ವಿದ್ಯಾರ್ಥಿಗಳಿಗೆ ನಿಲ್ಲಿಸದೇ ಹೋದ ಕೆಎಸ್ಸಾರ್ಟಿಸಿ ಬಸ್ ನ್ನು ತಡೆದ ಸಚಿವ ಸುರೇಶ್ ಕುಮಾರ್ | ಆ ಬಳಿಕ ಏನು ನಡೆಯಿತು ಗೊತ್ತಾ? - Mahanayaka

ವಿದ್ಯಾರ್ಥಿಗಳಿಗೆ ನಿಲ್ಲಿಸದೇ ಹೋದ ಕೆಎಸ್ಸಾರ್ಟಿಸಿ ಬಸ್ ನ್ನು ತಡೆದ ಸಚಿವ ಸುರೇಶ್ ಕುಮಾರ್ | ಆ ಬಳಿಕ ಏನು ನಡೆಯಿತು ಗೊತ್ತಾ?

09/01/2021

ತುಮಕೂರು:  ವಿದ್ಯಾರ್ಥಿಗಳು ಬಸ್ ಗಾಗಿ ಕಾಯುತ್ತಿದ್ದರೆ, ಕೆಎಸ್ಸಾರ್ಟಿಸಿ ಬಸ್ ಚಾಲಕ ಮಾತ್ರ ಬಸ್ ನಿಲ್ಲಿಸದೇ ಉದ್ಧಟತನದಿಂದ ಮುಂದೆ ಸಾಗಿದ್ದಾನೆ. ಬಸ್ ನ ಹಿಂದೆ ಇದ್ದ ಶಿಕ್ಷಣ ಸಚಿವರು ಇದನ್ನು ಗಮನಿಸಿ ಬಸ್ ನ್ನು ಓವರ್ ಟೇಕ್ ಮಾಡಿ, ಬಸ್ ತಡೆದು ಬಸ್ ನ ಸಿಬ್ಬಂದಿಗೆ ರಸ್ತೆಯಲ್ಲಿಯೇ ಕ್ಲಾಸ್ ತೆಗೆದುಕೊಂಡರು.

ಬೆಂಗಳೂರಿನಿಂದ ಮಧುಗಿರಿಯತ್ತಾ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಬಸ್ ಚಾಲಕ ವಿದ್ಯಾರ್ಥಿಗಳಿಗೆ ಬಸ್ ನಿಲ್ಲಿಸದೇ ಮುಂದೆ ಸಾಗಿರುವುದನ್ನು ನೋಡಿದ ತಕ್ಷಣವೇ ತನ್ನ ಕಾರು ಚಾಲಕನಿಗೆ ಬಸ್ ನ್ನು ಓವರ್ ಟೇಕ್ ಮಾಡುವಂತೆ ಹೇಳಿದ್ದಾರೆ. ಬಳಿಕ ಬಸ್ ನಿಲ್ಲಿಸಿದ್ದಾರೆ.

ತಮ್ಮ ಕಾರಿನಿಂದ ಇಳಿದು ಬಸ್ ಬಳಿಗೆ ಬಂದ ಸಚಿವರು, “ಮಕ್ಕಳು  ಶಾಲೆಗೆ ತೆರಳಬೇಕು ಅಂತ ಬಸ್ ಗೆ ಕಾಯುತ್ತಿದ್ದರೆ, ನೀನು ಬಸ್ ನಿಲ್ಲಿಸದೇ ಹೋಗುತ್ತಿದ್ದೀಯಲ್ಲಾ?” ಎಂದು ಬಸ್ ಚಾಲಕನಿಗೆ ಕ್ಲಾಸ್ ತೆಗೆದುಕೊಂಡರು.

ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲೆಗೆ ತೆರಳದೇ ಇದ್ದರೆ, ತರಗತಿ ಪಾಠದಿಂದ ವಂಚಿತರಾಗುತ್ತಾರೆ. ಪರೀಕ್ಷೆಗೂ ತೊಂದರೆಯಾಗುತ್ತದೆ ಎಂಬುದು ನಿನಗೆ ತಿಳಿದಿಲ್ವಾ? ಎಂದ ಅವರು, ಹೀಗೆ ಮತ್ತೆ ಮಾಡಬೇಡ. ಮಕ್ಕಳು ಕೈ ಮಾಡಿದಾಗ ನಿಲ್ಲಿಸಿ, ಬಸ್ ನಲ್ಲಿ ಹತ್ತಿಸಿಕೊಂಡು ಹೋಗು ಎಂದು ಬುದ್ಧಿ ಹೇಳಿದರು.

ಸಚಿವರ ಈ ಕಾಳಜಿಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಸಂಶೆ ವ್ಯಕ್ತವಾಗಿದೆ. ಕೆಎಸ್ಸಾರ್ಟಿಸಿ ಬಸ್ ಚಾಲಕರ ಬಗ್ಗೆ ಈ ಹಿಂದಿನಿಂದಲೂ ಇಂತಹದ್ದೊಂದು ದೂರು ಇದೆ. ಕೊರೊನಾ ಹಿನ್ನೆಲೆಯಲ್ಲಿ ಬಸ್ ಖಾಲಿಯಾಗಿ ಹೋಗುತ್ತಿದ್ದರೂ ಸಿಬ್ಬಂದಿ ವಿದ್ಯಾರ್ಥಿಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ನಡುವೆ ಸ್ವತಃ ಶಿಕ್ಷಣ ಸಚಿವರ ಕೈಗೆ ಬಸ್ ಸಿಬ್ಬಂದಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಸಾರಿಗೆ ಸಚಿವರು ಇನ್ನಾದರೂ ಈ ಬಗ್ಗೆ ಎಚ್ಚರಿಕೆ ನೀಡಬೇಕು ಎನ್ನುವ ಆಗ್ರಹಗಳು ಕೇಳಿ ಬಂದಿವೆ.

ಇತ್ತೀಚಿನ ಸುದ್ದಿ