ಕಾಲು ನೋವು ಗುಣ ಮಾಡಲಾಗದ ನೀನು ಯಾವ ಸೀಮೆಯ ದೇವರು? | ದೇವರ ಮೇಲೆ ಸಿಟ್ಟಾದ ಯುವಕ ಮಾಡಿದ ಕೆಲಸ ಏನು ಗೊತ್ತಾ? - Mahanayaka

ಕಾಲು ನೋವು ಗುಣ ಮಾಡಲಾಗದ ನೀನು ಯಾವ ಸೀಮೆಯ ದೇವರು? | ದೇವರ ಮೇಲೆ ಸಿಟ್ಟಾದ ಯುವಕ ಮಾಡಿದ ಕೆಲಸ ಏನು ಗೊತ್ತಾ?

13/02/2021

ಉತ್ತರಾಖಂಡ: “ಒಂದು ಕಾಲು ನೋವನ್ನು ನಿವಾರಿಸಲಾಗದ ನೀನೂ ಒಬ್ಬ ದೇವರೇ?” ಎಂದು ಸಿಟ್ಟಾದ ಯುವಕನೋರ್ವ ದೇವರ ಮೂರ್ತಿಯನ್ನು  ಚರಂಡಿಗೆ ಎಸೆದ ಘಟನೆ ಉತ್ತರಾಖಂಡದ ಅಲ್ಮೊರಾ ಜಿಲ್ಲೆಯಲ್ಲಿ ನಡೆದಿದೆ.

ಅಲ್ಮೊರಾ ಜಿಲ್ಲೆಯ  ಚಿಟೈಲಿಗಡ್ ಗ್ರಾಮದ 24 ವರ್ಷದ ಯುವಕ ತಾರಾ ಸಿಂಗ್ ರಾಣಾ ದೇವರ ಮೇಲೆ ತನ್ನ ಸಿಟ್ಟು ತೀರಿಸಿಕೊಂಡ ಯುವಕನಾಗಿದ್ದಾನೆ. ತಾನು 12ನೇ ತರಗತಿಯಲ್ಲಿರುವಾಗ ತೀವ್ರ ಕಾಲು ನೋವು ಕಾಣಿಸಿಕೊಂಡಿತ್ತು. ಒಂದು ದಿನ ಇಲ್ಲಿನ ದ್ವಾರಹತ್ ಎಂಬಲ್ಲಿರುವ ಪುರಾತನ ದೇವಸ್ಥಾನಕ್ಕೆ ತೆರಳಿ ಅಲ್ಲಿರುವ ಶಿವಲಿಂಗ ಹಾಗೂ ಬೈರವ ದೇವರಲ್ಲಿ ತನ್ನನ್ನು ಗುಣಮುಖರನ್ನಾಗಿಸಿ ಎಂದು ಬೇಡಿದ್ದ.

ಹಲವು ವರ್ಷಗಳಿಂದ ತನ್ನ ಕಾಲು ನೋವನ್ನು ನಿವಾರಿಸುವಂತೆ ತಾರಾ ಸಿಂಗ್ ಬೇಡಿಕೊಂಡಿದ್ದ. ದೇವರನ್ನು ಮೆಚ್ಚಿಸಲು ನಾನಾ ರೀತಿಯ ಪೂಜೆಗಳನ್ನು ಕೂಡ ಮಾಡಿದ್ದ. ಆದರೆ ಇದ್ಯಾವುದರಿಂದ ಪ್ರಯೋಜನವಾಗದೇ ಇರುವಾಗ ಕೋಪಗೊಂಡ ಯುವಕ ದೇವಸ್ಥಾನದಲ್ಲಿದ್ದ ಶಿವಲಿಂಗ ಹಾಗೂ ಬೈರವ ಬಾಬಾ ವಿಗ್ರಹಗಳನ್ನು ಧ್ವಂಸ ಮಾಡಿದ್ದಾನೆ. ಬಳಿಕ ಅದನ್ನು ಚರಂಡಿಯಲ್ಲಿ ಎಸೆದಿದ್ದಾನೆ.

ಒಂದು ಸಣ್ಣ ಕಾಲು ನೋವನ್ನು ಗುಣಪಡಿಸಲಾಗದ ನೀನು ಯಾವ ಸೀಮೆಯ ದೇವರು ಎಂದು ಕೋಪಗೊಂಡಿದ್ದ ಯುವಕ ಈ ಕೃತ್ಯ ಎಸಗಿದ್ದಾನೆ. ಘಟನೆಯ ಬಳಿಕ ದೇವಸ್ಥಾನದ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ವೇಳೆ ಸಿಸಿ ಕ್ಯಾಮರ ಪರಿಶೀಲಿಸಿದಾಗ ತಾರಾ ಸಿಂಗ್ ನ ಕೆಲಸ ಇದು ಎಂದು ತಿಳಿದು ಬಂದಿದೆ.  ತಕ್ಷಣವೇ ಪೊಲೀಸರು ತಾರಾ ಸಿಂಗ್ ನನ್ನು ಬಂಧಿಸಿದ್ದಾರೆ.

ಇತ್ತೀಚಿನ ಸುದ್ದಿ