ಪ್ರೀತಿಯ ಅಪ್ಪುಗೆ: ಬಿಜೆಪಿ ಸಂಸದನಿಂದ ನಿಂದಿಸಲ್ಪಟ್ಟ ಮುಸ್ಲಿಂ ಸಂಸದನಿಗೆ ರಾಹುಲ್ ಗಾಂಧಿ ಸಾಂತ್ವನ
ಲೋಕಸಭೆಯಲ್ಲಿ ಬಿಎಸ್‌ಪಿ ಪಕ್ಷದ ಮುಸ್ಲಿಂ ಸಂಸದ, ಕುನ್ವರ್ ಡ್ಯಾನಿಶ್ ಅಲಿ ಅವರ ವಿರುದ್ಧ ಬಿಜೆಪಿ ಸಂಸದ ರಮೇಶ್ ಬಿಧುರಿ ಅವಹೇಳನಕಾರಿ ಹೇಳಿಕೆ ನೀಡಿದ್ದು ವಿವಾದ ಸೃಷ್ಟಿಯಾಗಿತ್ತು. ಈ ಬೆಳವಣಿಗೆಯ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಡ್ಯಾನಿಶ್ ಅಲಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ರಾಷ್ಟ್ರ ರಾಜಧಾನಿಯಲ್ಲಿರುವ ಡ್ಯಾನಿಶ್ ಅಲಿ ಅವರ ನಿವಾಸಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ ಅವರು ಡ್ಯಾನಿಶ್ ಅಲಿ ಅವರನ್ನು ತಬ್ಬಿಕೊಳ್ಳುವ ಮೂಲಕ ಅವರಿಗೆ ಪ್ರೀತಿಯನ್ನು ತೋರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್, ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ (ನಫ್ರತ್ ಕೆ ಬಜಾರ್ ಮೇ ಮೊಹಬ್ಬತ್ ಕಿ ದುಕಾನ್) ಎಂದು ಹೇಳಿದರು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಲೋಕಸಭೆಯಲ್ಲಿ ಬಿಜೆಪಿ ಸಂಸದ ರಮೇಶ್ ಬಿಧುರಿಯಿಂದ ಡ್ಯಾನಿಶ್ ಅಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಒಂದು ದಿನದ ನಂತರ ಈ ಸಭೆ ನಡೆದಿದೆ. ಡ್ಯಾನಿಶ್ ಅಲಿ ವಿರುದ್ಧ ರಮೇಶ್ ಬಿಧುರಿ ಅವರ ಆಕ್ಷೇಪಾರ್ಹ ಹೇಳಿಕೆಗಳು ವಿರೋಧ ಪಕ್ಷಗಳ ಕೋಪಕ್ಕೆ ಕಾರಣವಾಗಿದ್ದು, ಬಿಧುರಿ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿವೆ. ಸ್ಪೀಕರ್ ಈ ಬಗ್ಗೆ ವಿಚಾರಣೆ ನಡೆಸದಿದ್ದರೆ ಸಂಸತ್ತನ್ನು ತೊರೆಯುವುದಾಗಿ ಇಂಡಿಯಾ ಮೈತ್ರಿಕೂಟ ಎಚ್ಚರಿಕೆ ನೀಡಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‌ಪಿ ನಾಯಕ, ದಕ್ಷಿಣ ದೆಹಲಿಯ ಬಿಜೆಪಿ ಸಂಸದ ಬಿಧುರಿ ಅವರು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡುವ ಮೂಲಕ ಇಡೀ ರಾಷ್ಟ್ರವನ್ನು ಅಪಮಾನ ಮಾಡಿದ್ದಾರೆ. ರಮೇಶ್ ಬಿಧುರಿ ವಿರುದ್ಧ ಬಿಜೆಪಿ ಯಾವ ಕ್ರಮ ತೆಗೆದುಕೊಳ್ಳುತ್ತದೆಯೇ ಅಥವಾ ಅವರನ್ನು ಬಡ್ತಿ ನೀಡಿ ಕೇಂದ್ರ ಸಚಿವ ಸಂಪುಟಕ್ಕೆ ಸೇರಿಸುತ್ತದೆಯೇ ಎಂಬುದು ಕಾದು ನೋಡಬೇಕಾದ ವಿಷಯವಾಗಿದೆ ಎಂದಿದ್ದಾರೆ.