ಜಾಗತಿಕ ಮಟ್ಟದಲ್ಲಿ ಪರಮಾಣು ಅಸ್ತ್ರಗಳದ್ದೇ ಆತಂಕ: ಅಮೆರಿಕದ ಆರೋಪಕ್ಕೆ ಭಾರತದತ್ತ ಕೈತೋರಿಸಿದ ಪಾಕ್!
ಇಸ್ಲಾಮಾಬಾದ್: ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳು ಮತ್ತು ಕ್ಷಿಪಣಿ ಸಾಮರ್ಥ್ಯಗಳು ಅಮೆರಿಕಕ್ಕೆ ಭದ್ರತಾ ಭೀತಿಯನ್ನು ಒಡ್ಡಬಹುದು ಎಂಬ ವಾಷಿಂಗ್ಟನ್ ನ ಹೇಳಿಕೆಯನ್ನು ಪಾಕಿಸ್ತಾನ ತೀವ್ರವಾಗಿ ತಿರಸ್ಕರಿಸಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಪಾಕಿಸ್ತಾನ, ತನ್ನ ಪರಮಾಣು ಕಾರ್ಯಕ್ರಮವು ಕೇವಲ ಆತ್ಮರಕ್ಷಣೆಗಾಗಿ ಮತ್ತು ಭಾರತದ ಅತಿಕ್ರಮಣವನ್ನು ತಡೆಯಲು ಮಾತ್ರ ಸೀಮಿತವಾಗಿದೆ ಎಂದು ಹೇಳುವ ಮೂಲಕ ಭಾರತದತ್ತ ಬೆರಳು ತೋರಿದೆ.
ಅಮೆರಿಕದ ಗುಪ್ತಚರ ಮುಖ್ಯಸ್ಥೆ ತುಳಸಿ ಗಬ್ಬಾರ್ಡ್ ಅವರು ಇತ್ತೀಚೆಗೆ ನೀಡಿದ ಹೇಳಿಕೆಯಲ್ಲಿ, ಇರಾನ್, ಚೀನಾ, ರಷ್ಯಾ ಮತ್ತು ಉತ್ತರ ಕೊರಿಯಾದಂತೆ ಪಾಕಿಸ್ತಾನ ಕೂಡ ಅಮೆರಿಕಕ್ಕೆ ದೊಡ್ಡ ಪರಮಾಣು ಭೀತಿಯನ್ನು ಒಡ್ಡುತ್ತಿರುವ ದೇಶಗಳಲ್ಲಿ ಒಂದಾಗಿದೆ ಎಂದು ಹೆಸರಿಸಿದ್ದರು. ಈ ರಾಷ್ಟ್ರಗಳು ಅಮೆರಿಕದ ನೆಲವನ್ನು ತಲುಪಬಲ್ಲ ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುತ್ತಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದರು.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಅಧಿಕಾರಿ ತಾಹಿರ್ ಹುಸೇನ್ ಅಂದ್ರಾಬಿ, “ಪಾಕಿಸ್ತಾನದ ಕ್ಷಿಪಣಿ ಕಾರ್ಯಕ್ರಮವು ಅಂತರಖಂಡೀಯ ವ್ಯಾಪ್ತಿಗಿಂತ (ICBM) ತೀರಾ ಕಡಿಮೆಯಿದೆ ಮತ್ತು ಇದು ಕೇವಲ ಭಾರತದ ವಿರುದ್ಧದ ‘ವಿಶ್ವಾಸಾರ್ಹ ಕನಿಷ್ಠ ತಡೆಗೋಡೆ’ (Credible Minimum Deterrence) ಸಿದ್ಧಾಂತಕ್ಕೆ ಬದ್ಧವಾಗಿದೆ,” ಎಂದು ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ತಾನವು ತನ್ನ ಸಮರ್ಥನೆಯಲ್ಲಿ ಭಾರತದ ಕ್ಷಿಪಣಿ ಸಾಮರ್ಥ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಭಾರತವು 12,000 ಕಿಲೋಮೀಟರ್ ಗಳಿಗಿಂತ ಹೆಚ್ಚು ವ್ಯಾಪ್ತಿಯನ್ನು ಹೊಂದಿರುವ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಕೇವಲ ಪ್ರಾದೇಶಿಕ ಭದ್ರತೆಗೆ ಸಂಬಂಧಿಸಿದ್ದಲ್ಲ, ಬದಲಾಗಿ ಇಡೀ ನೆರೆಹೊರೆಯ ರಾಷ್ಟ್ರಗಳಿಗೆ ಮತ್ತು ಜಗತ್ತಿಗೆ ಆತಂಕಕಾರಿ ವಿಷಯವಾಗಿದೆ ಎಂದು ಪಾಕಿಸ್ತಾನ ಹೇಳಿದೆ.
ದಕ್ಷಿಣ ಏಷ್ಯಾದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಮತ್ತು ಪರಮಾಣು ಪೈಪೋಟಿ ಜಾಗತಿಕ ಮಟ್ಟದಲ್ಲಿ ಯಾವಾಗಲೂ ಚರ್ಚೆಯ ವಿಷಯವಾಗಿದೆ. ಇತ್ತೀಚಿನ ಅಮೆರಿಕದ ವರದಿಯು ಪಾಕಿಸ್ತಾನದ ಪರಮಾಣು ಭದ್ರತೆ ಮತ್ತು ಅದರ ಕ್ಷಿಪಣಿ ತಂತ್ರಜ್ಞಾನದ ಬೆಳವಣಿಗೆಯನ್ನು ಅಪಾಯಕಾರಿ ಎಂದು ಬಿಂಬಿಸಿರುವುದು ಇಸ್ಲಾಮಾಬಾದ್ ಅನ್ನು ರೊಚ್ಚಿಗೆಬ್ಬಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























