ಜನವಸತಿ ಪ್ರದೇಶದಲ್ಲಿ  ಕೊವಿಡ್ ಕೇಂದ್ರ; ಪೊಲೀಸ್ ಮತ್ತು ಸಾರ್ವಜನಿಕರ ನಡುವೆ ವಾಗ್ವಾದ - Mahanayaka

ಜನವಸತಿ ಪ್ರದೇಶದಲ್ಲಿ  ಕೊವಿಡ್ ಕೇಂದ್ರ; ಪೊಲೀಸ್ ಮತ್ತು ಸಾರ್ವಜನಿಕರ ನಡುವೆ ವಾಗ್ವಾದ

muddebihal
29/05/2021

ಮುದ್ದೇಬಿಹಾಳ: ಪಟ್ಟಣದ ಜ್ಞಾನಭಾರತಿ ಶಾಲೆ ಹತ್ತಿರ ಇರುವ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೇಲ್‍ ನಲ್ಲಿ ಪ್ರಾರಂಭಿಸಲು ಉದ್ದೇಶಿಸಿರುವ ಕೋವಿಡ್ ಕೇರ್ ಸೆಂಟರ್ ಅನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಹಾಸ್ಟೇಲ್ ಸುತ್ತಲೂ ಇರುವ ಪಿಲೇಕೆಮ್ಮನಗರ ಬಡಾವಣೆಯ ನಿವಾಸಿಗಳು ಆಗ್ರಹಿಸಿದ್ದಾರೆ.

ಶನಿವಾರ      ಹಾಸ್ಟೇಲ್ ಮುಂದೆ ಸೇರಿದ್ದ ಬಡಾವಣೆಯ ನಿವಾಸಿಗಳು ಸುತ್ತಮುತ್ತ ಜನವಸತಿ ಇದೆ. ಕೋವಿಡ್ ಸೋಂಕಿತರನ್ನು ಇಲ್ಲಿ ಇಡುವುದರಿಂದ ಎಲ್ಲರಿಗೂ ಹರಡಬಹುದಾಗಿದೆ. ಇಲ್ಲಿರುವವರು ಬಹಳಷ್ಟು ಜನ ಬಡವರಿದ್ದಾರೆ. ಅಕಸ್ಮಾತ್ ಸೋಂಕು ಹರಡಿದರೆ ಸಕಾಲಕ್ಕೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳುವುದು ಸಾಧ್ಯವಾಗುವುದಿಲ್ಲ. ಕೆಲವರ ಮನೆಗಳಲ್ಲಿ ಗರ್ಭಿಣಿಯರು, ಬಾಣಂತಿಯರು, ನವಜಾತ ಶಿಶುಗಳು ಇದ್ದಾರೆ. ಸೋಂಕಿತರನ್ನು ಜನವಸತಿ ನಡುವೆ ಇರುವ ಹಾಸ್ಟೇಲ್‍ಗೆ ತಂದು ಸೇರಿಸುವುದು ಸಮರ್ಥನೀಯವಲ್ಲ. ಅವರನ್ನು ಊರ ಹೊರಗಿನ ಶಾಲೆ, ಹಾಸ್ಟೇಲುಗಳಲ್ಲಿ ಇಟ್ಟು ಉಪಚಾರ ಮಾಡಿ. ಒಟ್ಟಿನಲ್ಲಿ ಇಲ್ಲಿ ತಂದು ಇಡಬೇಡಿ ಎಂದು ಸಂಬಂಧಿಸಿದವರನ್ನು ಆಗ್ರಹಿಸಿದರು.

ಜನ ಗುಂಪುಗೂಡಿ ತಕರಾರು ಮಾಡುತ್ತಿರುವ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೊಲೀಸ್ ಸಿಬ್ಬಂದಿಗಳಾದ ಎಎಸೈ ಎಂ.ಪಿ.ಹೊಕಾಳೆ, ಪೇದೆಗಳಾದ ಸಂಗನಗೌಡ ಬಿರಾದಾರ, ಚಿದಾನಂದ ಸುರಗಿಹಳ್ಳಿ, ಸಲೀಮ ಹತ್ತರಕಿಹಾಳ, ಎಂ.ಎಂ.ಮಠಪತಿ ಅವರು ಜನರ ಮನವೊಲಿಸಲು ಸಾಕಷ್ಟು ಪ್ರಯತ್ನ ಪಟ್ಟರು. ಹಾಸ್ಟೇಲ್‍ಗೆ ಸುತ್ತಲೂ ಕಂಪೌಂಡ್ ಇದೆ. ಸೋಂಕಿತರು ಕೋಣೆ ಬಿಟ್ಟು ಹೊರಗೆ ಬರದಂತೆ ಪೊಲೀಸರು ಬಂದೋಬಸ್ತ್ ವಹಿಸುತ್ತಾರೆ. ಸರ್ಕಾರಿ ಆಸ್ಪತ್ರೆ ಪಕ್ಕದಲ್ಲೇ ಇರುವುದರಿಂದ ಪೇಶಂಟ್‍ಗಳಿಗೆ ಏನಾದರೂ ತೊಂದರೆ ಕಂಡುಬಂದಲ್ಲಿ ತುರ್ತು ಚಿಕಿತ್ಸೆ ನೀಡಲು ಅವಕಾಶ ಇದೆ. ತಕರಾರು ಮಾಡದೆ ಸಹಕರಿಸಬೇಕು ಎಂದು ಮನವೊಲಿಕೆಗೆ ಯತ್ನಿಸಿದರು.

ಈ ವೇಳೆ ನಿವಾಸಿಗಳು ಮತ್ತು ಪೊಲೀಸರ ಮಧ್ಯೆ ವಾಗ್ವಾದ ನಡೆಯಿತು. ಇಲ್ಲಿ ಕೇರ್ ಸೆಂಟರ್ ಪ್ರಾರಂಭಿಸುವುದರಿಂದ ಯಾರಿಗೂ, ಯಾವುದೇ ಸಮಸ್ಯೆ ಆಗೊಲ್ಲ. ಜಿಲ್ಲಾಧಿಕಾರಿಯವರ ಆದೇಶವನ್ನು ಯಾರೂ ಮೀರುವಂತಿಲ್ಲ. ಸಧ್ಯಕ್ಕೆ ಎಲ್ಲರೂ ಇಲ್ಲಿಂದ ಹೊರಡಿ ಎಂದು ಎಲ್ಲರನ್ನೂ ಸ್ಥಳದಿಂದ ಕಳಿಸಿ ಪರಿಸ್ಥಿತಿ ನಿಯಂತ್ರಿಸಿದರು. ಇಷ್ಟಕ್ಕೆ ಸುಮ್ಮನಾಗದ ನಿವಾಸಿಗಳು ಸೋಮವಾರ ತಹಶೀಲ್ದಾರ್ ಭೇಟಿ ಮಾಡಿ ತಮ್ಮ ಆಕ್ಷೇಪ ಸಲ್ಲಿಸಲು ತೀರ್ಮಾನಿಸಿದರು.

mudde bihal

ಮುದ್ದೇಬಿಹಾಳ: ಪಿಲೇಕೆಮ್ಮನಗರದಲ್ಲಿ ಕೋವಿಡ್ ಕೇರ್ ಸೆಂಟರ್ ಮಾಡಲಿರುವ ಹಾಸ್ಟೇಲ್ ಕಟ್ಟಡ

ಇತ್ತೀಚಿನ ಸುದ್ದಿ