ಪ್ರಧಾನಿ ಮೋದಿ ಆಶ್ವಾಸನೆ ಕೊಟ್ಟು ಅದಕ್ಕೆ ಉಲ್ಟಾ ನಡೆದುಕೊಂಡಿದ್ದಾರೆ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ - Mahanayaka

ಪ್ರಧಾನಿ ಮೋದಿ ಆಶ್ವಾಸನೆ ಕೊಟ್ಟು ಅದಕ್ಕೆ ಉಲ್ಟಾ ನಡೆದುಕೊಂಡಿದ್ದಾರೆ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ

siddaramaiah
13/04/2024


Provided by

ಚಾಮರಾಜನಗರ: ರಾಜ್ಯದ ಜನತೆ ಬರಗಾಲಕ್ಕೆ ತುತ್ತಾಗಿದ್ದಾರೆ. ನಮ್ಮ ಜನ ಕಟ್ಟಿದ ತೆರಿಗೆಯಲ್ಲಿನ ಪಾಲು ನಮಗೆ ವಾಪಾಸ್ ಕೊಡಿ, ಬರಗಾಲಕ್ಕೆ ನಮ್ಮ ಪಾಲಿನ ಪರಿಹಾರದ ಹಣ ಕೊಡಿ ಎಂದು ನಾವು ಪತ್ರ ಬರೆದು ಹೋರಾಟ ಮಾಡಿದರೂ ಮೋದಿ ಸರ್ಕಾರ ನಮ್ಮ ಪಾಲಿನ ನಯಾಪೈಸೆ ಕೊಡಲಿಲ್ಲ. ಇಂಥವರಿಗೆ ಮತ ಹಾಕಿದ್ರೆ ಆ ಮತಕ್ಕೆ ಗೌರವ ಬರುತ್ತದೆಯಾ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಚಾಮರಾಜನಗರ ಲೋಕಸಭಾ ಕ್ಷೇತ್ರದ ಹೆಚ್.ಡಿ.ಕೋಟೆಯಲ್ಲಿ ನಡೆದ ಜನಧ್ವನಿ–2ರ ಬೃಹತ್ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು,  ಪ್ರಧಾನಿ ನರೇಂದ್ರ ಮೋದಿ (Narendra Modi)  ಅವರು ರಾಜ್ಯಕ್ಕೆ ಮಾಡಿದ ಅನ್ಯಾಯ ಸರಿ, ಬರಗಾಲ ಬಂದ್ರೂ ಮೋದಿ ಅನುದಾನ ಕೊಡದೇ ಇದ್ದದ್ದೇ ಸರಿ, ಮೋದಿಯವರು ಪೆಟ್ರೋಲ್–ಡೀಸೆಲ್–ಗ್ಯಾಸ್–ರಸಗೊಬ್ಬರ ಬೆಲೆಯನ್ನು ಹೆಚ್ಚಿಸಿದ್ದೇ ಸರಿ ಎಂದು ಬಿಜೆಪಿ(Bharatiya Janata Party)  ನಾಯಕರು ಕೋಲೆ ಬಸವನಂತೆ ತಲೆ ತೂಗುತ್ತಿದ್ದಾರೆ. ಇಂಥವರಿಗೆ ನಿಮ್ಮ ಮತ ಹೋಗಬೇಕಾ?  ಎಂದು ಪ್ರಶ್ನೆ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಕೊಟ್ಟ ಮಾತಿನಂತೆ ಒಂದೇ ಒಂದನ್ನೂ ಜಾರಿ ಮಾಡಿಲ್ಲ. ಬದಲಿಗೆ ಜನರ ಮುಂದೆ ಆಶ್ವಾಸನೆ ಕೊಟ್ಟು ಅದಕ್ಕೆ ಉಲ್ಟಾ ನಡೆದುಕೊಂಡಿದ್ದಾರೆ.  ವಿದೇಶದಿಂದ ಕಪ್ಪು ಹಣ ತರಲಿಲ್ಲ, ಭಾರತೀಯರ ಖಾತೆಗೆ 15 ಲಕ್ಷ ಹಾಕಲಿಲ್ಲ, ರೈತರ ಆದಾಯ ದುಪ್ಪಟ್ಟು ಮಾಡಲಿಲ್ಲ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಅಂದ್ರು. ಆದರೆ ಹೊಸ ಉದ್ಯೋಗ ಸೃಷ್ಟಿ ಮಾಡೋದಿರಲಿ, ಇರೋ ಕೆಲಸಗಳೂ ಬಂದ್ ಆದ್ವು. ಇಂಥವರಿಗೆ ನಿಮ್ಮ ಕೇಳುವ ಮುಖ ಇದೆಯಾ? ಎಂದು ಪ್ರಶ್ನಿಸಿದರು.

ನಮ್ಮ ಕಾಂಗ್ರೆಸ್ ಸರ್ಕಾರ ನಿಮಗೆ ಕೊಟ್ಟ ಮಾತು ಈಡೇರಿಸಿ ನಿಮ್ಮ ಮತಕ್ಕೆ ಗೌರವ ತಂದಿದೆ. ನಿಮ್ಮ ಮತಗಳ ತೂಕ ಹೆಚ್ಚಿಸಿದ್ದೇವೆ. ಇದಕ್ಕಾಗಿ ನೀವು ನಮ್ಮ ಜೊತೆ ನಿಲ್ಲಬೇಕು ಎಂದು ಸಿಎಂ ಕರೆ ನೀಡಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ