ನಕ್ಸಲ್ ಲಕ್ಷ್ಮೀ ಉಡುಪಿ ಎಸ್ ಪಿ ಕಚೇರಿಯಲ್ಲಿ ಶರಣು

ಉಡುಪಿ: ಅಮಾಸೆಬೈಲು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತೊಂಬಟ್ಟು ಇರ್ಕಿಗದ್ದೆಯ ಶಂಕಿತ ನಕ್ಸಲ್ ಲಕ್ಷ್ಮೀ ಅವರು ಇಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಆಗಮಿಸಿ ಶರಣಾಗಿದ್ದಾರೆ.
ಆಂಧ್ರದಲ್ಲಿ ಪತಿ ಜೊತೆ ವಾಸವಾಗಿದ್ದ ಲಕ್ಷ್ಮೀ ಅವರು ಕರ್ನಾಟಕದಲ್ಲಿ ನಕ್ಸಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಕರ್ನಾಟಕದಲ್ಲಿ ಅವರ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿದ್ದವು. ಇದೀಗ ಅವರು ನಕ್ಸಲ್ ಮಾರ್ಗವನ್ನು ತೊರೆದು ಸರ್ಕಾರದ ಮುಂದೆ ಶರಣಾಗಿದ್ದಾರೆ.
ಫೆ.2ರಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಆಗಮಿಸಿ ಲಕ್ಷ್ಮೀ ಶರಣಾಗಿದ್ದಾರೆ. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಹಾಜರಿದ್ದರು.
ನಕ್ಸಲ್ ಶರಣಾಗತಿ ಹಿನ್ನೆಲೆ ತನ್ನ ಕುಟುಂಬಸ್ಥರನ್ನು ಲಕ್ಷ್ಮೀ ಸಂಪರ್ಕಿಸಿದ್ದರು. ಕುಟುಂಬದ ಸದಸ್ಯರು ನಕ್ಸಲ್ ಶರಣಾಗತಿ ಹಾಗೂ ಪುನರ್ವಸತಿ ಸಮಿತಿಯ ಸದಸ್ಯರಾದ ಶ್ರೀಪಾಲ ಅವರನ್ನು ಸಂಪರ್ಕಿಸಿ ಲಕ್ಷ್ಮೀಯವರ ಇಚ್ಛೆಯನ್ನು ಅವರಿಗೆ ತಿಳಿಸಿದರು. ಕೂಡಲೇ ಉಡುಪಿಯ ಎಸ್ಪಿ ಕಚೇರಿಯನ್ನು ಸಂಪರ್ಕಿಸಿದ ಶ್ರೀಪಾಲ ಅವರು ಪೊಲೀಸರ ಸಹಕಾರ ಕೋರಿದರು.
ಈ ಎಲ್ಲಾ ಪ್ರಕ್ರಿಯೆ ನಂತರ, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್ ಅವರು ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಹಾಗೂ ರಾಜ್ಯ ಸರ್ಕಾರದೊಂದಿಗೆ ಮಾತನಾಡಿ, ಅನುಮತಿ ಪಡೆದು ಶರಣಾಗತಿಗೆ ಚಾಲನೆ ನೀಡಿದ್ದರು.
ಇಂದು ಬೆಳಗ್ಗೆ ಪೊಲೀಸ್ ಬಿಗಿ ಭದ್ರತೆಯೊಡನೆ, ತಮ್ಮ ಸಹೋದರ ವಿಠಲ ಪೂಜಾರಿ ಹಾಗೂ ನಕ್ಸಲ್ ಶರಣಾಗತಿ ಹಾಗೂ ಪುನರ್ವಸತಿ ಸಮಿತಿ ಸದಸ್ಯರಾದ ಶ್ರೀಪಾಲ, ಸಂಬಂಧಿಕರೊಂದಿಗೆ ಎಸ್ಪಿ ಕಚೇರಿಗೆ ಆಗಮಿಸಿದ ಲಕ್ಷ್ಮೀ ಪೊಲೀಸ್ ವರಿಷ್ಠಾಧಿಕಾರಿ ಮುಂದೆ ಶರಣಾದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BR3b3qhWZWaCzpD1m6N5uu