ಅಪ್ರಾಪ್ತ ಮಗಳನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಿಸಲು ತಂಗಿಯ ಜೊತೆಗೂಡಿ ಲಿವ್-ಇನ್ ಪಾರ್ಟ್ನರ್ ನನ್ನೇ ಕೊಂದ ತಾಯಿ! - Mahanayaka

ಅಪ್ರಾಪ್ತ ಮಗಳನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಿಸಲು ತಂಗಿಯ ಜೊತೆಗೂಡಿ ಲಿವ್–ಇನ್ ಪಾರ್ಟ್ನರ್ ನನ್ನೇ ಕೊಂದ ತಾಯಿ!

ghazia bad.jpg
30/06/2026

ನೋಯ್ಡಾ/ಘಾಜಿಯಾಬಾದ್: ತನ್ನ 13 ವರ್ಷದ ಅಪ್ರಾಪ್ತ ಮಗಳನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಿಸುವ ಸಲುವಾಗಿ, ಮಹಿಳೆಯೊಬ್ಬಳು ತನ್ನ ತಂಗಿಯೊಂದಿಗೆ ಸೇರಿ ತನ್ನ ಲಿವ್–ಇನ್ ಪಾರ್ಟ್ನರ್ (ಸಹಜೀವನ ನಡೆಸುತ್ತಿದ್ದ ವ್ಯಕ್ತಿ) ಅನ್ನು ಕೊಲೆ ಮಾಡಿ, ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಟ್ರೋನಿಕಾ ಸಿಟಿಯಲ್ಲಿ ಬೆಳಕಿಗೆ ಬಂದಿದೆ.

ಬಂಧಿತ ಆರೋಪಿಗಳನ್ನು ಕಿರಣ್ (32) ಮತ್ತು ಆಕೆಯ ತಂಗಿ ಕಶಿಶ್ (21) ಎಂದು ಗುರುತಿಸಲಾಗಿದೆ. ಕೊಲೆಯಾದ ವ್ಯಕ್ತಿಯನ್ನು ಮೇಸ್ತ್ರಿ ಕೆಲಸ ಮಾಡುತ್ತಿದ್ದ ಜಾಕಿರ್ ಎಂದು ಗುರುತಿಸಲಾಗಿದೆ.

ಕಿರಣ್ ಕಳೆದ ಒಂಬತ್ತು ತಿಂಗಳುಗಳಿಂದ ಜಾಕಿರ್ ಜೊತೆ ಲಿವ್–ಇನ್ ರಿಲೇಶನ್ ಶಿಪ್ ನಲ್ಲಿದ್ದಳು. ಆಕೆಗೆ ಹಿಂದಿನ ಮದುವೆಯಿಂದ 13 ವರ್ಷದ ಮಗಳು ಹಾಗೂ 9 ಮತ್ತು 11 ವರ್ಷದ ಇಬ್ಬರು ಗಂಡು ಮಕ್ಕಳಿದ್ದರು. ಸುಮಾರು ಎರಡು ತಿಂಗಳ ಹಿಂದೆ, ಜಾಕಿರ್ ತನಗೆ ಕಿರಣ್ ಳ ಮಗಳೊಂದಿಗೆ ದೈಹಿಕ ಸಂಬಂಧ ಹೊಂದಲು ಆಸೆಯಿದೆ ಎಂದು ಹೇಳಿದ್ದಲ್ಲದೆ, ಆ ಬಾಲಕಿಗೆ ಅನುಚಿತವಾಗಿ ಸ್ಪರ್ಶಿಸಲು ಶುರು ಮಾಡಿದ್ದ. ಕಿರಣ್ ಇದನ್ನು ಹಲವು ಬಾರಿ ವಿರೋಧಿಸಿ, ಆತನನ್ನು ಮಗಳಿಂದ ದೂರವಿಡಲು ಪ್ರಯತ್ನಿಸಿದರೂ ಜಾಕಿರ್ ಕೇಳಿರಲಿಲ್ಲ.
ಜಾಕಿರ್ ನ ಕಾಟ ದಿನದಿಂದ ದಿನಕ್ಕೆ ಹೆಚ್ಚಾದಾಗ, ಆತನನ್ನು ಮುಗಿಸಲು ಕಿರಣ್ ನಿರ್ಧರಿಸಿದಳು. ಇದಕ್ಕಾಗಿ 20 ದಿನಗಳ ಹಿಂದೆ ತನ್ನ ತಂಗಿ ಕಶಿಶ್ ಳನ್ನು ಕರೆಸಿಕೊಂಡಿದ್ದಳು. ಇಬ್ಬರೂ ಸೇರಿ ಜಾಕಿರ್ನನ್ನು ಕೊಲೆ ಮಾಡಲು ಯೂಟ್ಯೂಬ್ ನಲ್ಲಿ ಹಲವು ಕ್ರೈಮ್ ಸಿನಿಮಾಗಳ ದೃಶ್ಯಗಳನ್ನು ನೋಡಿ ಪ್ಲಾನ್ ಮಾಡಿದ್ದರು.

ಜೂನ್ 23 ರಂದು ಯೋಜನೆ ಪ್ರಕಾರ, ಕಿರಣ್ ತನ್ನ ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಿ ಜಾಕಿರ್ ಫೋನ್ ನಿಂದ ಬುಕ್ ಮಾಡಿದ್ದ ಕ್ಯಾಬ್ ನಲ್ಲಿ ಕೂರಿಸಿದಳು. ಮಕ್ಕಳು ದೂರ ಹೋದ ತಕ್ಷಣ, ಕಿರಣ್ ಮರದ ದೊಣ್ಣೆಯಿಂದ ಜಾಕಿರ್ ತಲೆಗೆ ಬಲವಾಗಿ ಹೊಡೆದಿದ್ದಾಳೆ. ಆತ ಪ್ರಜ್ಞೆ ತಪ್ಪಿ ಬೀಳುತ್ತಿದ್ದಂತೆ, ಇಬ್ಬರೂ ಸೋದರಿಯರು ಸೇರಿ ಟವೆಲ್ ನಿಂದ ಆತನ ಕುತ್ತಿಗೆಯನ್ನು ಬಿಗಿದು ಉಸಿರುಗಟ್ಟಿಸಿ ಕೊಂದಿದ್ದಾರೆ.

ಕೊಲೆಯ ನಂತರ ಸಾಕ್ಷ್ಯ ನಾಶಪಡಿಸಲು, ಅವರು ಆ ದೊಣ್ಣೆಯನ್ನು ಮೇಲ್ಛಾವಣಿಯ ನೀರಿನ ಟ್ಯಾಂಕ್ ಹಿಂದೆ ಬಚ್ಚಿಟ್ಟರು. ನಂತರ ಶವವನ್ನು ಫ್ಯಾನ್ ಗೆ ನೇತುಹಾಕಿದರು. ಯಾರೂ ಅನುಮಾನಿಸಬಾರದು ಎಂದು ಫ್ಯಾನ್ ನ ಮೂರೂ ರೆಕ್ಕೆಗಳನ್ನು ಮಡಚಿದ್ದರು. ಬಳಿಕ ನೆರೆಹೊರೆಯವರನ್ನು ಕರೆದು ಜಾಕಿರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನಾಟಕವಾಡಿದ್ದರು. ಆಸ್ಪತ್ರೆಗೆ ಕರೆದೊಯ್ದಾಗ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು.


Provided by
Provided by

ಜಾಕಿರ್ ಸೋದರ ಸಮೀರ್ ಖಾನ್ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದರು. ಪೋಸ್ಟ್ ಮಾರ್ಟಂ ವರದಿಯಲ್ಲಿ ಜಾಕಿರ್ ದೇಹದ ಮೇಲಿರುವ ಗಾಯದ ಗುರುತುಗಳು ಮತ್ತು ಕುತ್ತಿಗೆ ಸೀಳಿರುವ ಕಾರಣದಿಂದ ಸಾವು ಸಂಭವಿಸಿದೆ ಎಂದು ತಿಳಿದುಬಂದಾಗ ಪೊಲೀಸರಿಗೆ ಅನುಮಾನ ವ್ಯಕ್ತವಾಯಿತು. ಪೊಲೀಸರು ಕಿರಣ್ ಮತ್ತು ಆಕೆಯ ತಂಗಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಇಬ್ಬರ ಹೇಳಿಕೆಗಳೂ ತಾಳೆಯಾಗದೆ ಅಂತಿಮವಾಗಿ ಇಬ್ಬರೂ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಸದ್ಯ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

 

ಇತ್ತೀಚಿನ ಸುದ್ದಿ