ಮಲಗಿದ್ದ ಪತ್ನಿಯನ್ನು ಕೊಂದು: ಮಲಗಿದ್ದಲ್ಲೇ ಸತ್ತಿದ್ದಾಳೆಂದು ನಂಬಿಸಲು ಯತ್ನಿಸಿದ ಪ್ರೊಫೆಸರ್! - Mahanayaka
2:18 AM Tuesday 27 - February 2024

ಮಲಗಿದ್ದ ಪತ್ನಿಯನ್ನು ಕೊಂದು: ಮಲಗಿದ್ದಲ್ಲೇ ಸತ್ತಿದ್ದಾಳೆಂದು ನಂಬಿಸಲು ಯತ್ನಿಸಿದ ಪ್ರೊಫೆಸರ್!

mandya
16/11/2023

ಮಂಡ್ಯ: ಪತ್ನಿ ಮಲಗಿದ್ದ ವೇಳೆ ದಿಂಬು ಹಾಗೂ ಬೆಡ್ ಶೀಟ್ ನಿಂದ ಉಸಿರುಗಟ್ಟಿಸಿ ಕೊಂದ ಪತಿಯೋರ್ವ ಬಳಿಕ ಪತ್ನಿ ಸಹಜವಾಗಿ ಸಾವನ್ನಪ್ಪಿದ್ದಾಳೆ ಎಂದು ನಾಟಕವಾಡಿದ ಘಟನೆಯೊಂದು ಬೆಳಕಿಗೆ ಬಂದಿದೆ.

ಇಲ್ಲಿನ ವಿವಿ ನಗರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ವೃತ್ತಿಯಲ್ಲಿ ಪ್ರೊಫೆಸರ್ ಆಗಿರುವ ಟಿ.ಎನ್. ಸೋಮಶೇಖರ್(41) ಹಣದ ದಾಹಕ್ಕೆ ಬಿದ್ದು ತನ್ನ ಪತ್ನಿ ಎಸ್.ಶೃತಿ(32) ಎಂಬವರನ್ನು ಅಮಾನುಷವಾಗಿ ಕೊಂದಿದ್ದಾನೆ.

ಶೃತಿಯ ತಂದೆ ತಾಯಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಆಕೆಯ ತಂಗಿ ಅಪಘಾತದಲ್ಲಿ ಮೃತಪಟ್ಟಿದ್ದಳು. ಹೀಗಾಗಿ ಅವರ ಇಡೀ ಕುಟುಂಬದ ಆಸ್ತಿ 10 ಕೋಟಿ ರೂ. ಶೃತಿ ಹೆಸರಿಗೆ ಬಂದಿತ್ತು. ಇವರಿಗೆ ಮೈಸೂರನ ಪ್ರಮುಖ ನಗರಗಳಲ್ಲಿ ಕಮರ್ಷಿಯಲ್ ಕಟ್ಟಡಗಳು ಮನೆ ಹಾಗೂ ಸೈಟ್ ಗಳಿದ್ದವು. ಈ ಆಸ್ತಿಯನ್ನು ಮಾರಾಟ ಮಾಡಿ ಬೇರೆ ಸ್ಥಳಗಳಲ್ಲಿ ಆಸ್ತಿ ಮಾಡಬೇಕು ಎಂದು ಸೋಮಶೇಖರ್ ಪತ್ನಿಯನ್ನು ಪೀಡಿಸುತ್ತಿದ್ದ. ಆದ್ರೆ ಇದಕ್ಕೆ ಆಕೆ ಒಪ್ಪದ ಕಾರಣ, ಶನಿವಾರ ಆಕೆ ಮಲಗಿದ್ದ ವೇಳೆ ಮಾನವೀಯತೆ ಮರೆತು ಉಸಿರುಗಟ್ಟಿಸಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಪತ್ನಿಯನ್ನು ಹತ್ಯೆ ಮಾಡಿದ ಬಳಿಕ, ಆಕೆ ಮಲಗಿದ್ದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಸೋಮಶೇಖರ್ ಮೃತ ಶೃತಿಯ ಚಿಕ್ಕಪ್ಪನಿಗೆ ಕರೆ ಮಾಡಿದ್ದಾನೆ. ಆದರೆ, ಇದರಿಂದ ಅನುಮಾನಗೊಂಡ ಶೃತಿ ಚಿಕ್ಕಪ್ಪ ಕುಮಾರಸ್ವಾಮಿ ಅವರು ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮರಣೋತ್ತರ ಪರೀಕ್ಷೆ ವೇಳೆ ಶೃತಿಯದ್ದು ಸಹಜ ಸಾವಲ್ಲ, ಬಲವಂತವಾಗಿ ಉಸಿರುಗಟ್ಟಿಸಿದ ಪರಿಣಾಮ ಆಕೆ ಮೃತಪಟ್ಟಿದ್ದಾಳೆ ಎನ್ನುವ ಮಾಹಿತಿ ಹೊರಬಿದ್ದಿದೆ.

ಇತ್ತೀಚಿನ ಸುದ್ದಿ