ಜನ ನಂಬುತ್ತಾರೆ ಅಂದ್ರೆ ಏನನ್ನು ಬೇಕಾದ್ರೂ ನಂಬಿಸ್ತಾರೆ: ಇಲ್ನೋಡಿ ಏಲಿಯನ್ ಗಾಗಿ ದೇವಸ್ಥಾನ!
ಜನರು ನಂಬುತ್ತಾರೆ ಅಂದ್ರೆ ಇಲ್ಲಿ ಏನನ್ನು ಬೇಕಾದ್ರೂ ನಂಬಿಸ್ತಾರೆ ಸ್ವಾಮಿ… ದೇವರಿಗೆ ಪೂಜೆ ಮಾಡಿಸಿದ್ದು ಸಾಕು ಇನ್ನು ಏಲಿಯನ್ ಗಳನ್ನು ಪೂಜಿಸಲು ಇದೀಗ ಜನ ಹೊರಟಿದ್ದಾರೆ.
ಹೌದು..! ತಮಿಳುನಾಡಿನ ವ್ಯಕ್ತಿಯೊಬ್ಬರು ಎಲಿಯನ್ ಗಾಗಿ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ. ಹೀಗೆಯೇ ಮುಂದುವರಿದರೆ ಅನ್ಯಗ್ರಹದ ಜೀವಿ ಎಲಿಯನ್ ಭೂಲೋಕದಲ್ಲಿ ದೇವರಾಗುವ ಎಲ್ಲ ಲಕ್ಷಣಗಳು ಕಾಣ್ತಿವೆ.
ಸೇಲಂನ ಮಲ್ಲಮೂಪಂಬಟ್ಟಿಯ ಲೋಗನಾಥನ್ ತಮ್ಮ ಅಲ್ಪ ಭೂಮಿಯಲ್ಲಿ ಏಲಿಯನ್ ದೇವಸ್ಥಾನ ನಿರ್ಮಿಸಿದ್ದಾರೆ. ಮಾತ್ರವಲ್ಲದೆ ಶಿವ, ಪಾರ್ವತಿ, ಮುರುಗನ್, ಕಾಳಿ ಮಾತೆಯ ಜೊತೆಗೆ ಏಲಿಯನ್ ಮೂರ್ತಿಯನ್ನು ಸ್ಥಾಪಿಸಿದ್ದಾರೆ.
ಅದರಲ್ಲೂ ಕಾಮಿಡಿ ಅಂದ್ರೆ, ನಾನು ಅನ್ಯಗ್ರಹದ ಜೀವಿಗಳೊಂದಿಗೆ ಮಾತನಾಡಿದ್ದೀನಿ, ದೇವಸ್ಥಾನ ನಿರ್ಮಾಣಕ್ಕೆ ಅನುಮತಿ ಪಡೆದಿದ್ದೇನೆ ಅಂತ ಲೋಗನಾಥನ್ ಹೇಳಿಕೊಂಡಿದ್ದಾರೆ. ಅಲ್ಲದೇ ನೈಸರ್ಗಿಕ ವಿಕೋಪ ಹೆಚ್ಚುತ್ತಿರುವ ಕಾರಣ ಅವುಗಳನ್ನು ತಡೆಯುವ ಶಕ್ತಿ ಅನ್ಯಗ್ರಹ ಜೀವಿಗಳಿಗಿವೆ ಅಂತ ಹೇಳಿದ್ದಾರೆ.
ಒಟ್ಟಿನಲ್ಲಿ ನಂಬುವ ಜನರಿದ್ದರೆ ನಂಬಿಸುವವರು ಇದ್ದೇ ಇರುತ್ತಾರೆ ಅನ್ನೋದಕ್ಕೆ ಈ ಘಟನೆ ಸಾಕ್ಷಿ. ಏನನ್ನು ತೋರಿಸಿ ದೇವರು ಅಂದ್ರೂ ಜನ ಕೈಮುಗಿದು, ಹರಕೆ ಹಾಕಿ ಪ್ರಸಾದ ಸ್ವೀಕರಿಸುತ್ತಾರೆ ಅನ್ನೋದು ಲೋಗನಾಥನ್ ನಂತಹವರಿಗೆ ಚೆನ್ನಾಗಿಯೇ ಗೊತ್ತಿದೆ. ಆಧುನಿಕತೆ ಬೆಳೆಯುತ್ತಿದ್ದಂತೆಯೇ ಜನರು ವೈಜ್ಞಾನಿಕವಾಗಿ ಚಿಂತಿಸುತ್ತಿದ್ದಾರೆ. ವೈಜ್ಞಾನಿಕ ವಿಚಾರಗಳ ಒಳಗೆ ಕೂಡ ಮೌಢ್ಯತೆಯನ್ನು ತುಂಬುವ ಪ್ರಯತ್ನಗಳು ಮುಂದುವರಿದಿದೆ. ಈಗೀಗ ಕಂಪ್ಯೂಟರ್ ನೋಡಿ ಭವಿಷ್ಯ ಹೇಳುವ ಜ್ಯೋತಿಷಿಗಳು, ಸ್ಕ್ಯಾನರ್ ಹಿಡಿದು ಭವಿಷ್ಯ ಹೇಳುವವರು ಕಾಣ ಸಿಗುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97