ಕೋಟಿ ಕಂಠ ಗಾಯನ ಕನ್ನಡಿಗರ ಸ್ವಾಭಿಮಾನ  - Mahanayaka
10:22 PM Sunday 15 - December 2024

ಕೋಟಿ ಕಂಠ ಗಾಯನ ಕನ್ನಡಿಗರ ಸ್ವಾಭಿಮಾನ 

koti kantha
31/10/2022

  • ಧಮ್ಮಪ್ರಿಯಾ, ಬೆಂಗಳೂರು 

ಕರ್ನಾಟಕ ಸರ್ಕಾರವು  67 ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ಕೋಟಿ ಕಂಠ ಗಾಯನ ಕಾರ್ಯಕ್ರಮವು ಹೆಮ್ಮೆಯ ಕನ್ನಡಿಗರಿಗೆ  ವಿನೂತನವಾಗಿದ್ದು, ಕನ್ನಡಿಗರ ಸ್ವಾಭಿಮಾನಕ್ಕೆ ಒಂದು ಮೈಲುಗಲ್ಲು ಎನ್ನಬಹುದು. ಇಂತಹ  “ಅಭಿಯಾನ ಕೇವಲ ನವೆಂಬರ್ ತಿಂಗಳ ಯಶಸ್ಸಾಗದೇ ಅದೊಂದು ಯುಗದ ಯಶಸ್ಸಾಗಬೇಕು “ಎಂಬ ಆಶಯದಿಂದ ಕೂಡಿದೆ.  ಅಂತಹ ಕಾರ್ಯಕ್ರಮವನ್ನು  ಕೈಗೊಂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಾಡಿನ ಜವಾಬ್ದಾರಿಯುತ ನಾಯಕರಿಗೆ ಅಭಿನಂದನೆಗಳನ್ನು ಕನ್ನಡಿಗರ ಪರವಾಗಿ ಅರ್ಪಿಸುತ್ತಿದ್ದೇನೆ. ಇಂತಹ ಹಲವಾರು ಕಾರ್ಯಕ್ರಮಗಳು ಹಮ್ಮೆಯ ಕನ್ನಡಿಗರಿಗೆ ಸ್ವಾಗತಾರ್ಹ.

ಕರುನಾಡು , ಕಮ್ಮಿತ್ತು ನಾಡು,  ಕಪ್ಪುಮಣ್ಣಿನ ನಾಡು,  ಸುವಾಸನೆಯ ನಾಡು,  ಶ್ರೀಗಂಧದ ನಾಡು, ಶಿಲ್ಪಕಲೆಗಳ ಬೀಡು,  ದೇವಾಲಯಗಳ ಸಾಂಸ್ಕೃತಿಕ  ನಾಡು, ಕಾರವಾರದ ಸೀಗಡಿ,  ಮಲೆನಾಡ ಗಿರಿವನಗಳ  ಸಿರಿ ಸಂಪಿಗೆಯ ಮುಡಿ ,  ಕೋಲಾರದ ಚಿನ್ನದ ಗಡಿಯೇ ನಮ್ಮ ಕನ್ನಡ ನಾಡು.  “ಉದಯವಾಗಲಿ ನಮ್ಮ ಚಲುವ  ಕನ್ನಡ ನಾಡು” ಎಂಬ ಹುಯಿಲುಗೋಳ ನಾರಾಯಣ ರಾಯರ ಕಾವ್ಯದ ಸಾಲುಗಳು  ಹಚ್ಚ ಹಸಿರಿನಂತೆ ಸದಾ ಕನ್ನಡಿಗರ ಕಿವಿಯೊಳಗೆ ಮೊಳಗುತ್ತಿರುತ್ತದೆ. ಇಂತಹ ನಾಡಿಗೆ ಸಿರಿ ಸಮೃದ್ಧಿಯಾಗಿರುವುದು  ಕನ್ನಡ ಭಾಷೆಯ ವಿಶಿಷ್ಟತೆಯಿದೆ.

ಕನ್ನಡ ಭಾಷೆಗೆ ಸುಮಾರು 2500 ವರ್ಷಗಳಿಗೂ ಹೆಚ್ಚು ಇತಿಹಾಸವಿದೆ.  ಹಲ್ಮಿಡಿ ಶಾಸನದಿಂದ ಪ್ರಾರಂಭಗೊಂಡು ಪಂಪನ ಹಾದಿಯಾಗಿ ಚಲಿಸಿ ಇಂದಿನ ನವ ತರುಣರವರೆವಿಗೂ  *ಜೀವನದಿ* ಯಂತೆ ಹರಿದು ಬರುತ್ತಿರುವ ಭಾಷೆಯೇ ನಮ್ಮ ಹೆಮ್ಮೆಯ ಕನ್ನಡ ಭಾಷೆ. ನಮ್ಮ ಭಾಷೆಯು ಎಷ್ಟು ಶ್ರೀಮಂತಿಕೆಯಿಂದ ಕೂಡಿದೆಯೆಂದರೆ ಕನ್ನಡ ಕವಿಗಳು ಬಹಳ ಸೊಗಸಾಗಿ ಕಾವ್ಯ ಕವನಗಳನ್ನು ಬರೆಯುತ್ತಾರೆ ಎಂದು ಹೇಳುವಾಗ, ಕನ್ನಡ ಭಾಷೆಯ ಬಗ್ಗೆ ಅಪಾರ ಪ್ರೀತಿ ತುಂಬಿದ ಕವಿಯು ಹೀಗೆ ಹೇಳುತ್ತಾರೆ “ಸೊಗಸಾಗಿ ಕವಿತೆಗಳನ್ನು, ಕಾವ್ಯಗಳನ್ನು ವರ್ಣನಾತ್ಮಕವಾಗಿ ಬರೆಯುವುದು ಕವಿಯೇ ಆದರೂ ಹಾಗೆ ಬರೆಸಿಕೊಂಡು ಮುಂದುವರೆಯುವ ಶಕ್ತಿ, ತಾಕತ್ತು, ಗಂಭೀರತೆ ನಮ್ಮ ಕನ್ನಡ ಭಾಷೆಗೆ ಮಾತ್ರ ಇದೆ”. ಅದಕ್ಕೆ ನನ್ನ ಭಾಷೆಯನ್ನು  ಶ್ರೀಮಂತ ಭಾಷೆ ಎಂದು ಹೇಳುತ್ತಾರೆ.

ಕನ್ನಡದ ಬಗ್ಗೆ  ಅಪಾರವಾದಂತಹ ವ್ಯಾಮೋಹವಿದ್ದ ಕವಿ ಜಿ ಪಿ ರಾಜರತ್ನ0 ರವರ ರತ್ನನ ಪದಗಳೆಂದೇ ಪ್ರಸಿದ್ದಿ ಪಡೆದಿರುವ

ನರ್ಕಕ್ಕಿಳಿಸಿ ನಾಲಿಗೆ ಸೀಳಿಸಿ 
ಬಾಯನ್ ಹೊಲಿಸಾಕಿದ್ರು 
ಮೂಗಲ್ ಕನ್ನಡ್ ಪದವಾಡ್ತೀನಿ 
ನನ್ ಮನಸ್ ನೀ ಕಾಣೆ 

ಯಂಡ ಹೋಗ್ಲಿ ಹೆಂಡ್ತಿ ಹೋಗ್ಲಿ 
ಎಲ್ಲಾ ಕೊಚ್ಕೊಂಡ್ ಹೋಗ್ಲಿ
ಪರಪಂಚ್ ಇರೋವರ್ಗು
ಕನ್ನಡ ಪದಗಳ್ ನುಗ್ಲಿ

 ನಮ್ಮ ಕನ್ನಡದ ಬರಹಗಾರರಿಗೆ, ಕವಿಗಳಿಗೆ ಭಾಷೆಯ ಬಗ್ಗೆ ಎಷ್ಟು ಅಭಿಮಾನವಿತ್ತು ಎಂಬುದು ಈ ಪದ್ಯದ ಸಾಲುಗಳಿಂದ ತಿಳಿಯಬಹುದು.

ಕನ್ನಡ ನಾಡು ಶಿಲ್ಪ ಕಲೆಗಳ ಬೀಡು ಬೇಲೂರು, ಹಳೇಬೀಡು, ಕಾರ್ಕಳ,  ಐಹೊಳೆ, ಬಾದಾಮಿ, ಪಟ್ಟದಕಲ್ಲಿ ಹೀಗೆ ಹಲವಾರು ದೇವಾಲಯಗಳನ್ನು ಒಳಗೊಂಡ  ಶಿಲ್ಪಿ ಕಲೆಗಳ ತವರು ಬೀಡು.  ಪಂಪ ರನ್ನ ಜನ್ನ ಹರಿಹರ ರಾಘವಾಂಕ, ಕುಮಾರವ್ಯಾಸ, ಮುದ್ದಣ್ಣ  ಕುವೆಂಪು, ಬೇಂದ್ರೆ, ಕಾರಂತ, ಮಾಸ್ತಿ ಹೀಗೆ ಹಲವಾರು ಮಹನೀಯರುಗಳ ತಮ್ಮ ಅಂತರಾಳದ ಆಲೋಚನೆಗಳನ್ನು ಅಭಿವ್ಯಕ್ತಗೊಳಿಸಲು ಶಕ್ತಿ ನೀಡಿದ್ದೆ ನಮ್ಮ ನಾಡು, ನಮ್ಮ ಕನ್ನಡ ಭಾಷೆ ಅದಕ್ಕೆ ಇಂಪು ಕೊಟ್ಟಿತು ಎಂದರೆ ತಪ್ಪಾಗಲಾರದು.

ಕಥೆ ಕಾದಂಬರಿ ಕವನ ತ್ರಿಪದಿ ರಗಳೆ ಜಾನಪದ  ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳು, ನಾಡಿನ ವರ್ಣನೆಗೆ ಪ್ರೋತಾಹಿಸಿದ ಹಲವಾರು ರಾಜಮನೆತನಗಳ ಆಡಳಿತದ ವೈಖರಿಯನ್ನು ವೈಭವೀಕರಿಸಿ ಹಾಡಿ ಹೊಗಳಿದ ನಾಡು ನಮ್ಮ ಕನ್ನಡ ನಾಡು. ಗಂಗ ಕದಂಬ ಚಾಳುಕ್ಯ ಹೊಯ್ಸಳರು ಆಳಿದ ನೆಲೆಬೀಡು. 12 ನೇ ಶತಮಾನದಲ್ಲಿ ಬಸವ ಶರಣರಾದಿಯಾಗಿ ಸಮಾಜದ ಅಂಧಕಾರವನ್ನು ತೊರೆಯಲು ಸೃಷ್ಠಿಸಿದ  ವಿಶಿಷ್ಟ  ಸಾಹಿತ್ಯ ಪ್ರಕಾರವೇ ವಚನ ಸಾಹಿತ್ಯವಾಯಿತು. ಇಂತಹ ಈ ಸಾಹಿತ್ಯ ಪ್ರಕಾರವು ಬೇರೆ ಭಾಷೆಯ ಸಾಹಿತ್ಯಗಳಲ್ಲಿ  ಕಾಣಲು ಸಾಧ್ಯವೇ ಇಲ್ಲವಾಯಿತು. ಅಂತಹ ಶಕ್ತಿ ಸಾಮರ್ಥ್ಯ ನಮ್ಮ ಕನ್ನಡ ನುಡಿಗೆ, ನಾಡಿಗೆ ಬಂದೊದಗಿರುವುದು ನಾಡಿನ ಪುಣ್ಯವೆಂದೇ ಭಾವಿಸಬಹುದು.

ಕನ್ನಡ ಸಾಹಿತ್ಯ ಮತ್ತು ಭಾಷೆಗೆ ಇರುವ ಶಕ್ತಿ ಮತ್ತು ವಿಶಿಷ್ಟತೆಯಿಂದ ಅದರ ಸಮೃದ್ಧತೆಯಿಂದ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ಹಾಗೆಯೇ ಈ ನಾಡಿಗೆ ಮೂರೂ ಹೆಮ್ಮೆಯ ರಾಷ್ಟ್ರಕವಿಗಳನ್ನು ನೀಡಿದ್ದು ನಮ್ಮ ಕನ್ನಡ ನಾಡು. ಕನ್ನಡ ಭಾಷೆಯನ್ನು  ಅದರ ಅಭಿವೃದ್ಧಿಯನ್ನು ನಾಡಿನ ಜೀವನದಿ ಕಾವೇರಿಗೆ ಹೋಲಿಸುತ್ತಾ *ಕನ್ನಡ ಎನುವುದು ಜೀವನದಿ* ಎಂದು ಕವಿಗಳು ಹಾಡಿ ಹೊಗಳಿರುವುದನ್ನು ಕಾಣಬಹುದು.  ಹೀಗೆ ಭಾಷೆ ಮತ್ತು ನಾಡಿನ ಬಗ್ಗೆ ಹೇಳುತ್ತಾ ಹೊರಟರೆ ಪ್ರತಿಯೊಬ್ಬ ಕನ್ನಡಿಗರ ಲೇಖನಿಗೆ ವಿರಾಮವೇ ಇಲ್ಲವಾಗುತ್ತದೆ. ಅಷ್ಟೊಂದು ಶಕ್ತಿ, ಸಮೃದ್ಧತೆ , ಸೌಂದರ್ಯತೆ, ಮನೋಜ್ಞತೆಯಿಂದ ಕೂಡಿದೆ  ನಮ್ಮ ನಾಡು, ನುಡಿ, ಭಾಷೆ.

ಆದರೆ ಕನ್ನಡಿಗರು ಮಾತ್ರ ತುಂಬಾ ಸಹೃದಯಿಗಳಾಗಿ ವರ್ತಿಸುತ್ತಾ ಅನ್ಯ ಭಾಷಿಗರ ಅವಸರಗಳಿಗೆ ತಾರಾತುರಿಗಳಿಗೆ ಅವರ ಅಗತ್ಯತೆಗಳಿಗೆ ಹೆಚ್ಚು ಒತ್ತು ಕೊಡುತ್ತಿದ್ದೇವೇನೋ  ಅನಿಸುತ್ತಿದೆ.ಕನ್ನಡೇತರರು ಸುಮಾರು ವರ್ಷಗಳಿಂದ ಈ ನಾಡಿನ ಬೆಂಗಳೂರಿನಂತಹ ಮಹಾ ನಗರಗಳಲ್ಲಿದ್ದರು  ಇವರಿಗೆ ಬೇಕಾಗಿರುವ ಎಲ್ಲಾ ಸವಲತ್ತುಗಳನ್ನು ಈ ನಾಡು ನೀಡಿದೆ.   ಅದೆಲ್ಲವನ್ನು ಬಹಳ ಖುಷಿಯಾಗಿ ಅನುಭವಿಸುತ್ತಿದ್ದಾರೆ.  ಕಾವೇರಿ ನೀರು,  ಶ್ರೀಗಂಧದ ಕಂಪು, ಹಕ್ಕಿಪಿಕ್ಕಿಗಳ ಇಂಪು, ಮಲೆನಾಡ ಮೈಸಿರಿ, ಜೋಗ ಜಲಪಾತದ ಪರಿ ಇವೆಲ್ಲವೂ ಇವರಿಗೆ ಖಂಡಿತವಾಗಿಯೂ ಬೇಕಾಗಿವೆ.ಆದರೆ ಭಾಷೆಯ ವಿಚಾರ ಬಂದಾಗ  ಕನ್ನಡ ಮಾತ್ರ ಬೇಡವಾಗಿದೆ.  ಕನ್ನಡ ಕಲಿಯುವ ಒಂದು ಸಣ್ಣ ಪ್ರಯತ್ನವನ್ನು ಮಾಡದೆ ಭಾಷೆಯ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರುತ್ತಿರುವವರಿಗೆ  ಕನ್ನಡಿಗರು  ಕನ್ನಡ ಕಲಿಸಲು ಮುಂದಾಗಬೇಕಾಗಿದೆ.

* ನಮ್ಮ ನಾಡಿಗೆ  ಬಂದು ಕರ್ತವ್ಯನಿರತರಾಗಿರುವ ಕನ್ನಡೇತರರಿಗೆ  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ “ಕನ್ನಡ ಕಲಿ” ಎನ್ನುವ ಕಾರ್ಯಾಗಾರವನ್ನು ಹಮ್ಮಿಕೊಳ್ಳಬಹುದು

* ಸಾರ್ವಜನಿಕ ಮತ್ತು ಖಾಸಗೀ ವಲಯದಲ್ಲಿ ಕರ್ತವ್ಯ ನಿರ್ವಹಿಸುವ ಕನ್ನಡೇತರ  ನೌಕರರು ಕಡಾಯವಾಗಿ ಈ ತರಬೇತಿಯಲ್ಲಿ ಪಾಲ್ಗೊಂಡು ,ಅದಕ್ಕೆ ಪೂರಕವಾಗಿ ಪ್ರಮಾಣ ಪತ್ರವನ್ನು ಸ್ವೀಕರಿಸಿದರೆ ಬಹಳ ಒಳ್ಳೆಯದು.

* ಪ್ರತೀ ಸರ್ಕಾರಿ / ಖಾಸಗೀ ಸಂಸ್ಥೆಗಳು  ತಮ್ಮ ಪತ್ರವ್ಯವಹಾರವನ್ನು ಕನ್ನಡದಲ್ಲಿಯೇ ವ್ಯವಹರಿಸಿದರೆ ತುಂಬಾನೇ ಒಳ್ಳೆಯದು .  ಅದಕ್ಕಾಗಿ  ಒಂದು ವಿಭಾಗವನ್ನು ತೆರೆದರೆ ಬಹಳ ಉಪಯುಕ್ತವಾಗುತ್ತದೆ.

* ಡಾ.ಪುನೀತ್ ರಾಜಕುಮಾರ್  ಆಶಯದಂತೆ  “ಕನ್ನಡ ಕಲಿ” ಎನ್ನುವ  ಅಂತರ್ಜಾಲ ತಾಣವನ್ನು ಸರ್ಕಾರ ಬಿಡುಗಡೆ ಮಾಡಿರೆ ಬಹಳ ಉಪಯುಕ್ತವಾಗುತ್ತದೆ.

* ಕನ್ನಡೇತರರ ಮಕ್ಕಳು ನಮ್ಮ ನಾಡಿನಲ್ಲಿ ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ  ಕನ್ನಡಿಗರಂತೆಯೇ  ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ  ಕನ್ನಡವನ್ನು 10 ನೇ ತರಗತಿಯವರೆವಿಗೂ ಕಡ್ಡಾಯವಾಗಿ ವ್ಯಾಸಂಗ ಮಾಡಿದ್ದರೆ ಮಾತ್ರ  ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕುವುದನ್ನು ಕಡ್ಡಾಯಗೊಳಿಸಬೇಕಾಗಿದೆ .

* ಆಧುನಿಕ  ನಗರಗಳಲ್ಲಿನ  ಅಂಗಡಿ ಮಳಿಗೆಗಳ ನಾಮಫಲಕಗಳು   ಕಡ್ಡಾಯವಾಗಿ ಕನ್ನಡಲ್ಲಿರಬೇಕೇ ಹೊರತು ಬೇರೆ ಯಾವ ಭಾಷೆಯು ಇರಬಾರದೆಂದು ಕಡ್ಡಾಯಗೊಳಿಸಿದರೆ  ಸಂತೋಷವಾಗುತ್ತದೆ.  ನಾಮಫಲಕಗಳಿಗೆ ಪರವಾನಗಿ ನೀಡಲು ಸರ್ಕಾರವು ಒಂದು ವಿಭಾಗವನ್ನು ತೆರೆದರೆ ಅನುಕೂಲವಾಗುತ್ತದೆ.

* ದಿನನಿತ್ಯ ಓದುವ ದಿನಪತ್ರಿಕೆಗಳು ಪ್ರತೀ ಕಛೇರಿಗಳಲ್ಲಿ ಕನ್ನಡ ಭಾಷಾ ಪತ್ರಿಕೆಗಳಾದರೆ,ಇದು ಕನ್ನಡ ಕಲಿಯುವವರಿಗೆ ನಾವು ಪ್ರೋತ್ಸಹಿಸಿದಂತಾಗುತ್ತದೆ.

* ಇಂಗ್ಲೀಷ್ ಮಾಧ್ಯಮ  ಶಾಲೆಗಳಲ್ಲಿ  ಪ್ರಾರ್ಥನ ಗೀತೆಯಾಗಿ ನಾಡಗೀತೆಯನ್ನು ಹಾಡುವಂತೆ ಕಡ್ಡಾಯಗೊಳಿಸಬೇಕಾಗಿದೆ. (ಎಷ್ಟೋ ಶಾಲೆಗಳಲ್ಲಿ ಇವತ್ತಿಗೂ ಈ ಸಮಸ್ಯೆ ಕಾಡುತ್ತಿದೆ)

* ಶಾಲೆಯಲ್ಲಿನ ಪ್ರತೀ ತರಗತಿಗಳ  ಕೊಠಡಿಗಳ ಸಂಖ್ಯೆಯ ಬದಲು  ಬಾಗಿಲುಗಳಲ್ಲಿ  ಕನ್ನಡದ ಸಾಧಕರ, ಕವಿಗಳ,  ಭಾವಚಿತ್ರ ಹಾಗೂ ಅವರ  ಹೆಸರನ್ನಿಟ್ಟರೆ ಬಹಳ ಒಳ್ಳೆಯದು,

ಕನ್ನಡ ಎನ್ನುವುದು  ಕೇವಲ ನವೆಂಬರ್ ತಿಂಗಳಲ್ಲಿ ಕನ್ನಡಿಗರನ್ನು  ಎಚ್ಚರಿಸುವ  ಭಾಷೆಯಲ್ಲಾ, ಅದೊಂದು  ದಿನನಿತ್ಯ  ಬಳಕೆಯಾಗುವ, ಹೊಸ ಹೊಸ  ಆಯಾಮಗಳನ್ನು ಸೃಷ್ಟಿಸುವ, ವಿವಿಧ ಸಂಶೋಧನೆಗೆ ಮಹತ್ವ ನೀಡುವ, ಯುವ ಪೀಳಿಗೆಗೆ  ಭಾವನೆಗಳನ್ನು ಕಟ್ಟಿಕೊಡುವ  ಉತ್ತಮ ಭಾವಕೋಶವುಳ್ಳ  ಭಾಷೆಯಾಗಿ ಕಡಲಿನಿಂದಾಚೆಗೂ  ಪಸರಿಸಬೇಕು,  ದಿನನಿತ್ಯ  ಹಚ್ಚ ಹಸುರಿನ ಮರಗಳಂತೆ  ಭಾಷೆಯು ಕಂಗೊಳಿಸುತ್ತಿರಬೇಕು.

ಕನ್ನಡ ಎನುವುದು ಜೀವನದಿ 
ಗಿರಿವನ ಸಂಪದ ಎರಡು ಬದಿ
ಪಂಪಮಹಾಚಲ ಜೋಡಿ ಶಿಖರಗಳು
ರನ್ನನ ಉನ್ನತ ಧವಳಗಿರಿ,  
ಶಿವಶರಣರ ವಿಸ್ತಾರದ ಬಯಲು  
ಹರಿಹರನ ದುಮ್ಮಿಕ್ಕುವ  ಝರಿ  
ಸುಳಿಮಿಂಚಿನ ಸೆಳೆ ಮುಂಗಾರಿನ ಮಳೆ  ಕುಮಾರವ್ಯಾಸನ ರಸಧಾರೆ  

ಹೀಗೆ ಹೇಳುವ ಕವಿಯ ಸಾಲುಗಳು ಸದಾ ಹಚ್ಚ ಹಸಿರಾಗಿರುತ್ತವೆ. ಇವಗಳನ್ನು ಓದಿದ ಪ್ರತಿಯೊಬ್ಬ ಕನ್ನಡಿಗರ ಮೈನವಿರೇಳಿಸುತ್ತದೆ.  ಕನ್ನಡಿಗರು ಕುವೆಂಪು ಹೇಳಿದ ಹಾಗೆ  ಕನ್ನಡದ ಕ್ರಾಂತಿಯ ಕಹಳೆಯನ್ನು ಮುಳುಗಿಸುತ್ತಿರಬೇಕು  “ಬಾರಿಸು ಕನ್ನಡ ಡಿಂಡಿಮವ” ಎನ್ನುವ ಕವಿವಾಣಿಯು  ನಮ್ಮನ್ನು ಬಡಿದೆಬ್ಬಿಸಬೇಕು.  ಆಗ ಮಾತ್ರ ಕನ್ನಡ ನಾಡು ನುಡಿ  ಎನ್ನುವ ಅಭಿಮಾನ ಬೆಳೆಯಲು ಮುಂದಾಗುತ್ತದೆ.

ಕನ್ನಡಕ್ಕಾಗಿ ಕೈ ಎತ್ತು  ನಿನ್ನ ಕೈ ಕಲ್ಪವೃಕ್ಷವಾಗುತ್ತದೆ 
ಕನ್ನಡವೇ ಸತ್ಯ ಕನ್ನಡವೇ ನಿತ್ಯ 
ಜೈ ಕನ್ನಡಾಂಬೆ


ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ