ʼ ಅಮ್ಮʼ ಎಂದರೆ ಆತ್ಮಸ್ಥೈರ್ಯದ ಸಂಕೇತ | ಬದುಕಿನ ಪುಟಗಳನ್ನು ತೆರೆದುನೋಡಿದಾಗ - Mahanayaka

ʼ ಅಮ್ಮʼ ಎಂದರೆ ಆತ್ಮಸ್ಥೈರ್ಯದ ಸಂಕೇತ | ಬದುಕಿನ ಪುಟಗಳನ್ನು ತೆರೆದುನೋಡಿದಾಗ

na divakara
08/05/2022

  • ನಾ ದಿವಾಕರ

ಇಂದು ವಿಶ್ವ ತಾಯಂದಿರ ದಿನ.  ನಮ್ಮೊಡನೆ ಇರುವ, ಇಲ್ಲವಾಗಿರುವ, ಕಂಡಿರುವ, ಕಾಣದೆಯೇ ಇರುವ, ಅಮೂರ್ತತೆಯಲ್ಲಿ ಇಂದಿಗೂ ಮನದ ಮೂಸೆಯಲ್ಲಿ ಕಾಣಿಸಿಕೊಳ್ಳುತ್ತಲೇ ಇರಬಹುದಾದ ಆ ಶಕ್ತಿʼ ಅಮ್ಮ ʼ ಇಂದು ಜೊತೆಯಲ್ಲಿಲ್ಲದಿರುವಾಗ, ನೆನಪುಗಳ ಗಣಿಯನ್ನು ಹೆಕ್ಕಿ ತೆಗೆದು, ಮರೆತುಹೋದ ಹಾದಿ ಹೆಜ್ಜೆಗಳನ್ನು ಪುನಃಪುನಃ ಸ್ಮರಿಸುವ ಒಂದು ಪ್ರಯತ್ನಕ್ಕೆ ಈ ದಿನ ಪ್ರೇರಣೆ ನೀಡುತ್ತದೆ. ಆ ತಾಯಿಯನ್ನು ಹೇಗೆ ನೆನೆಯುವುದು ? ತಪ್ಪು ಮಾಡಿದಾಗಲೆಲ್ಲಾ ಬೆನ್ನ ಮೇಲೆ ಚಟೀರ್‌ ಎಂದು ಬಿದ್ದ ಏಟುಗಳ ಮೂಲಕವೋ , ಲಲ್ಲೆಗರೆದು ಮುದ್ದುಮಾಡಿ, ಮಡಿಲಲ್ಲಿ ಮಲಗಿಸಿಕೊಂಡು ಸಾಂತ್ವನ ನೀಡಿದ ಕ್ಷಣಗಳ ಸ್ಮರಣೆಯಲ್ಲೋ, ತನ್ನ ಹಸಿವನು ಮರೆತು ಮಕ್ಕಳ ದಣಿವಾರಿಸುವ ಮಮತೆಯ ಸ್ಪರ್ಶಾನುಭವದ ಗಳಿಗೆಗಳಲ್ಲೋ, ದಿಕ್ಕುಗಾಣದಾದಾಗ ಕತ್ತಲ ಹಾದಿಗೆ ಲಾಂದ್ರ ಹಿಡಿದ ಆ ಸಂದಿಗ್ಧ ಕ್ಷಣಗಳಲ್ಲೋ ಅಥವಾ ಬದುಕಿನ ಪ್ರತಿ ಹೆಜ್ಜೆಯಲ್ಲೂ ತನ್ನ ಆತ್ಮಸ್ಥೈರ್ಯದ ಮೂಲಕವೇ ಜೀವ ಚೈತನ್ಯವನ್ನು ತುಂಬಿದ ಘಟನೆಗಳ ಮೂಲಕವೋ ? ಈ ಹಲವು ಪ್ರಶ್ನೆಗಳಿಗೆ ಉತ್ತರ ಶೋಧಿಸುವಾಗ ಇಂದು ನನ್ನ ಅಮ್ಮ ನೆನಪಾಗಿದ್ದು 1975ರ ಒಂದು ಘಟನೆಯ ಮೂಲಕ.

1975–76. ನಾನು ಒಂಬತ್ತನೆ ತರಗತಿಯಲ್ಲಿದ್ದೆ. ತಂದೆ ಕೆಲಸ ಯಾವುದೋ ಕಾರಣದಿಂದ ಕಳೆದುಕೊಂಡಿದ್ದರು. ದೊಡ್ಡಣ್ಣ ಬ್ಯಾಂಕ್ ಕೆಲಸಕ್ಕೆ ರಾಜೀನಾಮೆ ನೀಡಿ ಮನೆಯಲ್ಲಿದ್ದ ದಂಡಪಿಂಡಗಳಲ್ಲೊಬ್ಬನಾಗಿದ್ದ. ಮತ್ತೊಬ್ಬ ಅಣ್ಣ ( ಕಳೆದ ವರ್ಷ ಮೇ 18ರಂದು  ತೀರಿಕೊಂಡವ) ಡಿಗ್ರಿ ಓದು ನಿಲ್ಲಿಸಿ ಮಂಡಿ ಲೆಕ್ಕ ಬರೆಯಲು ಶುರುಮಾಡಿದ. ನನ್ನ ಮತ್ತೊಬ್ಬ ಸೋದರ (2001ರಲ್ಲಿ ತೀರಿಕೊಂಡವ) ೧೦ ನೆಯ ತರಗತಿಯಲ್ಲಿದ್ದ. ಕಡೆಯ ಸೋದರಿ ಹತ್ತರಲ್ಲಿ ಢುಮಕಿ ಹೊಡೆದು ಮನೆಯಲ್ಲಿದ್ದಳು. ಇನ್ನೊಬ್ಬಳು ೨ನೆಯ ಬಿಎ ಓದುತ್ತಿದ್ದಳು. ಅವಳಿಗಿಂತ ದೊಡ್ಡವಳು ಬೆಂಗಳೂರಿನಲ್ಲಿ ಕಾಂಗ್ರೆಸ್ ಆಫೀಸಿನಲ್ಲಿ ಟೈಪಿಸ್ಟ್ ಆಗಿ ನೆಂಟರ ಮನೆಯಲ್ಲಿದ್ದಳು. ಅಸಹಾಯಕ ಅಪ್ಪ, ಸೋತು ಹೈರಾಣಾದ ಅಮ್ಮ, ನಾವು ಆರು ಜನ. ತಿಂಗಳ ಆದಾಯ ೯೦ ರೂ. ನೈಟ್ ಶಿಫ್ಟ್ ಮಾಡಿದರೆ ಅಣ್ಣನಿಗೆ ದಿನಕ್ಕೆ ಎರಡು ರೂಪಾಯಿ ಸಿಗುತ್ತಿತ್ತು. ರಾತ್ರಿ ಮಂಡಿ ಲೆಡ್ಜರ್ ಬರೆಯುವುದು ಉಳಿದ ನಮ್ಮಿಬ್ಬರ ಕೆಲಸ. ಕಿತ್ತು ತಿನ್ನುವ ಹಸಿವೆ, ನಾಳಿನ ಯೋಚನೆ, ಅಭದ್ರ ಭವಿಷ್ಯ, ನಿರ್ಲಿಪ್ತ-ನಿರುದ್ಯೋಗಿ ದೊಡ್ಡಣ್ಣ, ಇದ್ದ ಕೆಲಸ ಬಿಟ್ಟುಬಂದಿದ್ದ ಇವನಿಗೆ ಊಟ ಹಾಕಲು ಅಮ್ಮ ನಿರಾಕರಿಸಿ, ಊಟಕ್ಕೆ ಕುಳಿತವನನ್ನು ಎಬ್ಬಿಸಿದ್ದು ಇಂದಿಗೂ ಕಣ್ಣಿಗೆ ಕಟ್ಟಿದಂತಿರುವ ದೃಶ್ಯ. ಮಧುಮೇಹದ ಅಪ್ಪ ಅಮ್ಮ. ಇದು ಸ್ಥೂಲ ಚಿತ್ರಣ

ಅಪ್ಪನಿಗೆ ಕಿಂಚಿತ್ತೂ ವರಮಾನ ಇಲ್ಲದಿರುವ ಸಂದರ್ಭ. ಔಷಧಿ ಖರ್ಚಿಗಾಗಿ, ದುಡಿಯುತ್ತಿದ್ದ ಒಬ್ಬನೇ‌ ಮಗನೆದುರು ಕೈಚಾಚುವ ದೈನೇಸಿ ಸ್ಥಿತಿ. ಒಂದು ದಿನ ಹೀಗೇ ಔಷದಿಗೆ “ ರವಿ (ಅಣ್ಣನ ಹೆಸರು) ಹತ್ರ ದುಡ್ಡು ಇಸ್ಕೋ ” ಎಂದು ಅಪ್ಪ ನನ್ನ ಬಳಿ ಹೇಳುತ್ತಿದ್ದುದು, ಆಗ ತಾನೇ ಬಂದಿದ್ದ ಅಣ್ಣನ ಕಿವಿಗೆ ಬಿತ್ತು. ಅವನ ಉತ್ತರ ನಮ್ಮೆಲ್ಲರ ಬದುಕನ್ನೇ ಬದಲಿಸಿಬಿಟ್ಟಿತು. ” ನಾನೆಲ್ಲಿಂದ ತರಲಿ ಯಾವ್ದಾದ್ರೂ ಒಣಮರಕ್ಕೆ ನೇಣು ಹಾಕ್ಕೋಳೋಕೆ ಹೇಳು ” ಎಂದು ಬಿಟ್ಟ. ಅವನ ಆಕ್ರೋಶ ದೊಡ್ಡಣ್ಣನ ಮೇಲೆ. ಅದು ತಟ್ಟಿದ್ದು ಅಮ್ಮನ ಸ್ವಾಭಿಮಾನವನ್ನು, ಅಪ್ಪನ ಹೃದಯವನ್ನು. ಅಪ್ಪ ಇದನ್ನು ಕೇಳಿಸಿಕೊಂಡು, ವಾಕಿಂಗ್ ಸ್ಟಿಕ್ ಹಿಡಿದು ಬಿರಬಿರನೆ ನನ್ನನ್ನೂ ಕರೆದುಕೊಂಡು ಹೊರಗೆ ಹೊರಟರು. ದೇವಾನಂದ್ ನಟಿಸಿದ್ದ ದುನಿಯಾ ಚಿತ್ರ ನಡೆಯುತ್ತಿತ್ತು ನನ್ನನ್ನೂ ಕರೆದುಕೊಂಡು ಸಿನಿಮಾ ನೋಡುತ್ತಾ ಕುಳಿತುಬಿಟ್ಟರು. ಅವರಿಗೆ ಸಿಟ್ಟು ಎಂದರೇನು ಎಂದೇ ತಿಳಿದಿರಲಿಲ್ಲ. ಕಣ್ಣಂಚಿನಲ್ಲಿ ನೀರು ಜಿನುಗಲಿಲ್ಲ. ಮನಸು ಬುಸುಗುಡಲಿಲ್ಲ. ಮುಖದ ಮೇಲೆ ಖೇದದ ಛಾಯೆಯೂ ಇರಲಿಲ್ಲ. ಸಾತ್ವಿಕ ಸಂತನಂತೆ ಮೌನಕ್ಕೆ ಜಾರಿಬಿಟ್ಟರು. ಸಿನಿಮಾ ಒಂದು ಕಾಲ ಕಳೆಯುವ ನೆಪ ಮಾತ್ರ. ಆಗೆಲ್ಲಾ ಪಾರ್ಕುಗಳು ಇರಲಿಲ್ಲ.

” ಬೇಜಾರಾಯ್ತಾ ಅಣ್ಣ ” ಎಂದು ಕೇಳಿದೆ. ” ಏಕೆ‌ ಮರಿ ಈ ಪಾದಗಳಿವೆಯಲ್ಲಾ ದುಡ್ಡಿದ್ದರೆ ದೇವರ ಪಾದ ಇಲ್ದಿದ್ರೆ ದೆವ್ವದ ಪಾದ ” ಎಂದು ಹೇಳಿ ಸುಮ್ಮನಾದರು. ದೊಡ್ಡಣ್ಣನ ಸಿಗರೇಟು ಇತ್ಯಾದಿ, ಮತ್ತೊಬ್ಬನ ಒರಟು ಮಾತು, ಉಳಿದವರ ಅಸಹಾಯಕತೆ ಅವರನ್ನು ಸೋಲಿಸಿಬಿಟ್ಟಿತ್ತು. ಸುತ್ತಲಿನ ಹಸಿದ ಹೊಟ್ಟೆಗಳು, ಅನಿಶ್ಚಿತ ಭವಿಷ್ಯದ ದಿನಗಳು, ಪರಾವಲಂಬನೆಯ ಅವ್ಯಕ್ತ ವೇದನೆ ಅವರಲ್ಲಿ ಮಡುಗಟ್ಟಿತ್ತೆನಿಸುತ್ತದೆ. ಹಿಂದಿರುಗಿ ನೋಡಿದಾಗ ಈ ಅರ್ಥವಾಗುವುದು ಇದು. ವಾಪಸ್‌ ಬರುವ ವೇಳೆಗೆ ಅಮ್ಮ ಬುಸುಗುಡುತ್ತಿದ್ದಳು. ಮಗನ ಮೇಲೆ ಕೋಪ ಒಂದೆಡೆ, ಪರಿಸ್ಥಿತಿಯ ಹತಾಶೆ ಒಂದೆಡೆ , ಬದುಕು ಎದುರೊಡ್ಡಿದ ಕಠಿಣ ಪ್ರಶ್ನೆಗಳೊಂದೆಡೆ. ಆಕೆಯ ಮುಖದಲ್ಲಿ ದುಗುಡವಷ್ಟೇ ಕಂಡಿದ್ದು ಇಂದಿಗೂ ನೆನಪಿದೆ. ಯಾರನ್ನು ಹಳಿಯುವುದು ? “ ಹಣೇಬರಹಕ್ಕೆ ಹೊಡ್ಕೊಳ್ಳೋ ಕೋತಿಗಂಡಂಗೆ ಹೊಡ್ಕೊಳ್ಳೋ ” ಎಂಬ ಗಾದೆ ಮಾತನ್ನಾಡುತ್ತಿದ್ದ ಅಮ್ಮನ ಆಂತರ್ಯದಲ್ಲಿ ಅಂದು ನಡೆಯುತ್ತಿದ್ದಿರಬಹುದಾದ ಕೋಲಾಹಲವನ್ನು ಇಂದಿಗೂ ಊಹಿಸಿಕೊಳ್ಳಲಾಗುತ್ತಿಲ್ಲ. ಅಡುಗೆ ಮನೆಯಲ್ಲಿದ್ದ ಒಂದೆರಡು ಸ್ಟೀಲ್‌ ಪಾತ್ರೆಗಳನ್ನು ಕೊಟ್ಟು, ಇದನ್ನು ಮಾರಿ ಅವರಿಗೆ ಔಷದಿ ತಂದುಕೊಡು ಎಂದು ಹೇಳಿದ್ದಷ್ಟೇ ನೆನಪು. ಹಾಗೆಯೇ ಮಾಡಿಯಾಗಿತ್ತು.

ಈ ಘಟನೆ ನಡೆದ ಒಂದು ವಾರದಲ್ಲೇ ಅಪ್ಪ-ಅಮ್ಮನ ಗುರಿ ಬದಲಾಗಿತ್ತು. ಪರಾವಲಂಬಿಯ ಬದುಕಿನ ಸಹವಾಸವೇ ಬೇಡ ಎಂದು ನಿರ್ಧರಿಸಿಯಾಗಿತ್ತು. ಅಪ್ಪನಲ್ಲೂ ಬಹುಶಃ ಅಂತರ್ಯದ ಸ್ವಾಭಿಮಾನ, ಛಲ ಪುಟಿದೆದ್ದಿತ್ತೆನಿಸುತ್ತದೆ. ಬಂಗಾರಪೇಟೆಯಿಂದ 150 ಕಿಲೋಮೀಟರ್‌ ದೂರದಲ್ಲಿದ್ದ, ಗೊತ್ತೇ ಇಲ್ಲದ ಊರು, ಕುಣಿಗಲ್ ಸಮೀಪದ ಸಣಬ ಗ್ರಾಮದ  ವೀರಭದ್ರೇಶ್ವರ ರೈಸ್ ಮಿಲ್ ನಲ್ಲಿ ಲೆಕ್ಕಬರೆಯುವ ಕೆಲಸ ಮಾಡಲು ಒಪ್ಪಿಕೊಂಡ ಅಪ್ಪನಿಗೆ ಧೈರ್ಯ ತುಂಬಿದ ಅಮ್ಮ ಕೊನೆಗೂ ಒಪ್ಪಿಸಿ ಹೊರಟೇ ಬಿಟ್ಟರು.( ಜೂನ್ ೧೯೭೫). ಆಗಲೂ ಆ ತಾಯಿಯ ಮುಂದಿಟ್ಟ ಪ್ರಶ್ನೆ “ ಮಕ್ಕಳು ಇಲ್ಲಿ ಏನು ಮಾಡ್ಕೋತಾರೆ ?” ಎನ್ನುವುದೇ ಆಗಿತ್ತು. ಅಮ್ಮನ ಎದುರಿದ್ದ ಇನ್ನೂ ದೊಡ್ಡ ಪ್ರಶ್ನೆ ದೊಡ್ಡ ಸಂಸಾರ ಹಾಗೂ ತಮ್ಮಿಬ್ಬರ ಮುಂದಿನ ದಿನಗಳು ಮತ್ತು ಅಪರಿಚಿತ ಹಳ್ಳಿ . ” ನೀನು ಯೋಚನೆ ಮಾಡಬೇಡ, ಬೋಂಡ ವಡೆ ಮಾಡಿ ನಿನ್ನನ್ನ ಸಾಕ್ತೀನಿ ” ಎಂದು ಅಪ್ಪ ಹೇಳಿದ್ದು ಇಂದಿಗೂ ನೆನಪಿನಲ್ಲಿ ಹಸಿರಾಗಿದೆ. ” ನಿಮಗೆಷ್ಟು ಧೈರ್ಯ ರೀ ” ಎಂಬ ಅಮ್ಮನ ಆತಂಕಕ್ಕೆ ಅಪ್ಪ ನೀಡಿದ ಉತ್ತರ ” ಆ ಭಗವಂತನನ್ನು ನಂಬಿ ಹೋಗೋಣ ಬಾ ಅವನು ನಡೆಸಿಕೊಂಡು ಹೋಗ್ತಾನೆ,,,,,”. ( ಯಾವ ಭಗವಂತನೂ ನೆರವಾಗಲಿಲ್ಲವೆನ್ನಿ ಅದು ಅವರ ಕೊನೆಯ ಪಯಣದ ಮೊದಲ ಹೆಜ್ಜೆಯಾಗಿತ್ತು)

ಆ ವಿಷಮ ಪರಿಸ್ಥಿತಿಯಲ್ಲಿ ಅಮ್ಮ ಆಕೆಯ ಸಂಗಾತಿಯಲ್ಲಿ ತುಂಬಿದ ಸ್ಥೈರ್ಯ ಮತ್ತು ಮಕ್ಕಳ ಅಹಂಭಾವ ಅಥವಾ ಬೇಜವಾಬ್ದಾರಿಯನ್ನು ಧಿಕ್ಕರಿಸುವಂತೆ ತೋರಿದ ಆ ಛಲ ಯಾವುದೇ ತಾಯಿಯಲ್ಲಿ ಕಾಣಬಹುದಾದ ಲಕ್ಷಣಗಳು ಎನಿಸುತ್ತದೆ. ಆ ಹಳ್ಳಿಯಲ್ಲಿ ಏಳೆಂಟು ತಿಂಗಳು ರೈಸ್‌ ಮಿಲ್‌ನಲ್ಲಿಯೇ ಒಂದು ಕೋಣೆಯಲ್ಲಿ ತಂಗಿದ್ದರು. ಕುರಿ, ಮೇಕೆ, ಕೋಳಿಗಳನ್ನು ಅಲ್ಲಿ ಸಾಕಿದ್ದರು. ಮಡಿ ಮೈಲಿಗೆಯ ಸಾಂಪ್ರದಾಯಿಕ ಬದುಕು ಸವೆಸಿದ ಅಮ್ಮ ಆ ಸಾಕುಪ್ರಾಣಿಗಳ ನಡುವೆಯೂ ಬದುಕಿ ತೋರಿಸಲು ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆಗೆ ಇಂದಿಗೂ ನನಗೆ ಉತ್ತರ ದೊರೆತಿಲ್ಲ. ನಿತ್ಯ ಪೂಜೆ ಇಲ್ಲದ ದಿನವನ್ನೇ ಕಾಣದ ಒಂದು ಹೆಣ್ಣು ತನ್ನ ಸಹಜ ಬದುಕಿನಿಂದ ಹೊರತಾಗಿ,  ಬೆಳಗಾದರೆ ಕೋಳಿ ಹುಂಜಗಳ, ಮೇಕೆ ಕುರಿಗಳ ಸದ್ದಿನೊಡನೆ ಬದುಕಿದ್ದಾದರೂ ಹೇಗೆ ? ಈ ಪ್ರಶ್ನೆ 47 ವರ್ಷಗಳ ನಂತರವೂ ನನ್ನ ಮನದಾಳದ ಪ್ರಶ್ನೆಯಾಗಿಯೇ ಉಳಿದಿದೆ. ರೈಸ್‌ಮಿಲ್‌ ಮಾಲೀಕರ ಸ್ನೇಹಪೂರ್ವಕ ಒಡನಾಟದಲ್ಲಿ ಕೆಲಕಾಲ ಅಲ್ಲಿದ್ದು ನಂತರ ಹಿಂದಿರುಗಿದ್ದರು. ಆ ನಂತರ ಎರಡು ವರ್ಷಗಳೊಳಗೆ ಅಪ್ಪ ಇಲ್ಲವಾಗಿದ್ದು ಬೇರೆಯೇ ಕತೆ.

ಎರಡು ತಿಂಗಳ ಹಿಂದೆ ಗೆಳೆಯ ರಂಗಸ್ವಾಮಿ ನನ್ನನ್ನು ಅಲ್ಲಿಗೆ ಕರೆದುಕೊಂಡುಹೋಗಿದ್ದರು. ರೈಸ್‌ ಮಿಲ್‌ ಮುಚ್ಚಿತ್ತು. ಕಟ್ಟಡ ಹಾಗೇ ಇತ್ತು. ಊರು ಬದಲಾಗಿತ್ತು. ಅಂದು ಇದ್ದವರು ಇಂದು ಇರಲಿಲ್ಲ. ನೆನಪುಗಳು ಕಂಬನಿಯಾಗಿ ಸಣಬ ಹಳ್ಳಿಯ ಮಣ್ಣೊಳಗೆ ಬೆರೆತಿದ್ದವು.

ಈಗ ನೆನಪಾಗುತ್ತಿರುವುದು ಆಕೆಯಲ್ಲಿದ್ದ ಸ್ವಾಭಿಮಾನ ಮತ್ತು ಬದುಕಲು ಬೇಕಾದ ಛಲ.  ಈ ಘಟನೆಯ ನಂತರವೂ ತಾನು ಬದುಕಿದ್ದ 15 ವರ್ಷಗಳಲ್ಲಿ ಒಮ್ಮೆಯೂ ಆ ದಿನಗಳನ್ನು ನೆನೆಯದೆ ಇದ್ದುದು ಇಂದಿಗೂ ಅಚ್ಚರಿ ಮೂಡಿಸುವ ಅಂಶ. ಅಮ್ಮ ಎಂದರೆ ಹೀಗಿರಬೇಕು ಎಂದು ಹೇಳುವ ಮುನ್ನ ಯೋಚಿಸಬೇಕಾದ್ದು ಆಕೆ ಅನುಭವಿಸಿರಬಹುದಾದ ತುಮುಲಗಳು, ಆತಂಕಗಳು ಮತ್ತು ಮನದಾಳದ ವೇದನೆಯ ಬೆಟ್ಟಗಳ ಬಗ್ಗೆ. ಬಹುಶಃ ತಾಯಿಯ ಹೃದಯಾಂತರಾಳದಲಿ ಅಡಗಿರುವ ಇವುಗಳನ್ನು ಅರಿಯಲು ಸಾಧ್ಯವೇ ಇಲ್ಲವೇನೋ ಎನಿಸುತ್ತದೆ.

ಆದರೂ ಮನಸು ಕೂಗಿ ಹೇಳುತ್ತಿದೆ “ ಅಮ್ಮಾ ” ಯು ಆರ್‌ ಗ್ರೇಟ್.‌

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

Disclaimer:

www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.

ಇತ್ತೀಚಿನ ಸುದ್ದಿ