ಹಾಸ್ಟೆಲ್‌ನಲ್ಲಿ ಕುಡಿದು ಹುಕ್ಕಾ ಬಳಕೆ: ಇಬ್ಬರು ವಿದ್ಯಾರ್ಥಿಗಳಿಗೆ 1.79 ಲಕ್ಷ ದಂಡ ವಿಧಿಸಿದ ಜೆಎನ್ ಯು ಯುನಿವರ್ಸಿಟಿ
ಹೊರಗಿನವರನ್ನು ತಮ್ಮ ಕೋಣೆಗಳಿಗೆ ಪ್ರವೇಶಿಸಲು ಅನುಮತಿ ನೀಡಿದ್ದಲ್ಲದೇ ಮದ್ಯ ಸೇವಿಸಿ ಮತ್ತು ಹುಕ್ಕಾ ಬಳಸಿದ ಆರೋಪದ ಮೇಲೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ಇಬ್ಬರು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಒಟ್ಟು 1.79 ಲಕ್ಷ ರೂ.ಗಳ ದಂಡ ವಿಧಿಸಿದೆ.
ಜನವರಿ 8 ರಂದು ವಿದ್ಯಾರ್ಥಿಗಳಿಗೆ ನೀಡಲಾದ ಅಧಿಕೃತ ನೋಟಿಸ್ ಗಳ ಪ್ರಕಾರ, ಐದು ದಿನಗಳಲ್ಲಿ ದಂಡವನ್ನು ಜಮಾ ಮಾಡಲು ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.
ಮೊದಲ ನೋಟಿಸ್‌ನಲ್ಲಿ, “ನಿಮ್ಮ ಕೋಣೆಯಲ್ಲಿ 12 ಅಪರಿಚಿತ ವ್ಯಕ್ತಿಗಳು ಮದ್ಯ ಸೇವಿಸುತ್ತಿರುವುದು ಮತ್ತು ನಿಮ್ಮ ಅನುಪಸ್ಥಿತಿಯಲ್ಲಿ ಹಾಸ್ಟೆಲ್ ಆವರಣದಲ್ಲಿ ತೊಂದರೆ ಉಂಟುಮಾಡುತ್ತಿರುವುದು ಕಂಡುಬಂದಿದೆ. ಈ ನಡವಳಿಕೆಯು ಹಾಸ್ಟೆಲ್ ನಿಯಮಗಳ ಗಂಭೀರ ಉಲ್ಲಂಘನೆಯಾಗಿದೆ” ಎಂದಿದೆ.
ಹೊರಗಿನವರ ಅನಧಿಕೃತ ಪ್ರವೇಶಕ್ಕಾಗಿ 60,000 ರೂ., ಮದ್ಯಪಾನಕ್ಕಾಗಿ 2,000 ರೂ., ಇಂಡಕ್ಷನ್ ಸ್ಟವ್ ಮತ್ತು ಹೀಟರ್ ಹೊಂದಿದ್ದಕ್ಕಾಗಿ 6,000 ರೂ., ಹುಕ್ಕಾ ಬಳಕೆಗಾಗಿ 2,000 ರೂ., ಆಕ್ರಮಣಕಾರಿ ನಡವಳಿಕೆ, ಅಧಿಕೃತ ವಿಷಯಗಳಲ್ಲಿ ಹಸ್ತಕ್ಷೇಪ ಮತ್ತು ಹಾಸ್ಟೆಲ್ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಕ್ಕಾಗಿ 10,000 ರೂ.ಸೇರಿದಂತೆ ವಿದ್ಯಾರ್ಥಿಗೆ 80,000 ರೂಪಾಯಿ ದಂಡ ಹಾಕಲಾಗಿದೆ.
ಕಳೆದ ವರ್ಷ ಡಿಸೆಂಬರ್ 22 ಮತ್ತು ಜನವರಿ 5 ರಂದು ಮದ್ಯ ಸೇವಿಸಿದ್ದ ಇನ್ನೊಬ್ಬ ವಿದ್ಯಾರ್ಥಿಯ ಕೋಣೆಯಲ್ಲಿ ಹಲವಾರು ಹೊರಗಿನವರು ಇದ್ದರು ಎಂದು ಎರಡನೇ ನೋಟಿಸ್ ನಲ್ಲಿ ಆರೋಪಿಸಲಾಗಿದೆ. “ವಾರ್ಡನ್ ಸಮಿತಿ ಮತ್ತು ಭದ್ರತಾ ಸಿಬ್ಬಂದಿ ಆ ಸಮಯದಲ್ಲಿ ನಿಮ್ಮ ಕೋಣೆಯನ್ನು ತೆರೆಯಲು ಪ್ರಯತ್ನಿಸಿದರು. ಆದರೆ ನೀವು ಬಾಗಿಲು ತೆರೆಯಲಿಲ್ಲ” ಎಂದು ಆರೋಪಿಸಲಾಗಿದೆ.
ಎರಡು ಸಂದರ್ಭಗಳಲ್ಲಿ ಅನಧಿಕೃತ ವ್ಯಕ್ತಿಗಳಿಗೆ ಅವಕಾಶ ನೀಡಿದ್ದಕ್ಕಾಗಿ 85,000 ರೂ., ಮದ್ಯಪಾನಕ್ಕಾಗಿ 2,000 ರೂ., ಹುಕ್ಕಾ ಹೊಂದಿದ್ದಕ್ಕಾಗಿ 2,000 ರೂ., ಆಕ್ರಮಣಕಾರಿ ಮತ್ತು ವಿಧ್ವಂಸಕ ನಡವಳಿಕೆಗಾಗಿ 10,000 ರೂ., ಸೇರಿದಂತೆ 99,000 ರೂಪಾಯಿ ದಂಡ ಹಾಕಲಾಗಿದೆ.
ನಿಗದಿತ ಸಮಯದೊಳಗೆ ದಂಡವನ್ನು ಪಾವತಿಸಲು ವಿಫಲವಾದರೆ ಹಾಸ್ಟೆಲ್‌ನಿಂದ ಹೊರಹಾಕುವುದು ಸೇರಿದಂತೆ ಹೆಚ್ಚಿನ ಶಿಸ್ತು ಕ್ರಮಕ್ಕೆ ಕಾರಣವಾಗಬಹುದು ಎಂದು ಎರಡೂ ನೋಟಿಸ್ ಗಳು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿವೆ.
“ಭವಿಷ್ಯದ ಯಾವುದೇ ದೂರುಗಳು ಅಥವಾ ಉಲ್ಲಂಘನೆಗಳು ಯಾವುದೇ ಮುನ್ಸೂಚನೆಯಿಲ್ಲದೆ ನಿಮ್ಮನ್ನು ತಕ್ಷಣ ಹಾಸ್ಟೆಲ್ ನಿಂದ ಹೊರಹಾಕಲು ಕಾರಣವಾಗುತ್ತವೆ” ಎಂದು ನೋಟಿಸ್ ನಲ್ಲಿ ಎಚ್ಚರಿಕೆ ನೀಡಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj