ಕೋಲ್ಕತ್ತಾದಲ್ಲಿ ರೇಪ್&ಮರ್ಡರನ್ನು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನ: ಸಿಬಿಐನಿಂದ ಮಹತ್ವದ ಆರೋಪ
ಕೋಲ್ಕತ್ತಾ ಆರ್.ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್, ಟ್ರೈನಿ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ್ದರು. ಅದಕ್ಕಾಗಿ ಸಾಕ್ಷಿ ನಾಶ ಮಾಡಲು ಕೂಡ ಯತ್ನಿಸಿದ್ದರು ಎಂದು ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿದ ತನ್ನ ರಿಮ್ಯಾಂಡ್ ಕಾಪಿಯಲ್ಲಿ ಉಲ್ಲೇಖಿಸಿದೆ.
ಆರ್.ಜಿ ಕರ್ ಆಸ್ಪತ್ರೆಯಲ್ಲಿ ನಡೆದ ಹಣಕಾಸು ಅವ್ಯವಹಾರ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಸಾಕ್ಷ್ಯಾಧಾರ ನಾಶ ಆರೋಪದ ಮೇಲೆ ಸಂದೀಪ್ ಘೋಷ್ ರನ್ನ ಸಿಬಿಐ ಬಂಧಿಸಿದೆ. ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಿದ್ದಕ್ಕಾಗಿ ಪೊಲೀಸ್ ಅಧಿಕಾರಿ ಅಭಿಜಿತ್ ಮೊಂಡಲ್ ಅವರನ್ನೂ ಕೂಡ ಅರೆಸ್ಟ್ ಮಾಡಲಾಗಿದೆ.
ಈ ಕೇಸ್‌ನ ಕುರಿತು ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿರುವ ರಿಮ್ಯಾಂಡ್ ಕಾಪಿಯಲ್ಲಿ ಡಾ. ಸಂದೀಪ್ ಘೋಷ್ ಆಗಸ್ಟ್ 9ರಂದು ಬೆಳಗ್ಗೆ 9:58ರ ವೇಳೆಗೆ ನಡೆದ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರೂ ತಕ್ಷಣ ಆಸ್ಪತ್ರೆ ತಲುಪಲಿಲ್ಲ. ಪೊಲೀಸರಿಗೆ ದೂರು ಸಹ ದಾಖಲಿಸಲಿಲ್ಲ. ಸಂತ್ರಸ್ತೆಯ ದೇಹದ ಮೇಲೆ ಗಾಯದ ಗುರುತುಗಳಿದ್ದರೂ ಅದನ್ನು ಆತ್ಮಹತ್ಯೆ ಅಂತ ಬಿಂಬಿಸಲು ಹೊರಟಿದ್ದರು. ಆಸ್ಪತ್ರೆಯಿಂದ ಸಂತ್ರಸ್ತೆ ಪೋಷಕರಿಗೆ ದೂರವಾಣಿ ಕರೆ ಮಾಡಿ ಆತ್ಮಹತ್ಯೆ ಅಂತ ತಿಳಿಸಿದ್ದರು ಎಂದು ತಿಳಿಸಿದೆ.
ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯಾದ ನಂತರ ಘೋಷ್ ಪೊಲೀಸ್ ಅಧಿಕಾರಿ ಮತ್ತು ವಕೀಲರೊಂದಿಗೆ ಸಂಪರ್ಕದಲ್ಲಿದ್ದರು. ಸಂತ್ರಸ್ತೆ ಪೋಷಕರು ಆಸ್ಪತ್ರೆಗೆ ಬಂದಾಗಲೂ ಅವರನ್ನು ಭೇಟಿಯಾಗಲಿಲ್ಲ. ಘಟನೆ ನಂತರ ಮುಂದಿನ ವೈದ್ಯಕೀಯ ಪ್ರಕ್ರಿಯೆಗಳ ಬಗ್ಗೆ ಗಮನ ಹರಿಸಲಿಲ್ಲ. ಮೃತದೇಹವನ್ನು ತಕ್ಷಣವೇ ಶವಾಗಾರಕ್ಕೆ ಕಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದರು ಎಂದು ಸಿಬಿಐ ಹೇಳಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth