ನಾಗಮಂಗಲ ಗಲಭೆ ಪ್ರಕರಣ: ಅಪ್ಪ ಅರೆಸ್ಟ್, ಮಗ ಸ್ಟ್ರೋಕ್ ನಿಂದ ಸಾವು
ಮಂಡ್ಯ: ನಾಗಮಂಗಲದಲ್ಲಿ ಯಾರ ಸ್ವಾರ್ಥಕ್ಕೆ ಗಲಭೆ ನಡೆಸಲಾಯ್ತೋ ಗೊತ್ತಿಲ್ಲ, ಗಲಭೆಯ ಉರಿಯಲ್ಲಿ ಯಾರು ಚಳಿಕಾಯಿಸಿಕೊಂಡರೋ ಗೊತ್ತಿಲ್ಲ, ಆದ್ರೆ, ಈ ಗಲಭೆಯಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಸಿಲುಕಿಕೊಂಡವರು ಇದೀಗ ನಿರಂತರ ಹಿಂಸೆ, ನಷ್ಟವನ್ನು ಅನುಭವಿಸುವಂತಾಗಿದೆ.
ಹೌದು..! ನಾಗಮಂಗಲ ಗಲಭೆ ವಿಚಾರದಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗುವ ಭೀತಿಯಿಂದ ಗ್ರಾಮ ತೊರೆದಿದ್ದ ಯುವಕನೊಬ್ಬ ಸ್ಟ್ರೋಕ್ ನಿಂದಾಗಿ ಪ್ರಾಣವನ್ನೇ ಕಳೆದುಕೊಂಡಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಕಿರಣ್ ಮೃತಪಟ್ಟ ಯುವಕನಾಗಿದ್ದಾನೆ. ನಾಗಮಂಗಲದಲ್ಲಿ ಗಲಭೆಗೆ ಸಂಬಂಧಿಸಿದಂತೆ ಭದ್ರಿ ಕೊಪ್ಪಲು ಗ್ರಾಮದ ಕುಮಾರ್ ಎಂಬುವವರನ್ನ ಪೊಲೀಸರು ಬಂಧಿಸಿ A17 ಆರೋಪಿಯನ್ನಾಗಿ ಮಾಡಿದ್ದಾರೆ. ಆದರೆ ಈ ಮಧ್ಯೆ ಕುಮಾರ್ ಮಗ ಕಿರಣ್ ಬಂಧನದ ಭೀತಿಯಿಂದ ಗ್ರಾಮ ತೊರೆದು ಎಸ್ಕೇಪ್ ಆಗಿದ್ದ. ತಂದೆಯನ್ನ ಪೊಲೀಸರು ಜೈಲಿಗೆ ಕಳುಹಿಸಿದ್ರಿಂದಾಗಿ ಕಿರಣ್ ಬಹಳಷ್ಟು ವಿಚಲಿತನಾಗಿದ್ದನಂತೆ.
ಗುರುವಾರ ಕಿರಣ್ ಗೆ ಸ್ಟ್ರೋಕ್ ಆಗಿದೆ. ಹೀಗಾಗಿ ಆತನನ್ನ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕಿರಣ್ ಇಂದು ಸಾವನ್ನಪ್ಪಿದ್ದಾನೆ.
ಕಿರಣ್ ನ ಮೃತದೇಹವನ್ನ ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ನಾಗಮಂಗಲದ ಭದ್ರಿಕೊಪ್ಪಲಿಗೆ ಕಿರಣ್ ನ ಮೃತದೇಹ ತಲುಪಿದ ವೇಳೆ ಕುಟುಂಬಸ್ಥರ ಆಕ್ರಂದನ ಹೃದಯ ಕರಗಿಸುವಂತಿತ್ತು. ಕಿರಣ್ ನ ನಿಧನಕ್ಕೆ ಭದ್ರಿಕೊಪ್ಪಲು ಜನರು ಕಂಬನಿ ಮಿಡಿದಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: