್ತಿದ್ದಾ ಹಬ್ಬಗಳು ಮನೆಮಂದಿಯೆಲ್ಲಾ ಒಟ್ಟಾಗಿ ಸೇರಿ ಸಂಭ್ರಮದಿಂದ  ವಿಶ್ರಾಂತಿ ಜೀವನ ನಡೆಸುವ, ಬಂಧು ಬಳಗದೊಡನೆ ಸಂತೋಷದ ದಿನಗಳನ್ನು ಕಳೆಯಲು ನಡೆಸುತ್ತಿದ್ದ ಹಬ್ಬಗಳಾಗಿದ್ದವು.

ಇಂದು ಸೃಷ್ಟಿಯಾಗಿರು ಹಬ್ಬದ ಹೆಸರುಗಳನ್ನು ಕೇಳಿದರೆ ವಿಚಿತ್ರವೆನಿಸುತ್ತದೆ. ಈ ಹಬ್ಬಗಳನ್ನು ಆಚರಿಸಲು ಪ್ರಾರಂಬಿಸಿದರೆ ಈ ಅನುತ್ವಾದಕ ವರ್ಗಕ್ಕೆ ಹೆಚ್ಚು ಲಾಭವಾಗುತ್ತದೆಯೇ ಹೊರತು ಇವರುಗಳಿಗೆ ಯಾವ ಲಾಭವೂ ಇಲ್ಲವಾಗಿದೆ. ಸಂಕ್ರಾಂತಿ ಹಬ್ಬ ಮಾಡಿದರೆ ಮನೆಯಲ್ಲಿನ ರಾಸುಗಳಿಗೆ ಮಾತ್ರ  ಪೂಜೆ. ಆದರೆ ಇಂದು ಎಲ್ಲದಕ್ಕೂ  ದೇವಾಲಯಗಳಿಗೆ, ಗಣೇಶನ ಗುಡಿಗೆ ಹೋಗಿ ಪೂಜೆ ಮಾಡಿಸುತ್ತಾರೆ. ತುಳಸಿ ಹಬ್ಬ, ಗೌರಿ ಗಣೇಶ, ಯುಗಾದಿ, ಪಿತೃಪಕ್ಷ,  ಮಹಾ ಶಿವರಾತ್ರಿ,  ಇತ್ತೀಚೆಗೆ ಪ್ರಾರಂಭವಾಗಿರುವ ಓಂ ಶಾಂತಿ, ವಿವಿಧ ದೇವಾಲಯಗಳ ಪ್ರವಾಸ,  ಪ್ರವೇಶ,ಅಯ್ಯಪ್ಪನ ದರ್ಶನ,  ಹೀಗೆ ಹಲವಾರು ಹಬ್ಬ ಆಚರಣೆಗಳು ಅನುಸರಣೆಗಳೆಲ್ಲವೂ ಪ್ರಾರಂಭವಾಗಿವೆ, ಇದನ್ನು ಮಾಡುವವರಿಗೆ ಎಷ್ಟು ಒಳ್ಳೆಯದಾಗುವುದೋ ಇಲ್ಲವೋ ಗೊತ್ತಿಲ್ಲಾ, ಆದರೆ ಅದರಿಂದಲೇ ಬದುಕುತ್ತಿರುವವರಿಗೆ ಹೆಚ್ಚು ಲಾಭವಾಗುತ್ತಿದೆ.

ಇದನ್ನು ನಮ್ಮ ವಿದ್ಯಾವಂತ ಯುವಕರು ಅರ್ಥ ಮಾಡಿಕೊಳ್ಳಬೇಕಾಗಿದೆ. ಇಂತವರನ್ನು ನೋಡಿಯೇ ಬಾಬಾಸಾಹೇಬರು ಹೇಳಿದ್ದು,  “ನೀವು ದೇವರ ದೇಗುಲಕ್ಕೆ ಕೊಡುವ ಕಾಣಿಕೆಯನ್ನು ನಿಮ್ಮ ಮಕ್ಕಳ ಶಿಕ್ಷಣಕ್ಕೆ ಕೊಡಿ” ಎಂದಿದ್ದಾರೆ. ಶ್ರಮಿಕ ವರ್ಗವು ವರ್ಷವಿಡೀ ಶ್ರಮಪಟ್ಟು ದುಡಿದು ಸಂಪಾದಿಸಿದ ಹಣದಲ್ಲಿ ಯಾತ್ರೆಗಳನ್ನು ಕೈಗೊಂಡು ದಿನಗಟ್ಟಲೇ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಮಾಡಿ ಪ್ರಸಾದಕ್ಕಿಷ್ಟು, ಪೂಜೆಗಿಷ್ಟು, ಹೋಮ ಹವನಗಳಿಗಿಷ್ಟು ಎಂದು ಕಾಣಿಕೆ ಕೊಟ್ಟು ಬಂದು ಮತ್ತೆ ಅದೇ ಕಾಯಕದಲ್ಲಿ ತೊಡಗುತ್ತಾರೆ, ಅದರಿಂದ ಇಲ್ಲಿ ಯಾವ ಬದಲಾವಣೆಯು ಇಲ್ಲಾ.

ಬಾಬಾಸಾಹೇಬರು ಹೇಳಿದ್ದು ಅದಕ್ಕೆ  “ಎಲ್ಲಿಯವರೆವಿಗೂ ನಮ್ಮ ಹೆಣ್ಣುಮಕ್ಕಳು ಗುಡಿ ಗುಂಡಾರಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವುದನ್ನು ಬಿಟ್ಟು ಗ್ರಂಥಾಲಯಗಳ ಮುಂದೆ ನಿಂತು ಜ್ಞಾನವನ್ನು ವೃದ್ದಿಸಿಕ್ಕೊಳ್ಳುತ್ತಾರೋ ಅಂದು ಈ ದೇಶಕ್ಕೆ ಒಳ್ಳೆಯ ಭವಿಷ್ಯ ಬರುತ್ತದೆ” ಎಂದಿದ್ದಾರೆ  ಇದನ್ನೇ ಮುಂದುವರೆದು ರಾಷ್ಟ್ರಕವಿ ಕುವೆಂಪು ರವರು  ಯುವಕರಿಗೆ ಕರೆ ಕೊಟ್ಟರು  “ಓ ಬನ್ನಿ ಸೋದರರೇ ಬೇಗ ಬನ್ನಿ,  ಗುಡಿ ಚರ್ಚು ಮಸಿದಿಗಳ ಬಿಟ್ಟು ಹೊರ ಬನ್ನಿ, ಅಸಮಾನತೆಯನ್ನು ಬುಡಮಟ್ಟ ಕೀಳಬನ್ನಿ” ಎಂದು ಕರೆಕೊಟ್ಟಿದ್ದಾರೆ.

ಹೀಗೆ  ಜಾಗತೀಕರಣ ಎಂಬುದು ಕೇವಲ ಬಂಡವಾಳಕಾರರ  ಬದುಕಿನ ಸುಲಭ ಮಾರ್ಗವಾಗಿದೆ.  ಮುಕ್ತಮಾರುಕಟ್ಟೆ ಎಂಬುದು ಶ್ರಮಿಕವರವನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳುವ, ರೈತರನ್ನು ನಿಯಂತ್ರಿಸುವ ಬಹುದೊಡ್ಡ ಜಾಲವಾಗಿದೆ.  ಹಬ್ಬ ಹರಿದಿನಗಳು ಯಾತ್ರೆಗಳು,ಪೂಜೆ ಪುನಸ್ಕಾರಗಳು  ಜನರನ್ನು ಮಾನಸಿಕವಾಗಿ ಕಟ್ಟಿ ಹಾಕಿ ಒಂದು ವರ್ಗವು ಯಾವುದೇ ಶ್ರಮವಿಲ್ಲದೆ  ಶ್ರೇಷ್ಠತೆಯನ್ನು ಕಾಪಾಡಿಕೊಂಡು ಆದಾಯದ ಮೂಲವನ್ನು ಸೃಷ್ಟಿಕೊಂಡಂತಾಗಿದೆ.  ಶ್ರಮಿಕವರ್ಗ ಮಾತ್ರ ಇಂದಿಗೂ ಶ್ರಮಿಕರಾಗಿಯೇ ದುಡಿಯುವ ಸ್ಥಿತಿಯಲ್ಲಿಯೇ ಬದುಕುವಂತಾಗಿದೆ ,

ಆದ್ದರಿಂದ ಬಂಧುಗಳೇ ಬುದ್ಧ ಹೇಳಿದ ಹಾಗೆ  

ನಿಮಗೆ ನೀವೇ ದಾರಿ ದೀಪ

ನಿನ್ನ ಬದುಕಿಗೆ ನೀನೆ ಬೆಳಕು

ಯಾವ ಅಗೋಚರ ಶಕ್ತಿಯು ನಮ್ಮನ್ನು ಉದ್ದಾರ ಮಾಡುವುದಿಲ್ಲಾ  ಇಷ್ಟನ್ನು ಅರ್ಥ ಮಾಡಿಕೊಂಡು ವೈಜ್ಞಾನಿಕ ಮಾರ್ಗದಲ್ಲಿ ನಡೆದು ಹೊಸ ವಿಚಾರಗಳ ತಿಳಿದು ಹೊಸದಾದ  ಸಮಾಜ ಕಟ್ಟುವಲ್ಲಿ ಮುಂದಾಗಬೇಕು ಎಂದು ಬಯಸುತ್ತೇನೆ.  12ನೇ ಶತಮಾನದಲ್ಲಿ ಬಂದ ಬಸವಣ್ಣ ಸಹ ಕಾಯಕದ ತತ್ವವನ್ನು ಸಾರಿದರು

“ಶಾಸ್ತ್ರ ವೆಂಬುದು ಸುಳ್ಳಿನ ಕಂತೆ 

ಪುರಾಣವೆಂಬುದು ಪುಂಡರ ಗೋಷ್ಠಿ 

ಕೈಲಾಸವೆಂಬುದು ಹಾಳು ಬೆಟ್ಟ ಕಾಣಿರೋ 

ಅಲ್ಲಿರಿವ ಶಿವನು ದಟ್ಟ ಕಾಣಿರೋ 

ಅಲ್ಲಿರುವ ಗಣಂಗಳು ಮೈಗಳ್ಳರು ಕಾಣಿರೋ 

ಬೇಡೆನಗೆ ಕೈಲಾಸ, ಮಾಡುವುದು ಕಾಯಕ 

ಕಾಯಕ ದೀಕ್ಷೆಯನು ನೀಡು, ನಾಡ ಅಂದರಕ್ಕೆ ಹಬ್ಬಿಸುವೆ, ಕಾಯಕವೇ ಕೈಲಾಸ”.  ಹೀಗೆ ಸಾರಿತ್ತಾ ಮೂಢನಂಬಿಕೆಯನ್ನು ಓಡಿಸಿ ಕಾಯಕ ತತ್ವವನ್ನು ಸಾರಿದರು.

ಪೆರಿಯಾರ್ ಹೇಳಿದ ಹಾಗೆ  ದೇವರಿಲ್ಲಾ ದೇವರಿಲ್ಲಾ ದೇವರು ಇಲ್ಲವೇ ಇಲ್ಲಾ.  ದೇವರನ್ನು ಸೃಷ್ಠಿಸಿದವನು ಮೂರ್ಖ,ನಂಬುವವನು ಅಯ್ಯೋಗ್ಯ,  ಪೂಜಿಸುವವನು ಮುಟ್ಟಾಳ  ತಂದೆ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ನಮಗೆ ಮಾರ್ಗದರ್ಶನವಾಗಬೇಕಿದೆ.

ಹಬ್ಬಗಳು ನಮ್ಮ ಸಂತೋಷದ ಕ್ಷಣಗಳಾಗಬೇಕೇ ಹೊರತು ಯಾವುದೇ ಶ್ರಮವಿಲ್ಲದೆ ಶ್ರಮಿಕರ ಆದಾಯವನ್ನು ದೋಚುವ ದಿನಗಳಾಗಬಾರದು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ