ಮೊಬೈಲ್ ಕದ್ದು ಮೊಬೈಲ್ ಮಾಲಕನ ಬಳಿಯೇ ಪಾಸ್ ವರ್ಡ್ ಕೇಳಿದ ಕಳ್ಳ!
ಬೆಳಗಾವಿ: ಮೊಬೈಲ್ ಕಳ್ಳತನ ಮಾಡಿದ ಕಳ್ಳ, ಪಾಸ್ ವರ್ಡ್ ನ್ನು ಮೊಬೈಲ್ ಮಾಲಕನಲ್ಲಿಯೇ ಕೇಳಿದ ಘಟನೆ ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿಯಲ್ಲಿ ನಡೆದಿದ್ದು, ಈ ಕಳ್ಳ ಪೆದ್ದನೋ ಅಥವಾ ಅತೀ ಬುದ್ಧಿವಂತನೋ ಎಂಬ ಬಗ್ಗೆ ಇದೀಗ ಸಾರ್ವಜನಿಕವಾಗಿ ಚರ್ಚೆಗೀಡಾಗಿದ್ದಾನೆ.
ಹಿರೇಬಾಗೇವಾಡಿ ಬಸವನಗರದ ನಾಗನಗೌಡ ಪಾಟೀಲ್ ಎಂಬವರ ಮನೆಗೆ ನುಗ್ಗಿದ್ದ ಕಳ್ಳ ಸುಮಾರು 15 ಸಾವಿರ ರೂಪಾಯಿ ಮೌಲ್ಯದ ಮೊಬೈಲ್ ಕಳವು ಮಾಡಿದ್ದ. ಮೊಬೈಲ್ ಕಳವು ಮಾಡಿರುವುದು ಅರಿವಿಗೆ ಬಂದಾಗ ಆತಂಕಗೊಂಡ ಮೊಬೈಲ್ ಮಾಲಕ ನಾಗನಗೌಟ ಪಾಟೀಲ್, ಮತ್ತೊಂದು ಮೊಬೈಲ್ ನಿಂದ ತನ್ನ ಮೊಬೈಲ್ ಗೆ ಕರೆ ಮಾಡಿದ್ದಾರೆ.
ಮೊಬೈಲ್ ಕಳವು ಮಾಡಿದ ಬಳಿಕ ಮೊಬೈಲ್ ಲಾಕ್ ಅನ್ ಲಾಕ್ ಮಾಡಲು ಕಳ್ಳ ನಿರಂತರವಾಗಿ ಪ್ರಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ಲಾಕ್ ಅನ್ ಲಾಕ್ ಮಾಡಲು ಸಾಧ್ಯವಾಗದ ಸಂದರ್ಭದಲ್ಲಿಯೇ ಮೊಬೈಲ್ ಮಾಲಕ ಕರೆ ಮಾಡಿದ್ದು, ತಾಳ್ಮೆ ಕಳೆದುಕೊಂಡ ಕಳ್ಳ, ಮೊಬೈಲ್ ಗೆ ಯಾವ ಪಾಸ್ ವರ್ಡ್ ಹಾಕಿದ್ದಿ, ಮರ್ಯಾದೆಯಲ್ಲಿ ಹೇಳಿದರೆ ಸರಿ ಎಂದು ಮಾಲಕನಿಗೆ ಗದರಿಸಿದ್ದಾನೆ ಎಂದು ಹೇಳಲಾಗಿದೆ.
ಘಟನೆ ಸಂಬಂಧ ನಾಗನಗೌಡ ಪಾಟೀಲ್ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಮೊಬೈಲ್ ಕದ್ದು ಅದರ ಮಾಲಕರ ಬಳಿಯಲ್ಲಿಯೇ ಪಾಸ್ ವರ್ಡ್ ಕೇಳಿದ ಕಳ್ಳ! ಬಹಳ ಬುದ್ಧಿವಂತನಾಗಿರುವುದರಿಂದ ಸುಲಭವಾಗಿ ಸಿಕ್ಕಿ ಬೀಳುವ ಸಾಧ್ಯತೆ ಇದೆ!
ಇದನ್ನೂ ಓದಿ: