ಎಷ್ಟೇ ಚೀರಾಡಲಿ, ಬಟ್ಟೆ ಹರಿದುಕೊಳ್ಳಲಿ ರಾಜೀನಾಮೆ ನೀಡಲ್ಲ: ಬಿಜೆಪಿ ನಾಯಕರಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು
ಬೆಂಗಳೂರು: ಎಷ್ಟೇ ಚೀರಾಡಲಿ, ಬಟ್ಟೆ ಹರಿದುಕೊಳ್ಳಲಿ ನಾನು ರಾಜೀನಾಮೆ ನೀಡುವುದಿಲ್ಲ ಎಂದು ಬಿಜೆಪಿ ನಾಯಕರಿಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಈ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಸುವಂತೆ ಗೃಹ ಸಚಿವರಿಗೆ ನಾನು ಪತ್ರ ಬರೆದಿದ್ದೆ. ಗೃಹ ಸಚಿವರನ್ನ ಭೇಟಿಯಾಗಿ ಮನವಿ ಮಾಡಿದ್ದೆ. ಅದರಂತೆ ಇದೀಗ ಗೃಹ ಸಚಿವರು ಸಿಐಡಿ ತನಿಖೆಗೆ ಆದೇಶ ನೀಡಿದ್ದಾರೆ ಎಂದು ಅವರು ತಿಳಿಸಿದರು.
ಬಿಜೆಪಿಗೆ ಸಿಬಿಐ ಮೇಲೆ ಪ್ರೀತಿ ಜಾಸ್ತಿ. ಹಾಗಾಗಿ ಸಿಬಿಐ ತನಿಖೆ ಕೇಳುತ್ತಾರೆ. ಬಿಜೆಪಿಯವರು ಯಾರದ್ದೋ ತಲೆದಂಡವಾಗುತ್ತದೆ ಎಂದು ಕಾಯುತ್ತಿದ್ದಾರೆ. ಯಾವುದೇ ಕಾರಣಕ್ಕೂ ಯಾರ ತಲೆದಂಡವಾಗುವುದಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಅವರು ವಾಗ್ದಾಳಿ ನಡೆಸಿದರು.
ಕಲಬುರಗಿಗೆ ಬಿಜೆಪಿ ನಾಯಕರು ಮುತ್ತಿಗೆ ಹಾಕುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮುತ್ತಿಗೆ ಹಾಕಲಿ, ಯಾರು ಬೇಡ ಎಂದವರು. ನನ್ನ ವಿರುದ್ಧ ಏನಾದರೂ ದಾಖಲಾತಿ ಇದ್ದರೆ ತಂದು ಕೊಡಿ, ನಿಮಗೆ ನಾಚಿಕೆಯಾಗಬೇಕು, ಯಾಕೆ ಕಲಬುರಗಿಗೆ ಮುತ್ತಿಗೆ ಹಾಕುತ್ತೀರಿ ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ಪೋಕ್ಸೊ ಪ್ರಕರಣಕ್ಕೆ ನೊಟೀಸ್ ಕೊಟ್ಟಿದ್ದೀರಾ? ಮುನಿರತ್ನ ಕೇಸ್ ನಲ್ಲಿ ಹೈಕಮಾಂಡ್ ನಾಯಕರು ಏನು ಕ್ರಮಕೈಗೊಂಡಿದ್ದಾರೆ? ಯತ್ನಾಳ್ ವಿರುದ್ಧ ಏನು ಕ್ರಮವಾಗಿದೆ? ರೇಣುಕಾಚಾರ್ಯ ವಿರುದ್ಧ ಏನು ಕ್ರಮವಾಗಿದೆ? ಎಂದು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ, ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಕವಡೆಕಾಸಿನ ಕಿಮ್ಮತ್ತು ನೀಡುವುದಿಲ್ಲ ಎಂದು ವ್ಯಂಗ್ಯವಾಡಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: